ಸಾರಾಂಶ
ಆಯುಧ ಪೂಜೆ ಅಂಗವಾಗಿ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಹಬ್ಬದ ಪ್ರಯುಕ್ತ ಜನರು ತಮ್ಮ ವಾಹನಗಳು, ಅಂಗಡಿ ಮುಂಗಟ್ಟುಗಳಲ್ಲಿ ವಿಶೇಷ ಪೂಜೆ ಏರ್ಪಡಿಸಿ ಪರಸ್ಪರರು ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಆಯುಧಪೂಜೆ ಮತ್ತು ವಿಜಯದಶಮಿಯನ್ನು ಸಾರ್ವಜನಿಕರು ಶ್ರದ್ಧಾ- ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಿದರು.ಆಯುಧ ಪೂಜೆ ಅಂಗವಾಗಿ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಹಬ್ಬದ ಪ್ರಯುಕ್ತ ಜನರು ತಮ್ಮ ವಾಹನಗಳು, ಅಂಗಡಿ ಮುಂಗಟ್ಟುಗಳಲ್ಲಿ ವಿಶೇಷ ಪೂಜೆ ಏರ್ಪಡಿಸಿ ಪರಸ್ಪರರು ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ನವರಾತ್ರಿ ಕೊನೆಯ ದಿನ ವಿಜಯದಶಮಿಯಂದು ಜಿಲ್ಲೆಯ ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಬೆಳಗಿನಿಂದಲೇ ದೇವಾಲಯಗಳಲ್ಲಿ ದೇವರಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆ, ಹೋಮ- ಹವನಗಳು ನಡೆದವು. ನಗರದ ಶಕ್ತಿ ದೇವತೆ ಶ್ರೀ ಕಾಳಿಕಾಂಬ ದೇವಾಲಯ, ಶ್ರೀ ಚಾಮುಂಡೇಶ್ವರಿ ದೇವಾಲಯ, ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯ, ಶ್ರೀ ಗಂಗಾಧರೇಶ್ವರ ಸ್ವಾಮಿ ದೇಗುಲ ಸೇರಿದಂತೆ ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ನಂತರ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಳಕ್ಕೆ ಆಗಮಿಸಿದ್ದ ಭಕ್ತರಿಗೆ ಬನ್ನಿ ಪತ್ರೆಗಳನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. ಸಾರ್ವಜನಿಕರು ದೇವರ ದರ್ಶನ ಪಡೆದು ಪುನೀತರಾದರು.