ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಆಮ್ ಆದ್ಮಿ ಆಕ್ರೋಶ

| Published : May 19 2024, 01:48 AM IST

ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಆಮ್ ಆದ್ಮಿ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಬ್ರೇಕ್‌ ಹಾಕಲುಏಕರೂಪದ ಮಾನದಂಡ ನಿಗದಿಗೆ ಆಪ್‌ ಆಗ್ರಹ ಮಾಡಿತಲ್ಲದೆ, ಜಿಲ್ಲಾಧಿಕಾರಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ನಗರದ ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ಮಿತಿ ಮೀರಿ ಹೆಚ್ಚಳ ಗೊಳಿಸಲಾಗಿದೆ ಎಂದು ಆಮ್ ಆದ್ಮಿಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಇ.ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಖಾಸಗಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಪ್ರವೇಶ ಶುಲ್ಕ ಹೆಚ್ಚಳ ಮಾಡುತ್ತಿದ್ದಾರೆ. ಹೆಚ್ಚಳ ಮಾಡಲು ಯಾವುದೇ ಮಾನದಂಡಗಳಿಲ್ಲ. ಅವರ ಪಾಡಿಗೆ ಅವರು ಹೆಚ್ಚಳ ಮಾಡಿಕೊಂಡು ಶೈಕ್ಷಣಿಕ ವ್ಯವಸ್ಥೆ ದುಬಾರಿ ಮಾಡುತ್ತಿದ್ದಾರೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೂಡಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದರ ಮೂಲಕ ಸರಿಯಾದ ರೀತಿಯಲ್ಲಿ ಪ್ರವೇಶ ಶುಲ್ಕ ನಿಗದಿ ಮಾಡುವಂತೆ ಒತ್ತಾಯಿಸಿದರು.

ಪೋಷಕರು ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಬೇಕೆಂದು ಇಷ್ಟ ಪಡುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಪ್ರತಿ ವರ್ಷ ತಮ್ಮ ಶಾಲೆಯ ಪ್ರವೇಶ ಶುಲ್ಕವನ್ನು 15ರಿಂದ 20ರಷ್ಟು ಹೆಚ್ಚಳ ಮಾಡುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಒಂದೆಡೆ ಸೀಟು ಸಿಗುತ್ತದೋ ಇಲ್ಲವೋ ಎಂಬ ಭೀತಿಯಲ್ಲಿ ಪೋಷಕರು ಸಾಲ ಮಾಡಿ ಹಣ ಹೊಂದಿಸುತ್ತಾರೆ. ತಮ್ಮ ಮಕ್ಕಳ ಭವಿಷ್ಯದ ಕನಸು ಕಾಣುತ್ತಾರೆ. ರಾಜ್ಯ ಸರ್ಕಾರ ದುಬಾರಿ ಶುಲ್ಕ ವಸೂಲು ಮಾಡುವುದಕ್ಕೆ ನಿಯಂತ್ರಣ ಹೇರಬೇಕು. ಬಡ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗದ ರೀತಿಯಲ್ಲಿ ನಿಗಧಿತ ಶುಲ್ಕವನ್ನು ಮಾತ್ರ ಪಡೆಯುವಂತೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

ಸರ್ಕಾರ ನಡೆಸುತ್ತಿರುವ ಶಾಲೆಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬೇಕಿದೆ. ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಮಕ್ಕಳ ಸೆಳೆಯುವ ಕೆಲಸ ಮಾಡಬೇಕು. ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಇಂತಿಷ್ಟು ಸೌಲಭ್ಯ ಎಂಬ ನಿಬಂಧನೆ ಮಾಡಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಬರಲು ಸಾಧ್ಯವಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ನಿಗಧಿಗೆ ಸಮಿತಿ ರಚನೆ ಮಾಡುವುದರ ಮೂಲಕ ಸರಿಯಾದ ರೀತಿ ಮಾನದಂಡ ನಿಗಧಿ ಮಾಡಬೇಕೆಂದು ಜಗದೀಶ್ ಒತ್ತಾಯಿಸಿದರು.

ಸೈಯದ್ ಷಾ ತನ್ವಿರ್, ಆಕ್ವರ್ ಖಾನ್, ರವಿ, ವಿಜಯ ಹಾಗೂ ಜಬೀವುಲ್ಲಾ ಸುದ್ದಿಗೋಷ್ಠಿಯಲ್ಲಿದ್ದರು.