ಅಧಿಕಾರಿಗಳ ಗೈರು ಮೆಸ್ಕಾಂ ಜನಸಂಪರ್ಕ ಸಭೆ ಬಹಿಷ್ಕಾರ

| Published : Sep 13 2024, 01:43 AM IST

ಸಾರಾಂಶ

ಬಾಳೆಹೊನ್ನೂರು, ಮೆಸ್ಕಾಂ ಬಾಳೆಹೊನ್ನೂರು ಉಪವಿಭಾಗ ವ್ಯಾಪ್ತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಹಕರ ಜನ ಸಂಪರ್ಕ ಸಭೆಗೆ ಗೈರು ಹಾಜರಾದ ಹಿರಿಯ ಅಧಿಕಾರಿಗಳ ಆಕ್ರೋಶಗೊಂಡ ಗ್ರಾಮಸ್ಥರು ಘೋಷಣೆ ಕೂಗಿ ಸಭೆಯನ್ನು ಬಹಿಷ್ಕರಿಸಿದರು.

ಜನರಿಗೆ ಸ್ಪಂದಿಸದ ಮೆಸ್ಕಾಂ ಜೆಇ: ಆರೋಪ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮೆಸ್ಕಾಂ ಬಾಳೆಹೊನ್ನೂರು ಉಪವಿಭಾಗ ವ್ಯಾಪ್ತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಹಕರ ಜನ ಸಂಪರ್ಕ ಸಭೆಗೆ ಗೈರು ಹಾಜರಾದ ಹಿರಿಯ ಅಧಿಕಾರಿಗಳ ಆಕ್ರೋಶಗೊಂಡ ಗ್ರಾಮಸ್ಥರು ಘೋಷಣೆ ಕೂಗಿ ಸಭೆಯನ್ನು ಬಹಿಷ್ಕರಿಸಿದರು.ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಗುರುವಾರ ಕರೆದಿದ್ದ ಜನಸಂಪರ್ಕ ಸಭೆಯಲ್ಲಿ ಮೆಸ್ಕಾಂ ಸೂಪರಿಂಟೆಂಡ್ ಎಂಜಿನಿಯರ್ (ಎಸ್.ಇ) ಹಾಗೂ ಎಕ್ಸಿಕ್ಯೂಟಿವ್ ಎಂಜಿನಿಯರ್ (ಇಇ) ಪಾಲ್ಗೊಂಡು ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು. ಆದರೆ ಸ್ಥಳದಲ್ಲಿ ಮೆಸ್ಕಾಂ ಎಇಇ, ಜೆಇ, ಸಹಾಯಕ ಲೆಕ್ಕಾಧಿಕಾರಿ ಮಾತ್ರ ಇದ್ದರು. ಇದರಿಂದ ಆಕ್ರೋಶಗೊಂಡ ಗ್ರಾಹಕರು ಸ್ಥಳಕ್ಕೆ ಮೆಸ್ಕಾಂ ಎಸ್‌ಇ, ಇಇ ಬಂದು ಸಭೆ ನಡೆಸಬೇಕು. ಅವರು ಸ್ಥಳಕ್ಕೆ ಬರದಿದ್ದಲ್ಲಿ ಸಭೆ ಮುಂದುವರಿಯಲು ಬಿಡುವುದಿಲ್ಲ ಅರ್ಧಕ್ಕೆ ಬಹಿಷ್ಕರಿಸುತ್ತೇವೆ ಎಂದು ಪಟ್ಟು ಹಿಡಿದರು.ಬಳಿಕ ಮೆಸ್ಕಾಂ ಎಇಇ ಎಚ್.ಪಿ.ಗೌತಮ್ ಸಭೆಯನ್ನು ಸೆ.19ರ ಗುರುವಾರ ಪಟ್ಟಣದ ಲಯನ್ಸ್ ಕ್ಲಬ್‌ನ ಸಭಾ ಭವನದಲ್ಲಿ ನಡೆಸಲಾಗುವುದು ಎಂದು ಪ್ರಕಟಿಸಿದರು.

ಬಿ.ಕಣಬೂರು ಗ್ರಾಪಂ ಸದಸ್ಯ ಬಿ.ಸಿ.ಸಂತೋಷ್‌ಕುಮಾರ್ ಸಭೆ ಆರಂಭದಲ್ಲಿ ಮಾತನಾಡಿ, ಬಾಳೆಹೊನ್ನೂರು ಮೆಸ್ಕಾಂ ಜೆಇ ಗ್ರಾಹಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕರೆ ಮಾಡಿದರೆ ಉಡಾಫೆಯಾಗಿ ವರ್ತಿಸುತ್ತಿದ್ದಾರೆ. ಬಿ.ಕಣಬೂರು ಗ್ರಾಪಂ ವ್ಯಾಪ್ತಿ ಅಕ್ಷರನಗರದಲ್ಲಿ ಸೆ.5ರಂದು ಟಿಸಿ ಹಾಳಾಗಿದ್ದು, ಒಂದು ವಾರ ಕಳೆದರೂ ಹೊಸ ಟಿಸಿ ಅಳವಡಿಸಲು ಮುಂದಾಗಿಲ್ಲ. ಕುಡಿಯುವ ನೀರಿಗೆ 24 ಗಂಟೆಯೊಳಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಯಮವಿದ್ದರೂ ಪಾಲಿಸಿಲ್ಲ ಎಂದರು.

ಮೆಸ್ಕಾಂನವರು ಟಿಸಿ ಅಳವಡಿಸದ ಹಿನ್ನೆಲೆ ಅಂತಿಮವಾಗಿ ನಾನೇ ಸ್ವಂತ ಖರ್ಚಿನಿಂದ ಕೊಪ್ಪದಿಂದ ಟಿಸಿ ತರಲು ವಾಹನ ಕಳುಹಿ ಅಲ್ಲಿಂದ ಟಿಸಿ ತಂದರೂ ಅಳವಡಿಸಲು ಸಹ ಜೆಇ ವಿಳಂಭ ಮಾಡಿದ್ದಾರೆ. ಕುಡಿವ ನೀರಿನ ಸಮಸ್ಯೆ ಹೀಗಾದರೆ ಜನಪ್ರತಿನಿಧಿಗಳು ಗ್ರಾಮಸ್ಥರಿಗೆ ಹೇಗೆ ಉತ್ತರಿಸುವುದು? ಜನರ ಕಷ್ಟಕ್ಕೆ ಸ್ಪಂದಿಸದ ಜೆಇ ಅವಶ್ಯಕತೆ ನಮಗಿಲ್ಲ ಎಂದು ಹೇಳಿದರು.ಮೆಸ್ಕಾಂ ಕಚೇರಿಯಲ್ಲಿ ಸೆ.12ರಂದು ನಡೆದ ಜನಸಂಪರ್ಕ ಸಭೆ ಬಗ್ಗೆ ಕೇವಲ 2 ದಿನ ಮುಂಚಿತವಾಗಿ ಪ್ರಕಟಿಸಿದ್ದು, ಮೆಸ್ಕಾಂ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದಿದ್ದವರು ದಿಢೀರ್‌ ಸಭೆಯನ್ನು ಲಯನ್ಸ್ ಭವನಕ್ಕೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ. ಗ್ರಾಹಕರು ಸಭೆಗೆ ಬರಬಾರದು ಎಂಬುದೇ ಇದರ ಉದ್ದೇಶವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೆಸ್ಕಾಂನಲ್ಲಿ ಹಲವು ಗಂಭೀರ ಸಮಸ್ಯೆಗಳಿದ್ದು, ಇದಕ್ಕೆ ಉತ್ತರಿಸಬೇಕಾದ ಹಿರಿಯ ಅಧಿಕಾರಿಗಳು ಸಭೆಗೆ ಬಾರದೆ ಬೇಜವಾಬ್ದಾರಿ ತೋರಿದ್ದಾರೆ. ಆದ್ದರಿಂದ ಇಂದು ಸಭೆ ಮುಂದುವರೆಸಲು ಬಿಡುವುದಿಲ್ಲ. ಪುನಃ ಮತ್ತೊಮ್ಮೆ ಸಭೆ ಕರೆಯ ಬೇಕು. ಸ್ಥಳೀಯ ಗ್ರಾಪಂಗಳಿಗೆ ತಿಳಿಸಿ ಆಟೋ ಮೂಲಕ ಪ್ರಚಾರ ಮಾಡಬೇಕು ಎಂದು ಹೇಳಿದರು.ಎನ್.ಆರ್.ಪುರದ ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಮಾತನಾಡಿ, ಕೇವಲ 3 ತಿಂಗಳ ಹಿಂದೆ ಕರ್ತವ್ಯಕ್ಕೆ ಬಂದ ಮೆಸ್ಕಾಂ ಜೆಇ ವಿರುದ್ಧ ಹಲವು ದೂರುಗಳಿದ್ದು, ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳ ನಡವಳಿಕೆ ಉತ್ತಮವಾಗಿರಬೇಕು. ನಮಗೆ ಅಧಿಕಾರ ಇದೆ ಎಂದು ದರ್ಪ ತೋರುವುದು ಸರಿಯಲ್ಲ. ಕಚೇರಿ, ಸಭೆಗೆ ಬರುವಾಗ ಗುರುತಿನ ಚೀಟಿ ಹಾಕಿಕೊಂಡು ಬಂದಿಲ್ಲ. ನಿಮ್ಮನ್ನು ಅಧಿಕಾರಿ ಎಂದು ಹೇಗೆ ಗುರುತು ಹಿಡಿಯುವುದು. ಜನರ ಕೆಲಸ ಮಾಡಲು ಆಗದಿದ್ದರೆ ಇಲಾಖಾ ಸೇವೆಗೆ ಏಕೆ ಸೇರಿದ್ದೀರಿ? ಬೇರೆ ಕೆಲಸ ಹುಡುಕಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.ಮಾಗುಂಡಿ ಭಾಗದಲ್ಲಿ ಇತ್ತೀಚೆಗೆ 13 ದಿನ ವಿದ್ಯುತ್ ಇರಲಿಲ್ಲ. ಇದರಿಂದ ಆ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಆದ ನಷ್ಟ ವನ್ನು ತುಂಬಿಕೊಡುವುದು ಯಾರು? ಗ್ರಾಹಕರ ನಷ್ಟ ನೀವು ಭರಿಸುತ್ತೀರಾ ಅಥವಾ ವಿದ್ಯುತ್ ಇಲ್ಲವೆಂದು ನಿಮ್ಮ ಸಂಬಳ ಏನಾದರೂ ಕಡಿತವಾಗಿದೆಯಾ? ಜನರಿಗೆ ವಿದ್ಯುತ್ ನೀಡದೆ ಸಂಬಳ ಪಡೆಯಲು ಹೇಗೆ ಮನಸ್ಸು ಬರುತ್ತದೆ ಎಂದು ಪ್ರಶ್ನಿಸಿದರು.ಮಾಗುಂಡಿ ಗ್ರಾಪಂ ಸದಸ್ಯ ಸುಬ್ಬೇಗೌಡ ಮಾತನಾಡಿ, ಬಾಳೆಹೊನ್ನೂರಿನಿಂದ ಮಾಗುಂಡಿ ಗ್ರಾಮ 12 ಕಿಮೀ ದೂರವಿದ್ದು, ಇಲ್ಲಿ ಪವರ್‌ಮ್ಯಾನ್ ಇಲ್ಲ. ಅಲ್ಲಿ ಸಮಸ್ಯೆಯಾದರೆ ಬಾಳೆಹೊನ್ನೂರಿನಿಂದ ಪವರ್ ಮ್ಯಾನ್ ಬರಬೇಕು. ಸಮಸ್ಯೆಯಾದಾಗ ಜೆಇಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.ಮೆಸ್ಕಾಂ ಎಇಇ ಗೌತಮ್, ಸಹಾಯಕ ಲೆಕ್ಕಾಧಿಕಾರಿ ಸತೀಶ್, ಜೆಇ ಗಣೇಶ್, ಗುತ್ತಿಗೆದಾರರಾದ ಮಂಜುನಾಥ್ ತುಪ್ಪೂರು, ನಿಖಿಲೇಶ್, ನಿರಂಜನ್, ದೊರೈ, ಸಂತೋಷ್‌ಕ್ರಾಸ್ತಾ, ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ಧರ್ಮಪ್ಪಗೌಡ, ಬಳಕೆದಾರರ ವೇದಿಕೆ ಸಂಚಾಲಕ ಹಿರಿಯಣ್ಣ, ಮೆಸ್ಕಾಂ ಗ್ರಾಹಕರಾದ ಸೈಯ್ಯದ್ ಅಲವಿ, ಎನ್.ಪಿ.ಮುಸ್ತಫ ಹಾಜರಿದ್ದರು.೧೨ಬಿಹೆಚ್‌ಆರ್ ೨:

ಬಾಳೆಹೊನ್ನೂರು ಲಯನ್ಸ್ ಭವನದಲ್ಲಿ ಆಯೋಜಿಸಿದ್ದ ಮೆಸ್ಕಾಂ ಗ್ರಾಹಕರ ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು.