ರಾಷ್ಟ್ರೀಯ ಹೆದ್ದಾರಿ 369ರಲ್ಲಿ ರಸ್ತೆಗೇ ಬಾಗಿದ ಅಕೇಶಿಯ ಮರಗಳು

| Published : Jun 30 2024, 12:52 AM IST

ಸಾರಾಂಶ

ಕೂದರೂರು ಸಮೀಪ ಬೆಳಮಕ್ಕಿ ರಾಷ್ಟೀಯ ಹೆದ್ದಾರಿ 369ಕ್ಕೆ ಬಾಗಿ ನಿಂತ ಅಕೇಶಿಯ ಮರಗಳು ವಾಹನ ಸವಾರರಲ್ಲಿ ಆತಂಕ ತಂದೊಡ್ಡಿವೆ.

ಪ್ರದೀಪ್ ಮಾವಿನ ಕೈ

ಕನ್ನಡಪ್ರಭ ವಾರ್ತೆ ಬ್ಯಾಕೋಡು

ತಾಲೂಕಿನ ರಾಷ್ಟೀಯ ಹೆದ್ದಾರಿ 369ರ ಸಸಿಗೊಳ್ಳಿಯಿಂದ ಸಿಗಂಧೂರಿನ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಎರಡು ಭಾಗಗಳಲ್ಲಿ ರಸ್ತೆಗೆ ಹೆಮ್ಮರವಾಗಿ ಬಾಗಿನಿಂತು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ವಾಹನ ಸವಾರರು ಭಯದಲ್ಲೆ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಿನನಿತ್ಯ ಸಾವಿರಾರು ಸ್ಥಳೀಯರು ಕೆಲಸ ಕಾರ್ಯಗಳಿಗೆ ಮತ್ತು ಪ್ರವಾಸಿಗರು ಕೊಲ್ಲೂರು, ಕೊಡಚಾದ್ರಿ ಮತ್ತು ಸಿಗಂದೂರು ಹೋಗಲು ಇದೇ ಮಾರ್ಗವನ್ನು ಬಳಸುತ್ತಿದ್ದು ಹಾಗೂ ಮೇವಿಗಾಗಿ ಜಾನುವಾರುಗಳು ಮೇಯಲು ರಸ್ತೆ ಬದಿಯಲ್ಲಿ ನೆಡೆದು ಹೋಗುವಾಗ ಎಲ್ಲಿ ಮರಗಳು ಮುರಿದು ಬೀಳುತ್ತವೆಯೋ ಎನ್ನುವ ಆತಂಕ ಎದುರಾಗಿದೆ.

ಮಳೆಗಾಲದಲ್ಲಿ ಹೆಚ್ಚಾಗಿ ಈ ಅಕೇಶಿಯ ಮರಗಳು ದಿನನಿತ್ಯ ಒಂದಲ್ಲ ಒಂದು ಕಡೆ ತೊಂದರೆ ಕೊಡುತ್ತಲೆ ಇರುತ್ತವೆ. ರಭಸವಾಗಿ ಬೀಸುವ ಗಾಳಿಗೆ ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಹೆಚ್ಚಿದ್ದು ಕೆಲವು ಮರಗಳು ಬುಡ ಸಮೇತ ಕಿತ್ತು ಬಿದ್ದ ಉದಾಹರಣೆ ಗಳೂ ಸಾಕಷ್ಟಿವೆ.

ಅರಣ್ಯ ಇಲಾಖೆ ನಿರ್ಲಕ್ಷ್ಯ.

ಹೆದ್ದಾರಿಯಲ್ಲಿ ಪ್ರಮುಖವಾಗಿ ಎರಡು ಅರಣ್ಯ ಇಲಾಖೆಯ ಅದಿಕಾರಿಗಳು ಕರ್ತವ್ಯದಲ್ಲಿದ್ದರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವುದು ಬೇಸರ ತಂದಿದೆ.

ಸಾರ್ವಜನಿಕರೂ ಇಂತಹ ತೊಂದರೆ ಕೊಡುವ ಮರಗಳನ್ನು ಕಡಿತಲೆ ಮಾಡಲು ಹೊದಾಗ ಅಕ್ರಮ ಮರ ಕಡಿತಲೆ ಕೆಸ್ ದಾಖಲಾಗುವುದು ಪಕ್ಕಾ. ಹೀಗಿದ್ದಾಗ ಅರಣ್ಯ ಇಲಾಖೆ ಸೂಕ್ತ ನಿಯಮಾನುಸಾರ ಮಾರಗಳನ್ನು ತೆರವುಮಾಡಲು ಏಕೆ ಆಸಕ್ತಿ ತೋರುತ್ತಿಲ್ಲ ಎಂಬುದು ಕರೂರು ಹೋಬಳಿಯ ಸಾರ್ವಜನಿಕರ ಪ್ರಶ್ನೆಯಾಗಿದೆ.

ವಿದ್ಯುತ್ ಸಂಪರ್ಕಕ್ಕೂ ಅಡ್ಡಿ:

ಸಾರ್ವಜನಿಕರಿಂದ ದೂರು ಬಂದಾಗ ಮೆಸ್ಕಾಂ ಸಿಬ್ಬಂದಿ ಶೀಘ್ರವೇ ಆ ಸ್ಥಳವನ್ನು ತಲುಪಿ ತೆರವು ಮಾಡುತ್ತದೆ. ಆದರೆ ಇತ್ತೀಚಿನ ಈ ಕೆಲಸ ಆಗುತ್ತಿಲ್ಲ, ಮಳೆಗೂ ಪೂರ್ವದಲ್ಲಿ ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಅನುಮತಿ ಬೇಕು’ ಎಂದು ಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಹುತೇಕ ವಿದ್ಯುತ್ ತಂತಿಗಳು ರಸ್ತೆ ಮತ್ತು ಅಕೇಶಿಯ ಮರಗಳ ನಡುವೆ ಹಾದು ಹೋಗಿದ್ದು ಮರದ ಕೊಂಬೆಗಳು ಮುಖ್ಯ ವಿದ್ಯುತ್ ಲೈನ್ ಮೇಲೆ ಬಿದ್ದು ಕಂಬಗಳು ಮುರಿದು ಬೀಳುತ್ತವೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಮಳೆಗಾಲದ ಸಂದರ್ಭದಲ್ಲಿ ವಾರಗಟ್ಟಲೆ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗುತ್ತದೆ. ಇದರಿಂದ ಶಾಲಾ ಮಕ್ಕಳು ಮನೆಯಲ್ಲಿ ಗೃಹಿಣಿಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂಬುದು ಗ್ರಾಮಸ್ಥರ ದೂರು.

ಅರಣ್ಯ ಇಲಾಖೆಯ ದ್ವಂದ್ವ ನಡೆ:

ರಸ್ತೆಗೆ ಬಾಗಿರುವ ಮರಗಳನ್ನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರಾದ ಸಿ.ವೆಂಕಟೇಶ್. ಸಾರ್ವಜನಿಕ ಹಿತದೃಷ್ಟಿಯಿಂದ ಜನರು ತೆರವಿಗೆ ಮುಂದಾದರೂ ಅರಣ್ಯ ಇಲಾಖೆ ಅಧಿಕಾರಿಗಳು ದಂಡ ವಿಧಿಸಿ, ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಹೀಗಾಗಿ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಹೆದ್ದಾರಿಗೆ ಮರಗಳು ಬಾಗಿರುವುದು ಗಮನಕ್ಕೆ ಬಂದಿದ್ದು ರಸ್ತೆ ಹಾದುಹೋಗುವಲ್ಲಿ ರೈತರ ಖಾತೆ ಭೂಮಿಯಲ್ಲಿ ಇರುವ ಮರಗಳಿದ್ದರೆ ರೈತರು ಕಡಿತಲೆ ಮಾಡಲು ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಆಪಾಯ ಕಾರಿ ಮರಗಳ ತೆರವಿಗೆ ಶ್ರೀಘವೇ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹೇಳಿದರು.

ಇನ್ನು, ಮುಂಗಾರು ಚುರುಕಾಗಿದ್ದು, ಗಾಳಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿರುದರಿಂದ ಮಕ್ಕಳು ಇದೇ ಮಾರ್ಗದಲ್ಲಿ ಹಾದು ಹೋಗುವುದರಿಂದ ಅವಘಡ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಮರಗಳ ತೆರವು ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಕುದರೂರಿನ ಎಂ.ಸುಧಾಕರ್.