ಸಾರಾಂಶ
ಶಿವಮೊಗ್ಗ: ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಿರುವುದನ್ನು ಖಂಡಿಸಿ ಫಲಾನುಭವಿಗಳು ಮಹಾನಗರ ಪಾಲಿಕೆ ಆಯುಕ್ತರ ಕಾರಿಗೆ ಮುತ್ತಿಗೆ ಹಾಕಿದ ಘಟನೆ ಜರುಗಿತು.
ಈ ವೇಳೆ ಶಾಸಕ ಎಸ್.ಎನ್.ಚನ್ನಬಸಪ್ಪ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ನಡುವೆ ಮಾತಿನ ಚಕಮಕಿ ನಡೆಯಿತು.ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ 638 ಆಶ್ರಯ ಮನೆಗಳ ಹಂಚಿಕೆಗೆ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮವನ್ನು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ಆದರೆ, ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಿರುವ ಕಾರಣ ಮನೆಗಳಿಗಾಗಿ ಕಳೆದ ಹಲವಾರು ವರ್ಷಗಳಿಂದ ಕಾದಿದ್ದ ಫಲಾನುಭವಿಗಳು, ಪಾಲಿಕೆ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶಗೊಂಡು ಆಯುಕ್ತರ ಕಾರಿಗೆ ಮುತ್ತಿಗೆ ಹಾಕಿದರು.ಎಂಎಲ್‌ಎ ಕರೆ ಕಟ್; ಡಿಸಿಗೆ ದೂರು:ಕಾರ್ಯಕ್ರಮ ದಿಢೀರ್ ರದ್ದಾದ ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಸ್.ಎನ್.ಚನ್ನಬಸಪ್ಪ ಕುವೆಂಪು ರಂಗಮಂದಿರಕ್ಕೆ ದೌಡಾಯಿಸಿದರು. ಮಹಾನಗರ ಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್ ಅವರಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಕರೆ ಮಾಡಿದಾಗ ಹಾರಿಕೆ ಉತ್ತರ ನೀಡಿ, ಕರೆ ಕಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆಯುಕ್ತರ ನಡೆಯಿಂದ ಆಕ್ರೋಶಗೊಂಡ ಶಾಸಕರು, ಕುವೆಂಪು ರಂಗಮಂದಿರದ ಮೆಟ್ಟಿಲುಗಳ ಮೇಲೆ ಫಲಾನುಭವಿಗಳ ಜೊತೆಗೆ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗೆ ಕರೆ ಮಾಡಿ ಕಮಿಷನರ್ ವಿರುದ್ಧ ದೂರು ತಿಳಿಸಿದರು.ಕೆಲವು ಹೊತ್ತಿನ ಬಳಿಕ ಕಮಿಷನರ್ ಡಾ.ಕವಿತಾ ಯೋಗಪ್ಪನವರ್ ಕುವೆಂಪು ರಂಗಮಂದಿರಕ್ಕೆ ಆಗಮಿಸಿದರು. ಈ ಸಂದರ್ಭ ಫಲಾನುಭವಿಗಳು ಪಾಲಿಕೆ ಆಯುಕ್ತರ ವಿರುದ್ಧ ಘೋಷಣೆ ಕೂಗಿದರು. ಶಾಸಕ ಚನ್ನಬಸಪ್ಪ ಮತ್ತು ಕಮಿಷನರ್ ಕವಿತಾ ಯೋಗಪ್ಪನವರ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ಥಳದಿಂದ ಕಮಿಷನರ್ ಹೊರಡುತ್ತಿದ್ದಂತೆ ಫಲಾನುಭವಿಗಳು ಆಕ್ರೋಶಗೊಂಡರು. ಕಮಿಷನರ್ ಕಾರಿಗೆ ಮುತ್ತಿಗೆ ಹಾಕಿದರು.ಕಾರಿನ ಮುಂದೆ ಮಲಗಿದ ಫಲಾನುಭವಿಗಳು ಕಮಿಷನರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋಟೆ ಠಾಣೆ ಪೊಲೀಸರು ಫಲಾನುಭವಿಗಳನ್ನು ಸಮಾಧಾನಪಡಿಸಿ ಕಾರಿಗೆ ದಾರಿ ಬಿಡಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ಪರಿಸ್ಥಿತಿ ಕೈ ಮೀರಿದ ಹಿನ್ನೆಲೆ ಡಿಎಆರ್‌ನಿಂದ ಹೆಚ್ಚುವರಿ ಪೊಲೀಸರನ್ನು ಕರೆಯಿಸಿಲಾಯಿತು. ಆ ಬಳಿಕ ಕಾರು ಇಳಿದು ಸ್ವಲ್ಪ ದೂರದವರೆಗೆ ನಡೆದು ಹೋದ ಪಾಲಿಕೆ ಕಮಿಷನರ್ ಬದಲಿ ಕಾರಿನಲ್ಲಿ ಪಾಲಿಕೆ ಕಚೇರಿಗೆ ತೆರಳಿದರು.ಆಯುಕ್ತರ ಕ್ರಮ ಅಕ್ಷಮ್ಯ: ಚನ್ನಬಸಪ್ಪಶಿವಮೊಗ್ಗ: ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ಸೂಚನೆಯಂತೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಅವರ ಆಶಯದಂತೆ ಏಕಾಏಕಿ ರದ್ದು ಮಾಡಿರುವ ಆಯುಕ್ತರ ಕ್ರಮ ಅಕ್ಷಮ್ಯ ಎಂದು ಶಾಸಕ ಎಸ್.ಎನ್ ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ 8 ವರ್ಷಗಳಿಂದ ಗೋವಿಂದಾಪುರ ಮತ್ತು ಗೋಪಿಶೆಟ್ಟಿಹಳ್ಳಿಯ ಆಶ್ರಯ ಬಡಾವಣೆಯ ಮನೆಗಳನ್ನು ಹಂಚಿಕೆ ಮಾಡುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಮೊದಲೇ ನಿಗದಿಯಂತೆ ಶನಿವಾರ 638 ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಏಕಾಏಕಿ ರದ್ದು ಮಾಡಿರುವ ಕಮಿಷನರ್ ಕ್ರಮ ಅಕ್ಷಮ್ಯ. ಈ ಕಾರ್ಯಕ್ರಮವನ್ನು ರದ್ದುಗೊಳಿಸಿ ಬಡವರ ಬದುಕಲ್ಲಿ ಚೆಲ್ಲಾಟವಾಡುತ್ತಿರುವುದು ಅತ್ಯಂತ ನೀಚ ಸಂಗತಿ ಎಂದು ತಿಳಿಸಿದ್ದಾರೆ.ಈ ಕಾರ್ಯಕ್ಕೆ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಶಿಕ್ಷಣ ಸಚಿವರು ಉತ್ತರಿಸಬೇಕಾಗಿದೆ. ಸಚಿವರು ಹಾಗೂ ಕಾಂಗ್ರೆಸ್ ಅಧ್ಯಕ್ಷರ ಕಾರ್ಯಕ್ರಮವನ್ನು ಮುಂದೂಡಿ ಎಂದು ಹೇಳಿರುವುದಾಗಿ ಸ್ವತಃ ಪಾಲಿಕೆ ಆಯುಕ್ತರು ಒಪ್ಪಿಕೊಂಡಿರುವುದು ವಿಪರ್ಯಾಸದ ಸಂಗತಿ. ಇಷ್ಟಾದರೂ ಆಯುಕ್ತರು ಬನ್ನಿ ಎಂದರೆ ಬರಲ್ಲ ಎನ್ನುವ ದಾಕ್ಷಿಣ್ಯದ ಮಾತುಗಳನ್ನಾಡುತ್ತಿರುವುದು ಆಡಳಿತದ ದುರಾವಸ್ಥೆಯ ಪರಮಾವಧಿ ಎಂದು ಆಕ್ರೋಶ ಹೊರಹಾಕಿದ್ದಾರೆ.ಕಾಂಗ್ರೆಸ್ ಪಕ್ಷದ ಕೈ ಗೊಂಬೆಯಾಗಿ ಬಡವರ ವಿರುದ್ಧವಾಗಿ ನಿಂತಿರುವ ಆಯುಕ್ತರೇ, ಆಶ್ರಯ ಸಮಿತಿ ಬದುಕಿದೆ. ಆಶ್ರಯ ಸಮಿತಿಯ ಅಧ್ಯಕ್ಷನಾಗಿ ನಾನು ಕೂಡಾ ಬದುಕಿದ್ದೇನೆ. ಆಶ್ರಯ ಯೋಜನೆಯ ಫಲಾನುಭವಿಗಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಡೆಯುತ್ತಲೇ ಇರುತ್ತದೆ ಎಂದು ತಿಳಿಸಿದ್ದಾರೆ.