ಸಮೃದ್ಧ ಮಳೆ, ಭರ್ಜರಿ ಬೆಳೆ ನಿರೀಕ್ಷೆ

| Published : Jul 26 2024, 01:32 AM IST

ಸಾರಾಂಶ

ಜಿಲ್ಲೆಯಾದ್ಯಂತ ಜುಲೈ ತಿಂಗಳಲ್ಲಿ ಸತತ ಮಳೆಯಾಗುತ್ತಿದ್ದು, ಮುಂಗಾರು ಬೆಳೆಗಳಾದ ಹೆಸರು, ಉದ್ದು, ಸೋಯಾಅವರೆ, ಶೇಂಗಾ, ಹತ್ತಿ, ಗೋವಿನಜೋಳ ಮುಂತಾದ ಬೆಳೆಗಳಿಗೆ ಅನುಕೂಲವಾಗಿದೆ, ಆದರೂ ಭೂಮಿಯ ತೇವಾಂಶ ಹೆಚ್ಚಾಗುತ್ತಿದ್ದು, ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ.

ಬಸವರಾಜ ಹಿರೇಮಠ

ಧಾರವಾಡ

ಒಂದು ವರ್ಷ ಬರ, ಮತ್ತೊಂದು ವರ್ಷ ಅತಿವೃಷ್ಟಿ.. ಹೀಗೆ ಪ್ರತಿ ಹಂಗಾಮಿನಲ್ಲೂ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿರುವ ರೈತರು ಈ ಬಾರಿ ಸಮೃದ್ಧ ಮಳೆಯಿಂದ ಅಷ್ಟೇ ಸಮೃದ್ಧ ಬೆಳೆ ಬರುವ ನಿರೀಕ್ಷೆ ಹೊಂದಿದ್ದಾರೆ. ಇದೀಗ ಸಮಾಧಾನಕರ ಮಳೆಯಾಗಿದ್ದು, ಬೆಳೆಗಳು ಅಷ್ಟೇ ಹುಲುಸಾಗಿ ಕಂಗೊಳಿಸುತ್ತಿವೆ.

ಕಳೆದ ವರ್ಷ ಬರದಿಂದ ಮುಂಗಾರು ಹಾಗೂ ಹಿಂಗಾರು ಬೆಳೆ ಕಳೆದುಕೊಂಡ ರೈತರು ಈಗ ನಳಸಳಿಸುತ್ತಿರುವ ಬೆಳೆಗಳಲ್ಲಿಯೇ ಇಷ್ಟು ವರ್ಷದ ಬೆಳೆ ನಷ್ಟ ಮರೆಯುತ್ತಿದ್ದಾರೆ. ಮೇ ತಿಂಗಳ ಕೊನೆಯಿಂದ ಜೂನ್‌ ತಿಂಗಳ ಕೊನೆ ವರೆಗೆ ಮುಂಗಾರು ಬಿತ್ತನೆಯಾಗಿದ್ದು, ಮುಕ್ಕಟ್ಟು ಬಿತ್ತನೆಯಾದ ಬೆಳೆ ಕಾಯಿ ಬಿಡುತ್ತಿದ್ದರೆ, ನಂತರದ ಬೆಳೆಗಳು ಉತ್ತಮ ಹಂತದಲ್ಲಿವೆ.

ಎಷ್ಟು ಬಿತ್ತನೆ:

ಪ್ರಸಕ್ತ ವರ್ಷ ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ 2,70,840 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದು, 2,71,341 ಬಿತ್ತನೆಯಾಗಿದೆ. ಈ ಪೈಕಿ ಏಕದಳ ಧನ್ಯ 60,606 ಹೆಕ್ಟೇರ್‌ (ಭತ್ತ, ಜೋಳ,ರಾಗಿ, ಮುಸುಕಿನ ಜೋಳ, ಸಿರಿಧಾನ್ಯಗಳು) , ದ್ವಿದಳ ಧಾನ್ಯ 1,10,263 ಹೆಕ್ಟೇರ್‌ (ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದಿ, ಅವರೆ), ಎಣ್ಣೆಕಾಳು 57239 ಹೆಕ್ಟೇರ್‌ (ಶೇಂಗಾ, ಎಳ್ಳು, ಗುರೆಳ್ಳು, ಸೋಯಾಬೀನ್ ) ಹಾಗೂ ವಾಣಿಜ್ಯ ಬೆಳೆ 43233 ಹೆಕ್ಟೇರ್‌ (ಹತ್ತಿ, ಕಬ್ಬು) ಬೆಳೆಯಲಾಗಿದೆ. ಸರಿಯಾದ ಪ್ರಮಾಣದಲ್ಲಿ ಗೊಬ್ಬರ ಹಾಗೂ ಕಳೆಗಳನ್ನು ರೈತರು ತೆಗೆದಿದ್ದು ಉತ್ತಮ ಬೆಳೆಗಾಗಿ ರೈತರು ಕಾತುರರಾಗಿದ್ದಾರೆ.

ಎಷ್ಟು ಮಳೆ:

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 4 ಮಿಮೀ ವಾಡಿಕೆ ಮಳೆ ಆಗಬೇಕಿದ್ದು 8.8ರಷ್ಟಾಗಿದೆ. ಅದೇ ರೀತಿ ಕಳೆದ ಏಳು ದಿನಗಳಲ್ಲಿ 34.9 ಮಿಮೀ ಮಳೆ ಪೈಕಿ 67 ಮಿಮೀ ಆಗಿದೆ. ಜು. 1ರಿಂದ ಈ ವರೆಗೆ 125 ಮೀಮಿ ಪೈಕಿ 145ರಷ್ಟಾಗಿದೆ. ಜೂನ್‌ ತಿಂಗಳಲ್ಲಿ ಜಿಲ್ಲಾದ್ಯಂತ ಸಮ ಪ್ರಮಾಣದಲ್ಲಿದ್ದ ಮಳೆ ಜುಲೈ ತಿಂಗಳಲ್ಲಿ ಶೇ. 8ರಷ್ಟು ಹೆಚ್ಚಾಗಿದೆ. ಅದರಲ್ಲೂ ಕಲಘಟಗಿ ಹಾಗೂ ಅಳ್ನಾವರದಲ್ಲಿ ದುಪ್ಪಟ್ಟು ಮಳೆಯಾಗಿರುವ ವರದಿಯಾಗಿದೆ. ಜೂ. 1ರಿಂದ ಜು. 24ರ ವರೆಗೆ ಜಿಲ್ಲೆಯಲ್ಲಿ ವಾಡಿಕೆ 253 ಮಿಮೀ ಮಳೆಯಾಗಬೇಕು. ಆದರೆ, ಆಗಿದ್ದು 284 ಮಿಮೀ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 12ರಷ್ಟು ಜಾಸ್ತಿಯಾದರೂ ಸದ್ಯಕ್ಕೆ ಬೆಳೆಗಳಿಗೆ ತೊಂದರೆ ಇಲ್ಲ. ಆದರೆ, ಇದೇ ರೀತಿ ಹೆಚ್ಚಿನ ಮಳೆಯಾದರೆ ಬೆಳೆಗಳಿಗೆ ವಿವಿಧ ರೀತಿಯ ರೋಗಗಳು ಅಂಟಿಕೊಂಡು ಬೆಳೆ ಹಾಳಾಗುವ ಸಾಧ್ಯತೆಗಳಿವೆ. ರೈತರಿಗೆ ಇದೀಗ ಇದೊಂದು ಭಯ ಬಿಟ್ಟರೆ ಮತ್ತೇನಿಲ್ಲ.

ಜಿಲ್ಲೆಯಾದ್ಯಂತ ಜುಲೈ ತಿಂಗಳಲ್ಲಿ ಸತತ ಮಳೆಯಾಗುತ್ತಿದ್ದು, ಮುಂಗಾರು ಬೆಳೆಗಳಾದ ಹೆಸರು, ಉದ್ದು, ಸೋಯಾಅವರೆ, ಶೇಂಗಾ, ಹತ್ತಿ, ಗೋವಿನಜೋಳ ಮುಂತಾದ ಬೆಳೆಗಳಿಗೆ ಅನುಕೂಲವಾಗಿದೆ, ಆದರೂ ಭೂಮಿಯ ತೇವಾಂಶ ಹೆಚ್ಚಾಗುತ್ತಿದ್ದು, ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುವುದರಿಂದ ರೈತರು ಹೊಲದಲ್ಲಿ ಅಥವಾ ಒಡ್ಡುಗಳಲ್ಲಿ ನಿಂತಿರುವ ಹೆಚ್ಚುವರಿ ನೀರನ್ನು ಹರಿ ಮಾಡಿ ಹೊರಹಾಕಬೇಕು ಎಂದು ಮುಂಗಾರು ಬೆಳೆ ಹಾಗೂ ಮಳೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹೆಸರು, ಉದ್ದು, ಅಲಸಂದಿ, ಸೋಯಾಅವರೆ, ಶೇಂಗಾ ಇತ್ಯಾದಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದಲ್ಲಿ ಹದ ಬಂದ ಕೂಡಲೇ ಎಲೆಗಳ ಮೂಲಕ ನೀರಿನಲ್ಲಿ ಕರಗುವ ರಸಗೊಬ್ಬರ ಹಾಕಬೇಕು. ನೀರು ನಿಂತ ಸನ್ನಿವೇಶದಲ್ಲಿ ಯೂರಿಯಾ ಗೊಬ್ಬರ ಬಳಕೆ ಮಾಡಬಾರದು. ಇದರಿಂದ ರೋಗಗಳ ಬಾಧೆ ಹೆಚ್ಚಾಗುವುದು ಎಂದು ತಿಳಿಸಿದ್ದಾರೆ.