ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ವಿವಿಧ ಹೋಟೆಲ್ ಹಾಗೂ ಬೇಕರಿಗಳಿಗೆ ದಾಳಿ ಮಾಡಿದ ಪುರಸಭೆ ಆಡಳಿತಾಧಿಕಾರಿಗಳೂ ಆದ ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸಿದರು.ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಬಸವರಾಜು, ಹಿರಿಯ ಆರೋಗ್ಯ ಪರಿವೀಕ್ಷಕರಾದ ಶೀಳನೆರೆ ಸತೀಶ್, ಅಶೋಕ್, ಪರಿಸರ ಎಂಜಿನಿಯರ್ ಪ್ರಿಯಾಂಕಾ, ಗ್ರಾಮ ಆಡಳಿತಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಪಟ್ಟಣದ ವಿವಿಧ ಬೇಕರಿಗಳು ಹಾಗೂ ಹೋಟೆಲ್ ಗಳ ಮೇಲೆ ದಾಳಿ ನಡೆಸಿದರು.
ಈ ವೇಳೆ ಎಸಿ ಕೆ.ಆರ್.ಶ್ರೀನಿವಾಸ್ ಪ್ಲಾಸ್ಟಿಕ್ ಬಳಕೆ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಬೇಕರಿಗಳು ಹಾಗೂ ಹೋಟೆಲ್ ಗಳಲ್ಲಿ ಪಾರ್ಸಲ್ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ಹ್ಯಾಂಡ್ ಕವರ್‌ಗಳು ಹಾಗೂ ಪ್ಲಾಸ್ಟಿಕ್ ಶೀಟುಗಳನ್ನು ವಶಪಡಿಸಿಕೊಂಡರು.ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಕೇಕುಗಳು ಸಿಹಿ ತಿಂಡಿಗಳು ಹಾಗೂ ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೆಮಿಕಲ್ ಯುಕ್ತ ಬಣ್ಣಗಳನ್ನು ಬಳಸುತ್ತಿರುವುದನ್ನು ಗಮನಿಸಿದ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ರಾಸಾಯನಿಕ ಹಾಗೂ ವಿಷದಿಂದ ಕೂಡಿರುವ ಕೃತಕ ಬಣ್ಣಗಳನ್ನು ಆಹಾರ ಉತ್ಪಾದನೆಯಲ್ಲಿ ಬಳಸಿ ಶ್ರೀಸಾಮಾನ್ಯರ ಆರೋಗ್ಯದೊಂದಿಗೆ ಚೆಲ್ಲಾಟವಾಡದೇ ವಿಷದಿಂದ ಕೂಡಿರುವ ಕೆಮಿಕಲ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಹೋಟೆಲ್ ಗಳು, ಬೇಕರಿಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ಸೀಲ್ ಮಾಡಿ ಮುಚ್ಚಿಸುವುದಾಗಿ ಎಚ್ಚರಿಕೆ ನೀಡಿದರು.
ಕೇಕ್ ತಯಾರಿಕೆ ಮತ್ತಿತರ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆ ಮಾಡುತ್ತಿರುವ ಕ್ಯಾನ್ಸರ್ ಕಾರಕ ಬಣ್ಣವನ್ನು ಸಾರ್ವಜನಿಕರ ಕೈಗಳಿಗೆ ಹಾಕಿ ನೀರಿನಿಂದ ತೊಳೆಸಿ ಪರಿಶೀಲಿಸಿದ ಡಾ.ಕೆ.ಆರ್.ಶ್ರೀನಿವಾಸ್ ನೀರಿನಿಂದ ತೊಳೆದರೂ ಹೋಗದೆ ಕೈಗೆ ಅಂಟಿದ್ದ ಕೃತಕ ಬಣ್ಣದ ಪದಾರ್ಥವನ್ನು ತಿಂದು ಆರೋಗ್ಯ ಮತ್ತು ಬದುಕಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳದಂತೆ ಜನರಿಗೆ ತಿಳಿಸಿದರು.