ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಹೊಸಪೇಟೆ ತಹಸೀಲ್ದಾರ್‌ ಕಚೇರಿ ಎದುರು ಸೋಮವಾರ ಬೃಹತ್‌ ಪ್ರತಿಭಟನೆ ನಡೆಯಿತು.

ಹೊಸಪೇಟೆ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ತಹಸೀಲ್ದಾರ್‌ ಕಚೇರಿ ಎದುರು ಸೋಮವಾರ ಬೃಹತ್‌ ಪ್ರತಿಭಟನೆ ನಡೆಯಿತು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿರುವ ಗುಂಡಿನ ದಾಳಿ ಹೇಡಿತನದ ಕೃತ್ಯವಾಗಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದು ಸಾರ್ವಕಾಲಿಕ ಸತ್ಯವಾಗಿದ್ದು, ಅಲ್ಲಿನ ಪ್ರತ್ಯೇಕವಾದದ ಮನಸ್ಥಿತಿ ಬದಲಾಯಿಸಲು, ಜನ, ಜೀವನ ಸ್ಥಿತಿ-ಗತಿಗಳನ್ನು ಸ್ಥಿರಗೊಳಿಸಿ, ಶಾಂತಿಯುತ ಕಾಶ್ಮೀರ ಎಂಬುದನ್ನು ಸಾಬೀತುಪಡಿಸಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಈ ಮಧ್ಯೆ ಪಾಕಿಸ್ತಾನದ ಕುಮ್ಮಕ್ಕಿನಿಂದ ಉಗ್ರಗಾಮಿಗಳು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಉಗ್ರಗಾಮಿಗಳನ್ನು ಕೇಂದ್ರ ಸರ್ಕಾರ ಸದೆಬಡಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಬಿಗಿ ಭದ್ರತೆ ಒದಗಿಸಿದರೂ ಭಯೋತ್ಪಾದಕರ, ನುಸುಳುಕೋರರ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ಉಗ್ರರ ವಿರುದ್ಧ ವ್ಯಾಪಕ ಕಠಿಣ ಕ್ರಮಗಳನ್ನು ಕೈಗೊಂಡು ತಕ್ಕ ಉತ್ತರವನ್ನು ನೀಡಬೇಕು. ಕಾಶ್ಮೀರದಲ್ಲಿ ಈಗಾಗಲೇ ಕಲಂ 370 ರದ್ದುಪಡಿಸಲಾಗಿದೆ. ಶಾಂತಿ, ಸಹಬಾಳ್ವೆ ಇದ್ದರೂ ಮೇಲಿಂದ ಮೇಲೆ ಇಂತಹ ದುಷ್ಕೃತ್ಯ ಎಸಗುತ್ತಿರುವುದು ಖಂಡನೀಯ. ಇಂತಹ ಕೃತ್ಯಗಳು ಮರುಕಳಿಸದಿರುವಂತೆ ಇನ್ನಷ್ಟು ಬಿಗಿ ಭದ್ರತೆ ಹಾಗೂ ಪ್ರವಾಸಿ ತಾಣಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಉಗ್ರಗಾಮಿಗಳು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದಾರೆ. ಈ ಉಗ್ರಗಾಮಿ ಸಂಘಟನೆಯನ್ನು ಬುಡಸಮೇತ ಕಿತ್ತು ಹಾಕಬೇಕು. ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಕ ಪಾಠ ಕಲಿಸಬೇಕು. ದೇಶದ ಜನರು ಈಗಾಗಲೇ ಉಗ್ರಗಾಮಿಗಳ ವಿರುದ್ಧ ಒಂದಾಗಿದ್ದಾರೆ. ಇಂತಹ ನೀಚ ಕೃತ್ಯವೆಸಗಿದವರಿಗೆ ಪಾಠ ಕಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಎಬಿವಿಪಿ ಮುಖಂಡರಾದ ಅಭಿಷೇಕ್, ಧನುಷ್, ಹನುಮೇಶ್, ಭರತ್, ನಾಗರಾಜ್, ಪ್ರವೀಣ್ ಕುಮಾರ, ಅಶ್ವಿನಿ, ಪೂಜಾ ಮತ್ತಿತರರಿದ್ದರು.