ಕಾಲೇಜಿನ ಬಳಿ ಬಸ್ ನಿಲುಗಡೆಗೊಳಿಸುವಂತೆ ಹಲವು ಬಾರಿ ಪ್ರತಿಭಟನೆಯನ್ನು ನಡೆಸುವ ಜೊತೆಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ವಿದ್ಯಾರ್ಥಿಗಳ ಬೇಡಿಕೆ ಈಡೇರಿಲ್ಲ.
ಕಂಪ್ಲಿ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಮೀಪ ಬಸ್ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಶಾಖಾ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಪ್ತಗಿರಿ ಮಂಚಿಕಂಠಿ ಮಾತನಾಡಿ, ಪಟ್ಟಣದಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸುಮಾರು 4 ಕಿ.ಮೀ. ದೂರವಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಲೇಜಿನ ಬಳಿ ಬಸ್ ನಿಲುಗಡೆಗೊಳಿಸುವಂತೆ ಹಲವು ಬಾರಿ ಪ್ರತಿಭಟನೆಯನ್ನು ನಡೆಸುವ ಜೊತೆಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ವಿದ್ಯಾರ್ಥಿಗಳ ಬೇಡಿಕೆ ಈಡೇರಿಲ್ಲ. ಇದರಿಂದಾಗಿ ನಿತ್ಯ ನೂರಾರು ವಿದ್ಯಾರ್ಥಿಗಳು 4 ಕಿ.ಮೀ.ನಷ್ಟು ದೂರ ನಡೆದುಕೊಂಡು ಹೋಗುವ ಸ್ಥಿತಿ ಉಲ್ಬಣವಾಗಿದೆ. ಅಲ್ಲದೇ ಬಸ್ ಸಮಸ್ಯೆಯ ಕಾರಣದಿಂದ ಎಷ್ಟೋ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದನ್ನೇ ನಿಲ್ಲಿಸಿ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಬಸ್ ನಿಲುಗಡೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಪಾದಯಾತ್ರೆ:ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೂ ವಿದ್ಯಾರ್ಥಿಗಳು ತಳ್ಳುವ ಬಂಡಿಯಲ್ಲಿ ಬ್ಯಾಗ್ ಗಳನ್ನು ಹಾಕಿ ಪಾದಯಾತ್ರೆ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದರು. ಬಳಿಕ ಕೆಲಹೊತ್ತು ರಸ್ತೆ ತಡೆದು ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಸಂಚಾರಿ ನಿಯಂತ್ರಣಾಧಿಕಾರಿ ಆದಿಶೇಷ, ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ಸಾಧ್ಯವಾದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಳವಾರ ಭರತ್ ಸೇರಿದಂತೆ ವಿದ್ಯಾರ್ಥಿಗಳಾದ ಅನು, ಜಯಲಕ್ಷ್ಮಿ, ಅನುಷಾ, ಕಾರ್ತೀಕ್, ಶಶಾಂಕ, ರಾಮು ಹಾಗೂ ಅನೇಕರು ಭಾಗವಹಿಸಿದ್ದರು.