ಸಾರಾಂಶ
ಹುಬ್ಬಳ್ಳಿ:
ನ್ಯಾಯಾಂಗ ಕ್ಷೇತ್ರದಲ್ಲಿ ಸೇವಾ ಭದ್ರತೆ ಹಾಗೂ ಸೌಲಭ್ಯ ಸೇರಿದಂತೆ ಬಹಳಷ್ಟು ಅವಕಾಶಗಳಿವೆ. ಕಾನೂನು ಪದವೀಧರರು ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಕೀಲರಾಗಿ ಹೊರಹೊಮ್ಮಬೇಕು. ನ್ಯಾಯಾಧೀಶರಾಗಲು ಸಾಕಷ್ಟು ಅವಕಾಶಗಳಿರುತ್ತವೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ ಸಲಹೆ ನೀಡಿದರು.ಇಲ್ಲಿನ ಕೆಎಲ್‌ಇ ಸಂಸ್ಥೆಯ ಗುರುಸಿದ್ದಪ್ಪ ಕೊತ್ತಂಬರಿ ಕಾನೂನು ಕಾಲೇಜಿನ ವತಿಯಿಂದ ನಗರದ ಬಿವಿಬಿ ಕ್ಯಾಂಪಸ್‌ನ ದೇಶಪಾಂಡೆ ಸಭಾಭವನದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಶನಿವಾರ ನಡೆದ ‘ನ್ಯಾಯಾಂಗದಲ್ಲಿ ವೃತ್ತಿಜೀವನ’ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನು ಪದವಿ ಪೂರ್ಣಗೊಳಿಸಿದ ಯುವ ವಕೀಲರು ನೇರವಾಗಿ ಪರೀಕ್ಷೆ ಬರೆದು ಕೆಳಹಂತದ ನ್ಯಾಯಾಲಯಗಳಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗಬಹುದು. ಈಗಿನ ನೇಮಕಾತಿ ನಿಯಮಗಳಲ್ಲಿ ಇಂತಹ ಅನೇಕ ಅವಕಾಶಗಳಿವೆ. ಇತರೆ ಕ್ಷೇತ್ರಗಳಿಗಿಂತಲೂ ಹೆಚ್ಚಿನ ವೇತನ, ಸೌಲಭ್ಯವನ್ನು ಕಾನೂನು ಪದವೀಧರರು ಪಡೆಯಬಹುದಾಗಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಕಾನೂನು ಅಧ್ಯಯನ ಮಾಡಿದ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ವಾದಿ, ಪ್ರತಿವಾದಿ ಹಾಗೂ ಕ್ಷಕ್ಷಿದಾರರನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ಆಶಯ, ನಿಯಮಗಳಿಗೆ ಅನುಗುಣವಾಗಿ ನ್ಯಾಯದಾನ ಮಾಡಬೇಕು. ಇಲ್ಲಿ ಕಾನೂನಿನ ತಿಳಿವಳಿಕೆ, ಕೌಶಲ್ಯ, ಚಾಣಕ್ಷತನ ಎಲ್ಲವೂ ಅಗತ್ಯವಾಗಿರುತ್ತದೆ ಎಂದು ಹೇಳಿದರು.
ವಕೀಲರಾಗಿ ಕಲಿಯುವುದಕ್ಕಿಂತ ನ್ಯಾಯಾಧೀಶರಾಗಿ ಹೆಚ್ಚು ಕಲಿಯುವ ಅವಕಾಶ ಇರುತ್ತದೆ. ಪ್ರತಿಯೊಂದು ವ್ಯಾಜ್ಯಕ್ಕೂ ಒಂದೊಂದು ರೂಪ ಇರುತ್ತದೆ. ಅಪರಾಧ ಪ್ರಕರಣಗಳಿಗೆ ವಿವಿಧ ಮುಖಗಳಿರುತ್ತವೆ. ನ್ಯಾಯಾಧೀಶ ಎಲ್ಲವನ್ನೂ ಅಧ್ಯಯನ ಮಾಡಿ, ಪ್ರಾಮಾಣಿಕವಾದ ನ್ಯಾಯ ನೀಡುತ್ತಾನೆ. ಇದರಿಂದ ಸಮಾಜದಲ್ಲಿ ಹೆಚ್ಚು ಗೌರವ ಪಡೆಯುವುದರ ಜತೆಗೆ ಆರೋಗ್ಯಕರ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗುತ್ತಾರೆ ಎಂದರು.ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಜಿ. ಉಮಾ, ಉಮೇಶ ಎಂ. ಅಡಿಗ, ವಿಜಯಕುಮಾರ ಎ. ಪಾಟೀಲ, ಸಿದ್ದಪ್ಪ ಸುನೀಲ್ ದತ್ತ ಯಾದವ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಜಿ.ಕೆ. ಕಾನೂನು ಕಾಲೇಜಿನ ಪ್ರಾಚಾರ್ಯ ಜ್ಞಾನೇಶ್ವರ ಪಿ. ಚೌರಿ, ಪೊ. ಎಸ್.ಎಂ. ಹೊಳ್ಳೂರು ಸೇರಿದಂತೆ ಅನೇಕರಿದ್ದರು.
ಮಾನವೀಯ ಮೌಲ್ಯ ಕುಸಿಯುತ್ತಿವೆಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯ ಕುಸಿಯುತ್ತಿದ್ದು, ಅದರಿಂದ ಅಪರಾಧ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಕಾನೂನಿನ ಮೂಲಕ ಮರುಸ್ಥಾಪಿಸಿ ಸಮಾಜದ ಆರೋಗ್ಯವನ್ನು ಕಾಪಾಡುವಂತಹ ಜವಾಬ್ದಾರಿ ನಮ್ಮೇಲರ ಮೇಲಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾರ್ಚಾ ಶ್ರೀಶಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹನೆ, ತಾಳ್ಮೆ, ಬದುಕಿನ ಮೌಲ್ಯವನ್ನು ತಿಳಿಯದೇ ಸಂವಹನ ಕೊರತೆಯಿಂದಾಗಿ ಯುವಕರು ಆತ್ಯಹತ್ಯೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ನಿತ್ಯ ಹೊಸ ಹೊಸ ಕಾನೂನುಗಳು ಬರುತ್ತಿವೆ. ಇವುಗಳ ಅಧ್ಯಯನದಿಂದ ಬುದ್ಧಿವಂತಿಕೆಯಿಂದ ಸತ್ಯಾನ್ವೇಷಣೆಯೊಂದಿಗೆ ಕಾನೂನಿನ ಚೌಕಟ್ಟು ಮೀರದಂತೆ ಪ್ರಕರಣ ಇತ್ಯರ್ಥ ಮಾಡಬೇಕು. ನ್ಯಾಯ ನಿರ್ಣಯ ಎನ್ನುವುದು ದೈವಿಕಾರ್ಯವಿದ್ದಂತೆ ಎಂದು ತಿಳಿಸಿದರು.