ಕಲಾವಿದರ ಸಾಧನೆ ದಾಖಲಿಸಲು ಅಕಾಡೆಮಿ ಹಂಬಲ: ಕುಮಾರ

| Published : Jun 20 2024, 01:08 AM IST

ಸಾರಾಂಶ

ದಾವಣಗೆರೆ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ನಡೆದ ಅಕ್ಷರ ಸಿಂಗಾರೋತ್ಸವ ಪ್ರದರ್ಶನವನ್ನು ಪ.ಸ.ಕುಮಾರ ಉದ್ಘಾಟಿಸಿ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ಲಲಿತಕಲಾ ಅಕಾಡೆಮಿ ಕನ್ನಡ ಲಿಪಿ ವೈಶಿಷ್ಟ್ಯಪೂರ್ಣ ಪ್ರಸ್ತುತಿ ಇರುವ ಲಿಪಿಗಾರಿಕೆ ಪ್ರೋತ್ಸಾಹಿಸಲು ಬಯಸುತ್ತದೆ. ಇಂತಹ ಕಲಾವಿದರು ಕಲಾ ಪ್ರದರ್ಶನ ನಡೆಸಲು, ಅವರ ಸಾಧನೆ ದಾಖಲೀಕರಣ ಮಾಡಲು ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಂಬಲಿಸುತ್ತದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ ಹೇಳಿದರು.

ನಗರದ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಕಲಾ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ, ದಾವಣಗೆರೆ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಕ್ಷರ ಸಿಂಗಾರೋತ್ಸವ-3 ಕನ್ನಡ ಅಕ್ಷರ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ನಾನು, ಚಂದ್ರನಾಥ ಆಚಾರ್ಯ, ರಮೇಶ್ ಮೊದಲಾದವರು ವೈಶಿಷ್ಟ್ಯಪೂರ್ಣವಾಗಿ ಕನ್ನಡ ಲಿಪಿ ಬರೆಯುವದನ್ನು ರೂಢಿಸಿಕೊಂಡಿದ್ದೆವು. ಪತ್ರಿಕೆ ವಲಯದಲ್ಲಿ ಕೂಡ ಇದು ಒಪ್ಪಿತವಾಯಿತು. ಇದೀಗ ಸುರೇಶ್ ವಾಘ್ಮೋರೆ ಮತ್ತವರ ಸ್ನೇಹಿತರ ತಂಡ ಅಕ್ಷರ ಸಿಂಗಾರೋತ್ಸವ-3 ಹೆಸರಲ್ಲಿ ಇಲ್ಲಿ ಬಗೆಬಗೆಯ ವಿನ್ಯಾಸದಲ್ಲಿ ಕನ್ನಡ ಲಿಪಿ ಬರೆದು ಪ್ರದರ್ಶನ ಮಾಡುತ್ತಿರುವುದು ಬಹಳ ಪ್ರಶಂಸನೀಯ ಸೇವೆ ಎಂದರು.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್.ಮುರಿಗೇಂದ್ರಪ್ಪ ಅಧ್ಯಕ್ಷತೆ ವಹಿಸಿ, ದೃಶ್ಯ ಕಲಾ ಕಾಲೇಜು ಇತ್ತೀಚೆಗೆ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನತೆಗೆ ಹೆಚ್ಚು ಪರಿಚಯವಾಗುತ್ತಿದೆ. ಇಂದು ಕಲೆ, ಕಲಾ ಶಾಲೆ, ಕಲಾ ಪರಿಸರ ಉಳಿಸಲು ಹೋರಾಟ ಮಾಡಬೇಕಾದ ಸಂದರ್ಭವಿದೆ. ಕಲಾ ಶಾಲೆಗಳಲ್ಲಿ, ದೃಶ್ಯ ಕಲಾ ಕಾಲೇಜುಗಳಲ್ಲಿ ಬೋಧಕರನ್ನು ಕಾಯಂ ನೇಮಿಸಿಕೊಳ್ಳುವುದು ಸೇರಿ ದೃಶ್ಯ ಕಲಾ ವಲಯದ ಸಮಸ್ಯೆ ಪರಿಹರಿಸಲು ಕರ್ನಾಟಕ ಲಲಿತ ಕಲಾ ಅಕಾಡೆಮಿಯೂ ಪ್ರಯತ್ನ ಮಾಡಬೇಕು. ಕಲಾ ವಿದ್ಯಾರ್ಥಿಗಳು, ಕಲಾವಿದರು ತಮ್ಮ ಪ್ರತಿಭೆ ಮುಕ್ತ ಮನಸ್ಸಿನಿಂದ ಬೇರೆಯವರಿಗೂ ಹಂಚಬೇಕು. ಇದರಿಂದ ಕಲಾವಲಯ ಬೆಳೆಯಲು ಉಳಿಯಲು ಸಹಾಯ ಆಗುತ್ತದೆ ಎಂದರು.

ಪ್ರಾಚಾರ್ಯ ಡಾ.ಜೈರಾಜ ಚಿಕ್ಕ ಪಾಟೀಲ್ ಅಕ್ಷರ ಕಲಾಕೃತಿ ಪ್ರದರ್ಶನ ಕುರಿತು, ಕನ್ನಡ ಲಿಪಿಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ದೃಶ್ಯ ಕಲಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸತೀಶಕುಮಾರ ಪಿ. ವಲ್ಲೇಪುರೆ, ಅಕ್ಷರ ಸಿಂಗಾರೋತ್ಸವ-3 ತಂಡದ ಮುಖಂಡ ಸುರೇಶ್ ವಾಘ್ಮೋರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾರದಾ ಜಾವಗಲ್ ಪ್ರಾರ್ಥಿಸಿದರು. ದೃಶ್ಯ ಕಲಾ ಮಹಾವಿದ್ಯಾಲಯ ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಅಕ್ಷರ ಸಿಂಗಾರೋತ್ಸವ ತಂಡದ ಸದಸ್ಯ ಟಿ.ಬಿ.ಕೋಡಿಹಳ್ಳಿ ಸ್ವಾಗತಿಸಿ, ವಂದಿಸಿದರು.

ಹಿರಿಯ ಪತ್ರಕರ್ತ ಬಾ.ಮ.ಬಸವರಾಜಯ್ಯ, ಎ.ಮಹಾಲಿಂಗಪ್ಪ, ಜಿ.ಎಚ್.ಸೂಗೂರ, ಬಾಬು ಜತ್ಕರ್, ಬೋಧನಾ ಸಹಾಯಕರುಗಳಾದ ಶಿವಶಂಕರ ಸುತಾರ್, ಡಾ.ಸಂತೋಷ ಕುಲಕರ್ಣಿ, ಡಾ.ಗಿರೀಶ್ ಕುಮಾರ್, ಹರೀಶ್ ಹೆಡ್ನವರ್, ಪ್ರಮೋದ ಆಚಾರ್, ನವೀನ್ ಆಚಾರ್, ಅರುಣ್ ಕಮ್ಮಾರ, ರಂಗನಾಥ ಕುಲಕರ್ಣಿ, ಡಿ.ಎಚ್.ಸುರೇಶ, ಸಿಬ್ಬಂದಿ ನಂದಕುಮಾರ್, ಶಿವಕುಮಾರ್, ನಾಗರಾಜ್, ಮೊದಲಾದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಲಾ ಪ್ರದರ್ಶನದಲ್ಲಿ ಸುರೇಶ್ ವಾಘ್ಮೋರೆ, ಅನಿಮೀಶ್ ನಾಗನೂರು, ಟಿ.ಬಿ.ಕೋಡಿಹಳ್ಳಿ, ಜಿ.ಹರಿಕುಮಾರ್, ಶ್ವೇತಾ, ಪ್ರಸನ್ನ ರೇವನ್ ಮೊದಲಾದವರ ಅಕ್ಷರ ಕಲಾಕೃತಿಗಳು ಗಮನ ಸೆಳೆದವು.

ಇಂದು ನಾಡಿನಲ್ಲಿ ಒಳ್ಳೆಯ ಇಲ್ಲಸ್ಟೇಟರ್‌ಗಳು ಬಹಳ ಇದ್ದಾರೆ. ಅಂಥವರೂ ದಾಖಲೀಕರಣ ಆಗಬೇಕು. ಅಲ್ಲದೇ, ಕಲಾ ವಿದ್ಯಾರ್ಥಿಗಳು ಎಲ್ಲ ಪ್ರಕಾರದ ಕಲೆಗಳಿಗೂ ಮುಕ್ತವಾಗಿ ತೆರೆದುಕೊಂಡು, ಆಸಕ್ತಿ ವಹಿಸಿ ಅಭ್ಯಸಿಸಬೇಕು, ಅವಲೋಕಿಸಬೇಕು.

ಪ.ಸ.ಕುಮಾರ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ