ಜೀತ ಪದ್ಧತಿ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿ: ಹಿರಿಯ ನ್ಯಾಯಾಧೀಶ ಮುಜಫರ್

| Published : Feb 12 2025, 12:31 AM IST

ಜೀತ ಪದ್ಧತಿ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿ: ಹಿರಿಯ ನ್ಯಾಯಾಧೀಶ ಮುಜಫರ್
Share this Article
  • FB
  • TW
  • Linkdin
  • Email

ಸಾರಾಂಶ

ಜೀತದಾಳುಗಳು ತಾನು ಆರ್ಥಿಕ ಹಾಗೂ ಇತರರ ಸಂಕಷ್ಟದ ಸ್ಥಿತಿಯಲ್ಲಿ ಪಡೆದಂತಹ ಅಲ್ಪ ಪ್ರಮಾಣದ ಸಾಲ ಹಾಗೂ ಅದರ ಬಡ್ಡಿ ತೀರಿಸಲು ಜೀವನ ಪೂರ್ತಿ ದುಡಿಮೆ ಮಾಡಬೇಕಾಗುತ್ತದೆ, ಹಲವು ಪ್ರಕರಣಗಳಲ್ಲಿ ತನ್ನ ಕುಟುಂಬವನ್ನು ಸಹ ಜೀತಕ್ಕೆ ಮುಡಿಪಾಗಿಡಬೇಕಾಗಿರುತ್ತದೆ, ಆದ್ದರಿಂದ ಜೀತಪದ್ಧತಿಯನ್ನು ಹೋಗಲಾಡಿಸಲು ಮಕ್ಕಳಿಗೆ ಶಿಕ್ಷಣ ಮುಖ್ಯವಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕೆಜಿಎಫ್‌ನ ಜೆಎಂಎಫ್‌ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಮುಜಫರ್ ಎ ಮಾಂಜರಿ ಹೇಳಿದರು.

ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಜೀತ ವಿಮುಕ್ತಿ, ಜೀತದಾಳುಗಳ ಬಿಡುಗಡೆ ಮತ್ತು ಪುನರ್ವಸತಿ ಹಾಗೂ ಕಾನೂನು ಕುರಿತು ವಿಚಾರ ಸಂಕೀರ್ಣವನ್ನು ಹಮ್ಮಿಕೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಿದೆ, ಆಗಲೇ ಇದನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ, ಅದಕ್ಕಾಗಿ ಯಾವುದೇ ಕಾರಣಕ್ಕೂ ನಿಷ್ಕಾಳಜಿತನ ವಹಿಸಬಾರದು, ಸರಕಾರ ಕೂಡ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಮಾಡುವುದು ನಮ್ಮ ಕರ್ತವ್ಯ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ್‌ಕುಮಾರ್ ಮಾತನಾಡಿ, ಜೀತದಾಳು ಸಾಲಮುಕ್ತ ಮಾಡಿ ಸೌಲಭ್ಯ ಒದಗಿಸಲು ಕಾಯ್ದೆ- ಕಾನೂನುಗಳಲ್ಲಿ ಅವಕಾಶವಿದೆ, ಜೀತ ವಿಮುಕ್ತಿ ಹೊಂದಿದವರಿಗೆ ದೊರೆಯುವ ಸರಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು,

ಯಾರನ್ನೇ ಆದರೂ ಜೀತದಾಳಾಗಿ ಇಟ್ಟುಕೊಂಡು, ಅಕ್ರಮವಾಗಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾದ, ಆಧುನಿಕ ಕಾಲದಲ್ಲೂ ಕೆಲವಡೆ ವರದಿಯಾಗಿರುವ ಈ ಅನಿಷ್ಠ ಪದ್ಧತಿ ನಿರ್ಮೂಲನೆಯಾಗಬೇಕಾದರೆ ಶಿಕ್ಷಣ ಮುಖ್ಯ ಪಾತ್ರ ವಹಿಸುತ್ತದೆ, ಜೀತ ಪದ್ಧತಿಗೆ ಸಂಬಂಧಿಸಿದಂತೆ ಇಂತಹ ಅಪರಾಧಗಳಿಗೆ ಕಾನೂನಿನಡಿ ಮೂರು ವರ್ಷ ಕಾರಾಗೃಹ ವಾಸ ಮತ್ತು ದಂಡವನ್ನು ವಿಧಿಸಬಹುದಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ಜೀತದಾಳುಗಳು ತಾನು ಆರ್ಥಿಕ ಹಾಗೂ ಇತರರ ಸಂಕಷ್ಟದ ಸ್ಥಿತಿಯಲ್ಲಿ ಪಡೆದಂತಹ ಅಲ್ಪ ಪ್ರಮಾಣದ ಸಾಲ ಹಾಗೂ ಅದರ ಬಡ್ಡಿ ತೀರಿಸಲು ಜೀವನ ಪೂರ್ತಿ ದುಡಿಮೆ ಮಾಡಬೇಕಾಗುತ್ತದೆ, ಹಲವು ಪ್ರಕರಣಗಳಲ್ಲಿ ತನ್ನ ಕುಟುಂಬವನ್ನು ಸಹ ಜೀತಕ್ಕೆ ಮುಡಿಪಾಗಿಡಬೇಕಾಗಿರುತ್ತದೆ, ಆದ್ದರಿಂದ ಜೀತಪದ್ಧತಿಯನ್ನು ಹೋಗಲಾಡಿಸಲು ಮಕ್ಕಳಿಗೆ ಶಿಕ್ಷಣ ಮುಖ್ಯವಾಗಿರುತ್ತದೆ, ಜೀತ ಪದ್ಧತಿಯಿಂದ ಮುಕ್ತಿ ಹೊಂದಿದವರಿಗೆ ಆಪ್ತ ಸಮಾಲೋಚನೆ ಮೂಲಕ, ಕೌಶಲ್ಯ ತರಬೇತಿ, ವಿದ್ಯಾಭ್ಯಾಸ, ವಸತಿ, ಉದ್ಯೋಗ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿಸಬಹುದು, ಅವರು ಸಹ ಎಲ್ಲರಂತೆ ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಕಲ್ಪಸಬೇಕೆಂದು ತಿಳಿಸಿದರು.

ತಾಲೂಕು ಪಂಚಾಯ್ತಿ ಇಒ ವೆಂಕಟೇಶಪ್ಪ ಮಾತನಾಡಿ, ತಾಲೂಕಿನಲ್ಲಿ ಜೀತ ಪದ್ಧತಿಯಿಂದ ೨೬ ಜನರು ಬಿಡುಗಡೆಗೊಂಡು ಜೀತ ವಿಮುಕ್ತರಾಗಿದ್ದಾರೆ, ಜೀತ ಪದ್ಧತಿಯಲ್ಲಿ ವಿಮುಕ್ತಗೊಂಡಿರುವವರಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಜೀವನ ನಡೆಸಲು ಬ್ಯಾಂಕ್‌ನಿಂದ ಸಾಲ, ಸರಕಾರದಿಂದ ಸಿಗುವ ಸೌಲತ್ತುಗಳನ್ನು ಕಲ್ಪಿಸಲಾಗಿದ್ದು, ಮಕ್ಕಳು ಮತ್ತು ವಯಸ್ಕರು ಕಾಣೆಯಾದ ಪ್ರಕರಣಗಳನ್ನು ಪತ್ತೆ ಹಚ್ಚಲು ಗ್ರಾಮಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ, ಈ ಸಮಿತಿಯು ಸಕ್ರಿಯವಾದಲ್ಲಿ ಮಕ್ಕಳು ಮತ್ತು ಮಾನವನ ಕಳ್ಳ ಸಾಗಾಣೆ ಮಾಡುವುದನ್ನು ಹಾಗೂ ಜೀತ ಪದ್ಧತಿಯನ್ನು ತಡೆಯಬಹುದೆಂದು ಅಭಿಪ್ರಾಯಪಟ್ಟರು, ಜೀತ ವಿಮುಕ್ತಿ ಸಮಿತಿಯೊಂದಿಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಿಕ್ಷಕರು ಸಹ ಕೈ ಜೋಡಿಸಬೇಕೆಂದು ಸಲಹೆ ನೀಡಿದರು.

ಜೀತ ವಿಮುಕ್ತಿ ಕಾರ್ಯಾಗಾರದಲ್ಲಿ ವಿಶೇಷ ಅತಿಥಿಗಳಾದ ಡಾ.ಕಿರಣ್‌ ಕಮಲ್ ಪ್ರಸಾದ್ ಹಾಗೂ ಮಹಿಳಾ ವಕೀಲರಾದ ಕಲೈಸೆಲ್ವಿ ಅವರು ಜೀತ ಮಿಮುಕ್ತಿ ಸವಿಸ್ತಾರವಾಗಿ ಮಾತನಾಡಿದರು.

ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ಕಾರ‍್ಯದರ್ಶಿ ನಾಗರಾಜ್, ಮನೋಹರ್, ಗ್ರಾಮ ಪಂಚಾಯ್ತಿ ಪಿಡಿಒಗಳು ಹಾಗೂ ಎಲ್ಲ ಇಲಾಖೆಗಳ ಸರಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.