ಸಾರಾಂಶ
ಸೂಳೇಬಾವಿಯಲ್ಲಿ ಯುವಾ ಬ್ರಿಗೇಡ್ ಹಾಗೂ ಶ್ರೀ ರಾಮಯ್ಯಸ್ವಾಮಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭ ಜರುಗಿತು.
ಕನ್ನಡಪ್ರಭ ವಾರ್ತೆ ಅಮೀನಗಡ
ಇಂದಿನ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗದೆ ನಿರಂತರ ಯೋಗಾಭ್ಯಾಸದಿಂದ ಆರೋಗ್ಯಕರವಾಗಿರಲು ಸಾಧ್ಯ ಎಂದು ಅಮೀನಗಡ ಪೊಲೀಸ್ ಠಾಣಾಧಿಕಾರಿ ಶಿವಾನಂದ ಸಿಂಗನ್ನವರ ಹೇಳಿದರು.ಸಮೀಪದ ಸೂಳೇಬಾವಿಯಲ್ಲಿ, ಯುವಾ ಬ್ರಿಗೇಡ್ ಹಾಗೂ ಶ್ರೀ ರಾಮಯ್ಯಸ್ವಾಮಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಯುವಾಬ್ರಿಗೇಡ್ ಸಂಘಟನೆಯ ಇಂಥ ಕಾರ್ಯಗಳು ಶ್ಲಾಘನೀಯ. ನಾಡುನುಡಿ ದೇಶಭಕ್ತರ ಸಾಧನೆಯ ಚಿಂತನೆ, ಯಶಸ್ವಿ ಜೀವನ ನಡೆಸಲು ಇಂಥ ಚಟುವಟಿಕೆಗಳು ಯುವ ಪೀಳಿಗೆಗೆ ಅತ್ಯವಶ್ಯಕ. ಯುವಜನಾಂಗವನ್ನು ದುಶ್ಚಟಗಳಿಂದ ದೂರವಿರಿಸಿ ವ್ಯಾಯಾಮಗಳ ಮೂಲಕ ಆರೋಗ್ಯವಂತರಾಗಬೇಕು. ಆರೋಗ್ಯ ರಕ್ಷಣೆಗೆ ಯೋಗ ಬಹುದೊಡ್ಡ ಕೊಡುಗೆ ಎಂದರು.
ಶ್ರೀ ರಾಮಯ್ಯಸ್ವಾಮಿ ವಿದ್ಯಾಸಂಸ್ಥೆ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಯುವಾ ಬ್ರಿಗೇಡ್‌ನ ತರುಣರು ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸ್ವಾಗತಾರ್ಹ. ಇಂಥ ಚಟುವಟಿಕೆಗಳು ಯುವಕರಿಗೆ ಸ್ಫೂರ್ತಿದಾಯಕ ಎಂದರು.ಅತಿಥಿಗಳಿಗೆ ಭಾರತಮಾತೆ ಹಾಗೂ ವೀರ ಸಾವರ್ಕರ್ ಅವರ ಜೀವಚನ ಚರಿತ್ರೆಯ ಪುಸ್ತಕಗಳನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ಯೋಗಗುರು ಸಂಗಮೇಶ ಗಂಟಿ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದರು. ಸೂಳೇಬಾವಿಯ ನಿವೃತ್ತಿ ಶಿಕ್ಷಕರಾದ ಎನ್.ಆರ್. ನಬಿವಾಲೆ, ಎಚ್.ಎನ್. ಮಾಚಾ, ಎನ್.ಬಿ. ಕೋಟಿಕಲ್ ಅವರನ್ನು ಸನ್ಮಾನಿಸಲಾಯಿತು.
ಯುವಾಬ್ರಿಗೇಡ್ ಸಂಚಾಲಕ ಶ್ರೀಧರ ನಿರಂಜನ, ವಿ.ಆರ್. ವಜ್ರಮಟ್ಟಿ, ಎ.ಸಿ. ಅತ್ತಾರ, ನಾಗೇಶ ಗಂಜೀಹಾಳ, ರಮೇಶ ಮಡಿವಾಳರ, ನೀಲೇಶ್ ಪೂಜಾರ, ಪರಶುರಾಮ ಹುಲ್ಯಾಳ, ಹನುಮಂತ ನಾವಿ, ಲಕ್ಷ್ಮಣ ಮೇಟಿ, ಶ್ರೀನಿವಾಸ ಧುತ್ತರಗಿ, ಪರಶುರಾಮ ಕತ್ತಿ ಭಾಗವಹಿಸಿದ್ದರು.