ರಾಘಾಪೂರ ಗ್ರಾಮದಲ್ಲಿ ಭರಪೂರ ಸಮಸ್ಯೆಗಳು!

| Published : Mar 29 2024, 12:50 AM IST

ಸಾರಾಂಶ

ಪ್ರತಿ ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಗೆ ಬುನಾದಿ ಎಂಬ ಮಾತಿದೆ. ಇದಕ್ಕಾಗಿ ಸರ್ಕಾರ ಕೂಡ ನಗರ, ಮಹಾನಗರಗಳಂತೆ ಗ್ರಾಮಗಳಿಗೂ ಸಾಕಷ್ಟು ಅನುದಾನವನ್ನು ನೀಡುತ್ತಲೇ ಬಂದಿದೆ. ಇದೆ ಅನುದಾನವನ್ನು ಬಳಸಿಕೊಂಡು ಗ್ರಾಪಂಗಳು ಜನೋಪಯೋಗಿ ಕಾರ್ಯಗಳಿಗೆ ಮುಂದಾಗುತ್ತದೆ. ಅಲ್ಲದೆ, ಹತ್ತಾರು ಯೋಜನೆಗಳನ್ನು ಜಾರಿಯಾಗುತ್ತಿವೆ. ಆದರೆ, ತಾಲೂಕಿನ ಹಂಸನೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ರಾಘಾಪೂರ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಜನರು ಕೂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸಿ.ಎಂ.ಜೋಶಿ ಗುಳೇದಗುಡ್ಡ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪ್ರತಿ ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಗೆ ಬುನಾದಿ ಎಂಬ ಮಾತಿದೆ. ಇದಕ್ಕಾಗಿ ಸರ್ಕಾರ ಕೂಡ ನಗರ, ಮಹಾನಗರಗಳಂತೆ ಗ್ರಾಮಗಳಿಗೂ ಸಾಕಷ್ಟು ಅನುದಾನವನ್ನು ನೀಡುತ್ತಲೇ ಬಂದಿದೆ. ಇದೆ ಅನುದಾನವನ್ನು ಬಳಸಿಕೊಂಡು ಗ್ರಾಪಂಗಳು ಜನೋಪಯೋಗಿ ಕಾರ್ಯಗಳಿಗೆ ಮುಂದಾಗುತ್ತದೆ. ಅಲ್ಲದೆ, ಹತ್ತಾರು ಯೋಜನೆಗಳನ್ನು ಜಾರಿಯಾಗುತ್ತಿವೆ. ಆದರೆ, ತಾಲೂಕಿನ ಹಂಸನೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ರಾಘಾಪೂರ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಜನರು ಕೂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇಲ್ಲಿ 400ಕ್ಕಿಂತಲೂ ಹೆಚ್ಚು ಮನೆಗಳಿವೆ. 3400 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 4 ಜನ ಗ್ರಾಪಂ ಸದಸ್ಯರಿದ್ದಾರೆ. ಆದರೂ ಗ್ರಾಮದಲ್ಲಿ ಯಾವುದೇ ಮಹತ್ವದ ಕೆಲಸಗಳಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಹೀಗೆ ಸಮಸ್ಯೆಗಳ ಸರಮಾಲೆಯೇ ಗ್ರಾಮದಲ್ಲಿವೆ. ತಾಲೂಕು ಕೇಂದ್ರದಿಂದ ಸುಮಾರು 18 ಕಿಮೀ ದೂರದಲ್ಲಿರುವ ಈ ಗ್ರಾಮಕ್ಕೆ ಈಗಲೂ ಸಮರ್ಪಕವಾದ ರಸ್ತೆ ಇಲ್ಲ ಎನ್ನುವುದು ಗ್ರಾಮಸ್ಥರ ಅಳಲಾಗಿದೆ.

ಇದರಿಂದಾಗಿ ಗ್ರಾಮ ಕೂಡ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಸುತ್ತಲೂ ಉದ್ಯೋಗಾವಕಾಶಗಳು ಇಲ್ಲ. ಹೀಗಾಗಿ ಇಲ್ಲಿನ ಜನರು ತಮ್ಮ ಬದುಕು ನಿರ್ವಹಣೆಗೆ ಅನ್ಯ ನಗರಗಳನ್ನೇ ಅವಲಂಬಿಸಬೇಕಿದೆ. ಮಳೆಗಾಲದಲ್ಲಿ ಜೀವನ ನಡೆಸುವುದು ಕೂಡ ದುಸ್ತರ. ಇನ್ನು ಬೇಸಿಗೆ ಕಾಲದಲ್ಲಿ ಪರಿಸ್ಥಿತಿ ಹೇಳತೀರದು. ಹೀಗಾಗಿ ಬಹುತೇಕ ಜನರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ಕಾಪು ಹಾಗೂ ಉಡುಪಿ, ಕೇರಳ, ಗೋವಾದ ಪಣಜಿ ಸೇರಿದಂತೆ ಬೇರೆ ಕಡೆಗಳಿಗೆ ಪ್ರತಿವರ್ಷ ಉದ್ಯೋಗ ಅರಸಿ ಗುಳೇ ಹೋಗುತ್ತಿದ್ದಾರೆ. ಈ ಭಾಗದ ಹೆಚ್ಚಿನ ಪ್ರದೇಶ ನೀರಾವರಿ ಇಲ್ಲ. ಹೀಗಾಗಿ ಬದುಕು ನಿರ್ವಹಿಸಲು ಗುಳೇ ಅನಿವಾರ್ಯ. ಇನ್ನೂ ಕೆಲ ಕುಟುಂಬಗಳು ಗುಳೇ ಹೋದಲ್ಲಿ ಊರಿನಲ್ಲಿಯೇ ಮನೆ ಮಾಡಿಕೊಂಡು ಶಾಶ್ವತವಾಗಿ ನೆಲೆಸಿದ್ದಾರೆ. ಈ ಗ್ರಾಮದತ್ತ ಹೆಜ್ಜೆ ಕೂಡ ಹಾಕಿಲ್ಲ. ಸಂಕಷ್ಟಕ್ಕೆ ಕೈ ಹಿಡಿಯುವ ನರೇಗಾ ಯೋಜನೆ ಕೂಡ ಇವರ ಪಾಲಿಗೆ ಪ್ರಯೋಜನಕ್ಕೆ ಬಾರದಾಗಿದೆ.

ಹಲವು ಹತ್ತು ಸಮಸ್ಯೆಗಳು:

ಗ್ರಾಮದಲ್ಲಿರುವ ಒಂದು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದೆ. ಇದುವರೆಗೂ ಅದನ್ನು ದುರಸ್ತಿಗೆ ಗ್ರಾಪಂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಸರಿಯಾದ ರಸ್ತೆಗಳಿಲ್ಲ. ಗ್ರಾಮದ ಅಗಸಿ ಮತ್ತು ಶಾಲೆಯ ಮುಂದೆ ಮಾಡಿದ ಸಿಮೆಂಟ್ ರಸ್ತೆ ಕಿತ್ತು ಹಾಳಾಗಿದೆ. ಅದರ ರಿಪೇರಿಗೂ ಗ್ರಾಪಂ ಮುಂದಾಗಿಲ್ಲ. ಇದುವರೆಗೂ ಗ್ರಾಪಂನಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ಮಲಮೂತ್ರ ವಿಸರ್ಜನೆಗೆ ಸಂಜೆಯಾದರೆ ಸಾಕು ಗ್ರಾಮಕ್ಕೆ ಹೊಂದಿಕೊಂಡ ಗುಡ್ಡಪ್ರದೇಶವನ್ನೇ ಪುರುಷರು ಹಾಗೂ ಮಹಿಳೆಯರು ಬಯಲು ಶೌಚಕ್ಕೆ ಆಶ್ರಯಿಸುತ್ತಿದ್ದಾರೆ.

ವೈಯಕ್ತಿಕ ಶೌಚಾಲಯಕ್ಕಾಗಿ ಗ್ರಾಪಂ ಅನುದಾನ ಪಡೆದು ಕೆಲವರು ಕಟ್ಟಿಕೊಂಡರೂ ಅವು ಬಳಸಲು ಸಾಧ್ಯವಾಗದಂತಿವೆ. ಬಯಲೇ ಇವರಿಗೆ ಗತಿಯಾಗಿದೆ. ಗ್ರಾಮದ ಅಂಗನವಾಡಿ ಮುಂದೆ ಶೌಚಾಲಯವನ್ನು ಮಕ್ಕಳಿಗಾಗಿ ಕಟ್ಟಿದ್ದು ಅದು ಹಾಳಾಗಿದ್ದರಿಂದ ಅಂಗನವಾಡಿ ಮಕ್ಕಳು ಬಯಲಿನಲ್ಲಿ ಶೌಚ ಮಾಡುವುದು ಅನಿವಾರ್ಯವಾಗಿದೆ.

ಸರಿಯಾಗಿ ಚರಂಡಿ ಇಲ್ಲ:

ಗ್ರಾಮದಲ್ಲಿ ಕೆಲವು ಓಣಿಗಳಲ್ಲಿ ಚರಂಡಿ ನಿರ್ಮಿಸಿದ್ದಾರೆ. ಆದರೆ, ಚರಂಡಿ ನೀರು ಸುಸೂತ್ರವಾಗಿ ಹೋಗಲು ವ್ಯವಸ್ಥೆ ಇಲ್ಲದ್ದರಿಂದ ನೀರು ಚರಂಡಿಯಲ್ಲಿಯೇ ನಿಂತಿದ್ದರಿಂದ ಗಬ್ಬು ದುರ್ವಾಸನೆ ಹರಡುತ್ತಿದೆ. ಗ್ರಾಮದಲ್ಲಿ ದಿನಪೂರ್ತಿ ನೀರು ಒದಗಿಸುವ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ, ಮನೆಗೆ ನಲ್ಲಿಗಳನ್ನು ಹಾಕಲಾಗಿದೆ. ಅದಕ್ಕೆ ಒಂದೇ ಬೋರ್‌ವೆಲ್ ನೀರು ಹರಿಸಲಾಗುತ್ತಿದೆ. ಆದರೆ, ಬೋರ್‌ವೆಲ್‌ನಲ್ಲಿ ನೀರು ಕಡಿಮೆ ಆಗಿದ್ದರಿಂದ ಸಮರ್ಪವಾಗಿ ಪೂರೈಕೆಯಾಗುತ್ತಿಲ್ಲ.

ಗ್ರಾಮದ ಪ್ರತಿ ರಸ್ತೆ ಪಕ್ಕ ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಎಸೆಯುತ್ತಿದ್ದಾರೆ. ಅದನ್ನು ನಿರ್ವಹಣೆ ಮಾಡಲು ಗ್ರಾ.ಪಂ. ನೌಕರರು ಇದ್ದರೂ ಪ್ರಯೋಜನವಿಲ್ಲ. ಕೊಳೆತ ಕಸದಿಂದ ರೋಗಗಳ ಹಾವಳಿ ಹೆಚ್ಚುತ್ತಿದೆ. ನಿತ್ಯ ಮೂಗು ಮುಚ್ಚಿಕೊಂಡು ಜನ ಅಡ್ಡಾಡುವಂತಾಗಿದೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಗ್ರಾಮದ ಪಕ್ಕ ನೀರಾವರಿಗಾಗಿ 20 ವರ್ಷಗಳ ಹಿಂದೆ ಮಲಪ್ರಭಾ ಎಡದಂಡೆಯ ಮೂಲಕ ಕಾಲುವೆ ನಿರ್ಮಿಸಿ ನೀರು ಹರಿಸುವ ಯೋಜನೆ ಮಾಡಲಾಗಿತ್ತು. ಆದರೆ, 20 ವರ್ಷ ಗತಿಸಿದರೂ ಕಾಲುವೆಗೆ ನೀರು ಬಂದಿಲ್ಲವೆಂದು ಗ್ರಾಮದ ಸಂಗಪ್ಪ ಗಂಜಿಹಾಳ ಹೇಳುತ್ತಾರೆ.

----------------

ಗ್ರಾಮದಲ್ಲಿ ಸಮಸ್ಯೆಗಳು ಇವೆ. ಗ್ರಾಮದ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಯಿಂದ ಸರಿಯಾದ ಚರಂಡಿ ನಿರ್ಮಾಣ ಕುಡಿಯುವ ನೀರು ಮುಂತಾದ ಕಾರ್ಯಗಳನ್ನು ಮಾಡಿಸಲಾಗುವುದು.

-ಬಸವರಾಜ ಕುರುಬನ್ನವರ

ಗ್ರಾಮ ಪಂಚಾಯತಿ ಸದಸ್ಯರು, ರಾಘಾಪೂರ.

--------------

ಈಗ ಬೇಸಿಗೆಯಾದ್ದರಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಲ್ಲಿ ಚರಂಡಿಗಳಲ್ಲಿ ನೀರು ನಿಲ್ಲುವುದರಿಂದ ಮೇಲಿಂದ ಮೇಲೆ ಸ್ವಚ್ಛಗೊಳಿಸಲಾಗುವುದು.

- ಮಂಜುನಾಥ ಅರಳಿಕಟ್ಟಿ
ಪಿಡಿಒ ಗ್ರಾಮ ಪಂಚಾಯತಿ ಹಂಸನೂರ.