ನಾಳೆಯಿಂದ ಎಬಿವಿಪಿ 44ನೇ ಪ್ರಾಂತ ಸಮ್ಮೇಳನ

| Published : Jan 30 2025, 01:45 AM IST

ಸಾರಾಂಶ

ಶಿವಮೊಗ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತದ 44ನೇ ಪ್ರಾಂತ ಸಮ್ಮೇಳನವು ಜ.31 ರಿಂದ ಫೆ.2 ರವರೆಗೆ ನಗರದ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್)ದಲ್ಲಿ ಜರುಗಲಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಸಂಚಾಲಕ ಎಚ್‌.ಕೆ. ಪ್ರವೀಣ್ ತಿಳಿಸಿದರು.

ಶಿವಮೊಗ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತದ 44ನೇ ಪ್ರಾಂತ ಸಮ್ಮೇಳನವು ಜ.31 ರಿಂದ ಫೆ.2 ರವರೆಗೆ ನಗರದ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್)ದಲ್ಲಿ ಜರುಗಲಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಸಂಚಾಲಕ ಎಚ್‌.ಕೆ. ಪ್ರವೀಣ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನವು ಜ.31 ರಂದು ಬೆಳಗ್ಗೆ 10ಕ್ಕೆ ಧ್ವಜಾರೋಹಣ ಹಾಗೂ ಪ್ರದರ್ಶಿನಿ ಉದ್ಘಾಟನೆಯ ಮೂಲಕ ಅಧಿಕೃತ ಚಾಲನೆ ನೀಡಲಾಗುವುದು. ಈ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಕ್ಷೇತ್ರ ಕೂಡಲಿ ಮಹಾಸಂಸ್ಥಾನ ಮಠದ ಶ್ರೀ ಅಭಿನವ ಶಂಕರ ಮಹಾಸ್ವಾಮೀಜಿ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ 10 ಸಂಘಟನಾತ್ಮಕ ವಿಭಾಗಗಳಿಂದ ಸುಮಾರು ಅಪೇಕ್ಷಿತ 1,300 ವಿದ್ಯಾರ್ಥಿಗಳು ಹಾಗೂ ಆಧ್ಯಾಪಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

44ನೇ ಪ್ರಾಂತ ಸಮ್ಮೇಳನದ ಉದ್ಘಾಟನಾ ಸಮಾರಂಭ ಜ.31 ರಂದು ಮಧ್ಯಾಹ್ನ 3ಕ್ಕೆ ಜರುಗಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮಭೂಷಣ ಡಾ.ಬಿ.ಎನ್.ಸುರೇಶ್, ಖ್ಯಾತ ವಿಜ್ಞಾನಿ ಹಾಗೂ ಕುಲಾಧಿಪತಿಗಳು ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ತಿರುವನಂತಪುರಂ ಪಿ.ವಿ.ಕೃಷ್ಣ ಭಟ್, ವಿದ್ಯಾರ್ಥಿ ಪರಿಷತ್ ನ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಪ್ರೊ.ರಾಜ್ ಶರಣ್ ಶಾಹಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಫೆ.2 ರಂದು ನಡೆಯುವ ಯುವ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ನಟ ನಿರ್ದೇಶಕ ನಾಟಕಕಾರ ಎಸ್.ಎನ್.ಸೇತುರಾಮ್ ಭಾಗವಹಿಸಲಿದ್ದಾರೆ. ಈ ಸಾಲಿನ ಯುವ ಪುರಸ್ಕಾರ ಪ್ರಶಸ್ತಿಯನ್ನು ಸಾಮಾಜಿಕ ಸೇವಾ ಕ್ಷೇತ್ರ ಮೈಸೂರು ಸತೀಶ್ ಮೇತ್ರಿ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.ಸಮ್ಮೇಳನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಪ್ರಾಂತ ಪ್ರಚಾರಕ ನಂದೀಶ್ ಆರ್‌ಎಸ್‌ಎಸ್ 100 ಪಂಚ ಪರಿವರ್ತನೆ ಕುರಿತು, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ.ಎಸ್ ಕ್ಯಾಂಪಸ್ ಕಾರ್ಯ ವಿಷಯದ ಕುರಿತು, ಡಾ.ಎಚ್‌.ಕೆ.ಸತೀಶ್ ಶೈಕ್ಷಣಿಕ ವ್ಯವಸ್ಥೆಯ ಕುರಿತು ಮೂರು ವಿಶೇಷ ಭಾಷಣಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.ಈ ಸಮ್ಮೇಳನದ ಯುವ ಮಂಚ್ ವೇದಿಕೆಯಲ್ಲಿ ಯುವ ಸ್ಪಂದನ ತಂತ್ರಜ್ಞಾನದೊಂದಿಗೆ ಸಮಾಜ ಜೀವನ ಎಂಬ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಈ ಗೋಷ್ಠಿಯಲ್ಲಿ ಯುವಜನತೆ ಮತ್ತು ಸಮಾಜ, ಯುವಜನತೆ ಮತ್ತು ತಂತ್ರಜ್ಞಾನ, ಯುವ ಜನತೆ ಮತ್ತು ಪರಿಸರ ಕುರಿತಾಗಿ ಚರ್ಚೆ ನಡೆಯಲಿದೆ ಎಂದ ಅವರು, ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಸಮ್ಮೇಳನದ ಭವ್ಯ ಶೋಭಾಯಾತ್ರೆ ಹಾಗೂ ವಾಸವಿ ಮೈದಾನದಲ್ಲಿ ಸಂಜೆ 6 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದ್ದು, ಮುಖ್ಯ ಭಾಷಣಕಾರರಾಗಿ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಶಾಲಿನಿ ವರ್ಮ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಸಮ್ಮೇಳನದಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ರಾಜ್ಯದ ಪ್ರಸಕ್ತ ವರ್ತಮಾನ ಸ್ಥಿತಿಗತಿ, ರಾಜ್ಯದ ವಿಶ್ವವಿದ್ಯಾಲಯಗಳ ಪರಿಸ್ಥಿತಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಬಲವರ್ಧನೆ ಹಾಗೂ ಪ್ರಕೃತಿ ಮತ್ತು ಯುವಜೀವನ ಶೈಲಿ ಎಂಬ ವಿಷಯಗಳ ಕುರಿತಾಗಿ ೪ ನಿರ್ಣಯಗಳನ್ನು ಮಂಡಿಸಿ ಚರ್ಚೆಗೊಳಪಡಿಸಿ ಅಂಗೀಕರಿಸಲಾಗುವುದು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪುನೀತ್, ಸುಧಾ ಶೆಣೈ, ಅಭಿ, ರಂಜನಿ ಉಪಸ್ಥಿತರಿದ್ದರು.