ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಭರಪೂರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಬನ್ನಿಮಂಟಪ ಕವಾಯತು ಮೈದಾನದಲ್ಲಿ ಈ ಬಾರಿ ಏರ್ ಶೋ ಇರುವುದಿಲ್ಲ.ಈ ಬಾರಿ ದಸರೆಯು ಅ.3 ರಿಂದ 12 ರವರೆಗೆ ಜರುಗಲಿದ್ದು, ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಇದಕ್ಕಾಗಿ 19 ಉಪ ಸಮಿತಿಗಳು ಕೆಲಸ ಮಾಡುತ್ತಿವೆ. ಮೊದಲ ದಿನವೇ ಎಲ್ಲಾ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಸಂಜೆ 6ಕ್ಕೆ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಗುವುದು. ಈ ಬಾರಿ 11 ವೇದಿಕೆಗಳಲ್ಲಿ 508 ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, 6500 ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅರಮನೆ, ಜಗನ್ಮೋಹನ ಅರಮನೆ, ಕಲಾಮಂದಿರ, ಗಾನ ಭಾರತೀಯಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳು. ಚಿಕ್ಕಗಡಿಯಾರ, ಪುರಭವನ, ನಟನ, ರಮಾಗೋವಿಂದ ರಂಗಮಂದಿರದಲ್ಲಿ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.ಎಲ್ಲಾ ವೇದಿಕೆಗಳಲ್ಲಿ ಸಂಜೆ 4 ರಿಂದ ರಾತ್ರಿ 10 ರವರೆಗೆ ಕಾರ್ಯಕ್ರಮಗಳು ಜರುಗಲಿವೆ. ಅರಮನೆಯಲ್ಲಿ ಸಂಜೆ 4 ರಿಂದ 7ರವರೆಗೆ ಬೇರೆ ಬೇರೆ ತಂಡಗಳಿಗೆ ಅವಕಾಶ ಮಾಡಿ, ನಂತರ ರಾತ್ರಿ 10 ರವರೆಗೆ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ.
ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಬಿಂಬಿಸುವ ಕಲಾಕೃತಿಗಳು ಇರಲಿವೆ ಎಂದರು.ಪ್ರತಿ ವರ್ಷ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನ [ಏರ್ ಶೋ] ಈ ಬಾರಿ ಇರುವುದಿಲ್ಲ ಎಂದರು.
ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್ ಇದ್ದರು.---------
ಬಾಕ್ಸ್....ಇನ್ನೂ ಒಂದು ಸಾವಿರ ಗೋಲ್ಡ್ ಕಾರ್ಡ್, ಎರಡು ಸಾವಿರ ಪಾಸ್ ಗಳು ಲಭ್ಯ:ಡೀಸಿ
ಯುವ ದಸರೆಯಲ್ಲಿ 80- 90 ಸಾವಿರ ಮಂದಿಗೆ ಉಚಿತ ಪ್ರವೇಶ । 10 ಸಾವಿರ ಮಂದಿ ಮಾತ್ರ ಟಿಕೆಟ್ ಖರೀದಿಸಬಹುದುಮೈಸೂರು: ಕಳೆದ ಬಾರಿ ದಸರಾದಲ್ಲಿ ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಿದ ಕೆಲವೇ ಕ್ಷಣಗಳಲ್ಲಿ ಕೆಲವೇ ಕೆಲವರು ಖರೀದಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡಿಕೊಂಡರು ಎಂಬ ಹಿನ್ನೆಲೆಯಲ್ಲಿ ಈ ಬಾರಿ ಆನ್ಲೈನ್ ಖರೀದಿಗೆ ಒಟಿಪಿ, ಇ- ಮೇಲ್ ವಿಳಾಸ ಮತ್ತಿತರವುಗಳನ್ನು ಸೇರಿಸಿದ್ದರಿಂದ ಇನ್ನೂ ಒಂದು ಸಾವಿರ ಗೋಲ್ಡ್ ಕಾರ್ಡುಗಳು ಮಾರಾಟಕ್ಕಿವೆ. ಅದೇ ರೀತಿ ಎರಡು ಸಾವಿರ ನಾರ್ಮಲ್ ಪಾಸುಗಳು ಲಭ್ಯವಿವೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
ಈ ಬಾರಿ ಯುವದಸರೆಯಲ್ಲಿ 80- 90 ಸಾವಿರ ಮಂದಿಗೆ ಉಚಿತ ಪ್ರವೇಶ ಇದೆ. ಮುಂಭಾಗದಲ್ಲಿ ಆಸನ ವ್ಯವಸ್ಥೆ ಕೇಳುವವರಿಗೆ ಮಾತ್ರ 10 ಸಾವಿರ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. 8000, 5000 ರು.ಗಳ ಟಿಕೆಟ್ ದುಬಾರಿ ಎಂಬ ಆರೋಪ ಕೇಳಿ ಬಂದಿರುವುದರಿಂದ 2500, 1500 ರು. ಟಿಕೆಟ್‌ಗಳನ್ನು ಕೂಡ ಮಾರಾಟ ಮಾಡಲಾಗುವುದು ಎಂದರು.ಶ್ರೇಯಾ ಘೋಷಾಲ್, ಎ.ಆರ್. ರೆಹಮಾನ್, ಇಳಯರಾಜ ಅವರಂಥ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಭಾಗವಹಿಸುವುದರಿಂದ ಹೆಚ್ಚು ಜನ ಸೇರುವ ಅಂದಾಜಿದೆ. ಹೀಗಾಗಿ ಈ ಬಾರಿಯ ಯುವ ದಸರೆಯನ್ನು ಮಹಾರಾಜ ಕಾಲೇಜು ಮೈದಾನದ ಬದಲು ವರ್ತುಲ ರಸ್ತೆಯಲ್ಲಿ ಉತ್ತನಹಳ್ಳಿ ಬಳಿಗೆ ಸ್ಥಳಾಂತರಿಸಲಾಗಿದೆ ಎಂದು ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
ಕಾರ್ಯಕ್ರಮ ಹೊರವಲಯದಲ್ಲಿ ನಡೆಯುತ್ತಿರುವುದರಿಂದ ಸೂಕ್ತ ಭದ್ರತೆ, ಶೌಚಾಲಯ,. ಕುಡಿಯುವ ನೀರು, ವರ್ತುಲ ರಸ್ತೆಯ ಜಂಕ್ಷನ್ನಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಒಂದೂವರೆ ಕಿ.ಮೀ. ಬೀದಿ ದೀಪ, ವಾಹನ ನಿಲುಗಡೆ, ಬಸ್ ಸೌಲಭ್ಯ ಕಲ್ಪಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.ವಾಹನರಹಿತ ವ್ಯವಸ್ಥೆ:
ಡಿ. ದೇವರಾಜ ಅರಸು ರಸ್ತೆ ಹಾಗೂ ಅರಮನೆಯ ಸುತ್ತ ಅರ್ಧ ಭಾಗದಲ್ಲಿ ವಾಹನರಹಿತ [ನಾನ್ ವೆಹಿಕಲ್ ಜೋನ್] ವ್ಯವಸ್ಥೆ ಮಾಡುವ ಉದ್ದೇಶವಿದೆ. ಪ್ರಾಯೋಗಿಕವಾಗಿ ಅ.3, 4 ರಂದು ಮಾಡಲಿದ್ದು, ನಂತರ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.