ಜೆಡಿಎಸ್ ಪಕ್ಷದ ತೆನೆಹೊತ್ತ ಮಹಿಳೆ ಚಿಹ್ನೆ ರದ್ದುಪಡಿಸಿ: ಗೋಪಾಲಸ್ವಾಮಿ

| Published : May 05 2024, 02:08 AM IST

ಸಾರಾಂಶ

ನಮ್ಮ ರಾಜ್ಯದಲ್ಲಿ ಹಿಂದೆ ಉಮೇಶ್ ರೆಡ್ಡಿ ಒಬ್ಬರನ್ನು ನೋಡಿದ್ದೇವು. ಈಗ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ವಿಕೃತಕಾಮಿ ವಿಚಾರವಾಗಿ ಪ್ರಪಂಚದಲ್ಲೆ ಗಿನ್ನಿಸ್ ದಾಖಲೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಅಶ್ಲೀಲ ವಿಡಿಯೋ ಮಾಡಿ ಮಹಿಳೆಯರನ್ನು ಅವಮಾನಿಸಿರುವ ಘಟನೆ ನಡೆದಿರುವುದರಿಂದ ಜೆಡಿಎಸ್ ಪಕ್ಷದ ತೆನೆಹೊತ್ತ ಚಿಹ್ನೆಯನ್ನು ಚುನಾವಣಾ ಆಯೋಗ ರದ್ದುಪಡಿಸಬೇಕೆಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಜೆಡಿಎಸ್ ಪಕ್ಷವು ಹೊರೆಹೊತ್ತ ಮಹಿಳೆಯ ಚಿಹ್ನೆಯನ್ನು ಹಾಕಿಕೊಂಡಿದೆ. ಇಂತಹ ಅಶ್ಲೀಲ ವಿಡಿಯೋ ಘಟನೆಯಿಂದ ಇಡೀ ಮಹಿಳೆಯರನ್ನೇ ಅವಮಾನಿಸುವಂತಹ ಘಟನೆ ನಡೆದಿರುವುದರಿಂದ ಚುನಾವಣಾ ಆಯೋಗ ಆ ಚಿಹ್ನೆಯನ್ನು ರದ್ದುಪಡಿಸಬೇಕು ಎಂದರು. ಅಶ್ಲೀಲ ವಿಡಿಯೋ ವಿಚಾರವಾಗಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿ ಹೋಗಲು ಅವಕಾಶ ಕೊಟ್ಟವರು ಯಾರು? ಈ ಎಂಪಿ ಚುನಾವಣೆಯಲ್ಲಿ ಪ್ರಜ್ವಲ್ ಗೆದ್ದರೆ ಅಪಮಾನವಾದಂತೆ. ಎಸ್.ಐ.ಟಿ.ಯು ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು.

ನಮ್ಮ ರಾಜ್ಯದಲ್ಲಿ ಹಿಂದೆ ಉಮೇಶ್ ರೆಡ್ಡಿ ಒಬ್ಬರನ್ನು ನೋಡಿದ್ದೇವು. ಈಗ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ವಿಕೃತಕಾಮಿ ವಿಚಾರವಾಗಿ ಪ್ರಪಂಚದಲ್ಲೆ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಈ ವಿಕೃತಕಾಮಿಗೆ ಅವರ ತಂದೆ ರೇವಣ್ಣನವರೇ ಕಾರಣ ಎನಿಸುತ್ತದೆ. ಸಂಸದರಾಗಿ ಐದು ವರ್ಷಗಳಲ್ಲಿ ಯಾವ ಕೆಲಸಗಳನ್ನು ಮಾಡದೇ ಮನೆ, ತೋಟದಲ್ಲಿ ಏನೆನು ಮಾಡುತ್ತಿದ್ದರು. ನಮ್ಮ ಜಿಲ್ಲೆಯಲ್ಲಿ ದೊಡ್ಡ ದೊಡ್ಡ ನಾಯಕರು ಸಂಸದರಾಗಿ ಒಳ್ಳೆ ಕೆಲಸ ಮಾಡಿ ಜಿಲ್ಲೆಗೆ ತಮ್ಮ ಕೊಡುಗೆ ನೀಡಿದ್ದಾರೆ. ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರು ತಲೆಮರೆಸಿಕೊಂಡಿದ್ದು ಇಂತಹ ಕೃತ್ಯ ಮಾಡಿರುವ ಆತ ವಿಕೃತಕಾಮಿಯಾಗಿದ್ದಾನೆ. ತಕ್ಷಣವೇ ಆತನನ್ನು ಬಂಧಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಜ್ವಲ್ ರೇವಣ್ಣನ ಎಲ್ಲಾ ಕೃತ್ಯಗಳಿಗೆ ಪ್ರಮುಖ ಕಾರಣ ತಂದೆ ತಾಯಿಯಾದವರು. ಮೊದಲೇ ಮಕ್ಕಳ ಮೇಲೆ ನಿಗಾವಹಿಸಬೇಕಾಗಿತ್ತು. ಆಗ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಸಲಹೆ ನೀಡಿದರು.

ದೇವೇಗೌಡರು ಮುತ್ಸದ್ಧಿ ರಾಜಕಾರಣಿ ಇಂತಹ ಇಳಿ ವಯಸ್ಸಿನಲ್ಲಿ ಅವರ ಮನಸ್ಸಿಗೆ ಎಷ್ಟು ನೋವಾಗಿರಬಾರದು. ಅವರು ಹೋರಾಟದ ಮೂಲಕ ರಾಜಕಾರಣವನ್ನು ಆರಂಭಿಸಿ ಪ್ರಧಾನಿ ಹುದ್ದೆವರೆಗೂ ತಲುಪಿ ಜಿಲ್ಲೆಯ ಕೀರ್ತಿಯನ್ನು ಗಳಿಸಿದ್ದಾರೆ. ಆದರೆ ಮೊಮ್ಮಗ ಇಂತಹ ಕೃತ್ಯ ವ್ಯಸಗಿ ಜಿಲ್ಲೆಯ ಮಾನವನ್ನು ಹರಾಜು ಹಾಕಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ದ್ವಂದ್ವವಾಗಿದೆ. ಚುನಾವಣೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ನನ್ನ ಮಗನು. ಆತ ಸಣ್ಣಪುಟ್ಟ ತಪ್ಪು ಮಾಡಿರಬಹುದು, ಆತನನ್ನು ಕ್ಷಮಿಸಿ ಎಂದು ಹೇಳಿದ್ದರು. ಈಗ ಮಾನ ಹರಾಜು ಹಾಕುವುದು ಸಣ್ಣ ವಿಚಾರವೇ? ಅಲ್ಲದೆ ಆತ ದೇಶ ಬಿಟ್ಟು ಹೋಗಿದ್ದು, ಈ ಎಲ್ಲಾ ಘಟನೆಗಳು ನಡೆದರೂ ಕೂಡ ಅ ಕುಟುಂಬ ಇನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏಪ್ರಿಲ್ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ನಮ್ಮ ಅಭ್ಯರ್ಥಿ ಪರ ಶ್ರಮಿಸಿದ ಪಕ್ಷದ ಎಲ್ಲಾರಿಗೂ ಇದೆ ವೇಳೆ ಧನ್ಯವಾದಗಳನ್ನು ತಿಳಿಸಿದರು.