ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವವಿದ್ಯಾನಿಲಯಗಳು ಶೈಕ್ಷಣಿಕ ಕಲಿಕೆ ಮತ್ತು ಕೈಗಾರಿಕಾ ಅಗತ್ಯಕ್ಕೆ ಪೂರಕವಾಗಿ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳದರು.ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯು ಸೋಮವಾರ ಆಯೋಜಿಸಿದ್ದ 7ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
ಪ್ರಸ್ತುತ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಎದುರಿಸುತ್ತಿರುವ ಸವಾಲುಗಳಲ್ಲಿ ಹೊಂದಾಣಿಕೆಸಮಸ್ಯೆ ಕಾಡುತ್ತಿದೆ. ಶಿಕ್ಷಣ ವ್ಯವಸ್ಥೆ ಮತ್ತು ಕೈಗಾರಿಕಾ ಅಗತ್ಯತೆಯ ನಡುವೆ ಹೊಂದಾಣಿಕೆ ಕೊರತೆ ಹೆಚ್ಚಾಗಿದ್ದು, ವಿವಿಗಳು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಅವರು ಹೇಳಿದರು.ಶಿಕ್ಷಣವು ಸಾಮಾಜಿಕ ಮತ್ತು ಆರ್ಥಿಕತೆಯ ನಡುವಿನ ಅಂತರವನ್ನು ಕಡಮೆ ಮಾಡಬೇಕಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಕೈಗಾರಿಕೆಗೆ ಪೂರಕವಾದ ಕೌಶಲ್ಯವು ವಿದ್ಯಾರ್ಥಿಗಳನ್ನು ಉದ್ಯೋಗಸ್ಥರನ್ನಾಗಿಸುವ ಜೊತೆಗೆ ಅವರು ಸಮಾಜದಲ್ಲಿ ಅರ್ಥಪೂರ್ಣ ಜೀವನ ನಡೆಸಲು ನೆರವಾಗುತ್ತದೆ ಎಂದರು.
ಪದವಿ ಪೂರೈಸಿರುವ ನಿಮಗೆ ಈ ಸಂದರ್ಭದಲ್ಲಿ ತಾಂತ್ರಿಕತೆ ಕುರಿತು ಕಿವಿಮಾತು ಹೇಳಬೇಕಾಗುತ್ತದೆ. ತಾಂತ್ರಿಕತೆಯು ನಿಮ್ಮ ಭವಿಷ್ಯವನ್ನು ರೂಪಿಸಲು ನೆರವಾಗುತ್ತದೆ. ಪ್ರಸಕ್ತ 2025ರಲ್ಲಿ ನಾವು ಮತ್ತೊಂದು ಕೈಗಾರಿಕಾ ಕ್ರಾಂತಿಗೆ ಸಾಕ್ಷಿಯಾಗುತ್ತೇವೆ. ಏಕೆಂದರೆ ಕೃತಿಕ ಬುದ್ಧಿಮತ್ತೆ, ಮೆಕ್ಯಾನಿಕಲ್‌ಲರ್ನಿಂಗ್, ದತ್ತಾಂಶ ವಿಜ್ಞಾನ, ಕ್ವಾಂಟಮ್ ಕಂಪ್ಯೂಟಿಂಗ್, ಡಿಜಿಟಲ್ ಟ್ರಾನ್ಸಫರ್ಮೇಷನ್, ಹೆಲ್ತ್‌ಅಂಡ್ ಬಯೋ ಸೈನ್ಸಸ್. ಈ ಕ್ಷೇತ್ರದಲ್ಲಿ ಅಸಾಧಾರಣ ಕ್ರಾಂತಿ ಆಗುತ್ತಿದೆ. ಅಂತಾರಾಷ್ಟ್ರೀಯ ದತ್ತಾಂಶ ನಿಗಮದ ಮಾಹಿತಿಯಂತೆ ಜಾಗತಿಕ ಆರ್ಥಿಕತೆಯಲ್ಲಿ 19.9 ಟ್ರಿಲಿಯನ್ ಡಾಲರ್ ಕೊಡುಗೆಯನ್ನು ಇವು ನೀಡುತ್ತವೆ ಎಂದರು.2030ರ ವೇಳೆಗೆ ವಿಶ್ವದಲ್ಲಿ 5.5 ಬಿಲಿಯನ್ ಅಂತರ್ಜಾಲ ಬಳಕೆದಾರರು ಇರುತ್ತಾರೆ. ಶೇ. 90ರಷ್ಟು ಜನರು ಇಂಟರ್‌ನೆಟ್ ಬಳಸುತ್ತಾರೆ. ಭಾರತದ ಶಿಕ್ಷಣ ವ್ಯವಸ್ಥೆಯು ರೂಪಾಂತರಗೊಳ್ಳುತ್ತಿದೆ. ಸರ್ಕಾರದ ನೀತಿಗಳು ಆರ್ಟಿಫಿಸಿಯಲ್ ಇಂಟಲಿಜೆನ್ಸ್‌ಮತ್ತು ಡಾಟಾ ಸೈನ್ಸ್‌ಅನ್ನು ಶಾಲೆ ಮತ್ತು ವಿವಿ ಮಟ್ಟದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ. ಇಷ್ಟೆಲ್ಲಾ ತಂತ್ರಜ್ಞಾನದ ಜೊತೆಗೆ ಸೈಬರ್ ಸೆಕ್ಯೂರಿಟಿಯನ್ನು ನಾವು ನಿರ್ಲಕ್ಷಿಸುವಂತಿಲ್ಲ. ಅದರ ಬಗ್ಗೆಯೂ ಗಮನ ಕೇಂದ್ರೀಕರಿಸಬೇಕಾಗುತ್ತದೆ ಎಂದರು.
ವಿದ್ಯಾರ್ಥಿಗಳಾದ ನಿಮ್ಮ ಮುಂದೆ ಉಜ್ವಲ ಭವಿಷ್ಯ ಮತ್ತು ಅವಕಾಶವಿದೆ. ನೀವು ನಿಮ್ಮ ಭವಿಷ್ಯದ ಶಿಲ್ಪಿಗಳಾಗಬೇಕು. ಸುಸ್ಥಿರ ಅಭಿವೃದ್ಧಿ ಮತ್ತು ಸಂಶೋಧನೆಗೆ ಮುಂದಾಗಬೇಕು. ಎದುರಾಗುವ ಸವಾಲುಗಳನ್ನು ಅವಕಾಶವಾಗಿ ಬದಲಿಸಿಕೊಂಡು ಮುನ್ನುಗ್ಗಬೇಕು ಎಂದು ಅವರು ಕಿವಿಮಾತು ಹೇಳಿದರು.ಚಿನ್ನದ ಪದಕ ಪಡೆದವರು:
ಪದವಿಯಲ್ಲಿ (ಬಿಇ) ಅದಿತಿ ಭಟ್, ವಿ. ನಮ್ರತಾ, ಸಮಿಯ ಸೈಟ್, ಮೇದಿನಿ, ಸೈಫ್‌ಖಾನ್, ಕೆ. ಪುನೀತ್, ಡಿ. ಮಂಜುನಾಥ, ವಿ. ದೇವಿಕಾ, ಎಂ. ಚೈತ್ರಾ, ಎ. ಹರ್ಷಿತಾ, ಆಶಿ ಸಿಂಗ್, ಆರ್. ಗೌತಮ್‌ಸಾಗರ್, ಮಿಲ್ಲನ್‌ಬಾಂಬ್.ಬಿಸಿಎ ನಲ್ಲಿ ಎಚ್.ವಿ. ಅನುಷಾ ಚಿನ್ನದ ಪದಕ ಪಡೆದರು.
(ಎಂ ಟೆಕ್) ಆರ್. ಆಕ್ಷರಾ, ಕೆ. ರುಚಿತಾ, ಕೆ.ಜೆ. ಹರ್ಷಜಿತ್, ಮೋದಕ್‌ಸಿ. ಬಸಪ್ಪ, ಎಂ.ಡಿ. ಯದುನಂದನ್‌ಮತ್ತು ಡಿ.ಎಸ್. ಪೂಜಾ, ಎಂಸಿಎ: ಶ್ರೀಪ್ರಿಯಾ ಎಸ್. ಪಾಠಕ್. ಎಂಎಸ್ಸಿ - ಎಂ. ಸೋನು, ಪಿ. ತಶ್ವಿನಿ ನಾಂಜಪ್ಪ, ಎಚ್.ಸಿ. ಶುಭದಾ, ಕೆ.ಎ. ಕೀರ್ಥನಾ, ಎಂ. ಸ್ಫೂರ್ತಿ ಅವರು ಚಿನ್ನದ ಪದಕ ಗಳಿಸಿದ್ದಾರೆ.ಎಂಬಿಎ- ಬಿ.ಎಲ್. ಗಾನವಿ ಅರಸ್. ಡಿಎಂ- ಬಿ.ಎನ್. ಸಿಂಚನಾ. ಎಫ್‌ಎಂ- ಕೆ.ವಿ. ಸುಪ್ರಿತಾ. ಆರ್.ಎಂ- ಮೆಹಕ್‌ಎ. ಕರ್ಲೋ ಅವರು ಚಿನ್ನದ ಪದಕಗಳಿಸಿದ್ದಾರೆ.
ಸುತ್ತೂರ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ. ಸುರೇಶ್ ಇದ್ದರು. ಕುಲಪತಿ ಡಾ.ಎ.ಎನ್. ಸಂತೋಷ್ ಕುಮಾರ್ ಸ್ವಾಗತಿಸಿದರು. ಕುಲಸಚಿವ ಡಾ.ಎಸ್.ಎ. ಧನರಾಜ್ ಮತ್ತು ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಪಿ. ನಂಜುಂಡಸ್ವಾಮಿ ಮೊದಲಾದವರು ಇದ್ದರು.