ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಣಾಜೆ ನಗರ ಘಟಕದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮಂಗಳಗಂಗೋತ್ರಿಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.
ಉಳ್ಳಾಲ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಣಾಜೆ ನಗರ ಘಟಕದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮಂಗಳಗಂಗೋತ್ರಿಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು. ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಸುಜಿತ್ ಮಾತನಾಡಿ, ವಿವಿಯಲ್ಲಿ ಆಗುತ್ತಿರುವ ಸಾಲು ಸಾಲು ಅನಾಹುತಗಳು, ಇದರಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಆಡಳಿತ ಕಚೇರಿ, ಮಂಡಳಿಗೆ, ಸುಪ್ರೀಂ ಅಥಾರಟಿ ಅನಿಸಿಕೊಂಡ ವಿ.ಸಿಯವರಿಗೆ ಮನವಿ ಮಾಡಿದರೂ ಪರಿಹಾರ ಸಿಗುತ್ತಿಲ್ಲ ಎಂದರು.
ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಲಾಗದ ವಿ.ವಿಗೆ ನಾಚಿಕೆಯಾಗಬೇಕು. ತಕ್ಷಣವೇ ೯ ಬೇಡಿಕೆಗಳನ್ನು ಈಡೇರಿಸಬೇಕು. ಸಮಸ್ಯೆ ಬಗೆಹರಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.ಸಂಪೂರ್ಣ ಆಡಳಿತ ಮಂಡಳಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೇಳುವಾಗ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ, ಶುಲ್ಕ ಬರುತ್ತಿಲ್ಲ ಅನ್ನುವ ಪ್ರತಿಕ್ರಿಯೆ ಸಿಗುತ್ತಿದೆ ಸಹಿತ ಅನೇಕ ವಿಚಾರಗಳ ಕುರಿತು ಪ್ರತಿಭಟನಾನಿರತರು ಆಕ್ಷೇಪಿಸಿದರು.ಸ್ಥಳಕ್ಕೆ ವಿಸಿ ಸಾಹೇಬರು ಬರದಿದ್ದರೆ ರಾತ್ರಿ ಬೆಳಗಾದರೂ ಕುಳಿತುಕೊಳ್ಳಲು ಸಿದ್ಧರಿದ್ದೇವೆ. ಆಶ್ವಾಸನೆಗಳನ್ನು ಕೇಳಿ ಕೇಳಿ ರಾಜಕಾರಣಿಗಳನ್ನು ಭೇಟಿಯಾದಂತೆ ಆಗಿದೆ. ಒಂದು ವರ್ಷದ ಹಿಂದೆ ಪ್ರತಿಭಟಿಸಿದರೂ ಪ್ರಯೋಜನವಿಲ್ಲ. ಆಗಲ್ಲ ಅಂದರೆ ರಾಜೀನಾಮೆ ಕೊಟ್ಟು ಹೊರ ನಡೆಯಿರಿ ಎಂದು ಒತ್ತಾಯಿಸಿದರು.
ವಿ.ಸಿಯರ ಪ್ರತಿಕ್ರಿಯೆಗೆ ವಿದ್ಯಾರ್ಥಿಗಳು ಸ್ಪಂದಿಸದೆ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಪ್ರತಿಟನಾಕಾರರ ಬಂಧಿಸಿ ಬಿಡುಗಡೆ ಮಾಡಿದರು.ಕೊಣಾಜೆ ನಗರ ಕಾರ್ಯದರ್ಶಿ ಮನು, ವಿವಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಿಹಾರ್, ಶ್ರೀಷಾ, ಅಪೇಕ್ಷಾ, ಕೇಸರಿ, ಯಶ್ವಿನ್ ಮತ್ತಿತರರು ಉಪಸ್ಥಿತರಿದ್ದರು.