ಸಾರಾಂಶ
ಕಾರಟಗಿ: ರಸ್ತೆ ಬದಿ ನಿಂತಿದ್ದ ದ್ವಿಚಕ್ರ ವಾಹನಕ್ಕೆ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ಸವಾರನ ಎಡಗಾಲು ತುಂಡಾಗಿದ್ದು, ದ್ವಿಚಕ್ರದ ಹಿಂಬದಿಯಲ್ಲಿ ಕುಳಿತ ಸವಾರನ ಮಗನಿಗೆ ತೀವ್ರ ಗಾಯಗಳಾದ ಘಟನೆ ತಾಲೂಕಿನ ಗುಂಡೂರು ಕ್ರಾಸ್ ಬಳಿ ಮಂಗಳವಾರ ನಡೆದಿದೆ.
ತಾಲೂಕಿನ ಬೆನ್ನೂರು ಗ್ರಾಮದ ಸಿದ್ದಲಿಂಗಪ್ಪ (೩೯) ಮತ್ತು ಅವರ ಮಗ ಹರೀಶ್ (೧೩) ಇಬ್ಬರು ಅಪಘಾತದಲ್ಲಿ ಗಾಯಗೊಂಡವರು.ಬೆನ್ನೂರಿನ ಸಿದ್ದಲಿಂಗಪ್ಪ ಪುತ್ರ ಹರೀಶ ಕನಕಗಿರಿಯ ಶಾಲೆಯೊಂದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕ್ರಿಸ್‌ಮಸ್ ರಜೆ ಮುಗಿದ ಹಿನ್ನೆಲೆಯಲ್ಲಿ ಬೆನ್ನೂರಿನಿಂದ ಕನಕಗಿರಿ ಶಾಲೆಗೆ ಶಾಲೆಗೆ ಬಿಟ್ಟು ಬರಲು ದ್ವಿಚಕ್ರ ಮೂಲಕ ಸಿದ್ದಾಪುರದಿಂದ ಗುಂಡೂರು ರಸ್ತೆ ಮೂಲಕ ಕನಕಗಿರಿಗೆ ಹೋಗುವ ವೇಳೆ ಗುಂಡೂರು ಕ್ರಾಸ್ ಬಳಿ ನಿಂತಿದ್ದರು. ಈ ವೇಳೆ ಗಂಗಾವತಿಯಿಂದ ಸಿಂಧನೂರು ಕಡೆಗೆ ಹೊರಟಿದ್ದ ಕಾರೊಂದು ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸಿದ್ದಲಿಂಗಪ್ಪನ ಎಡಗಾಲಿನ ಪಾದ ತುಂಡಾಗಿ ಬಿದ್ದಿದ್ದರೆ, ಅವರ ಮಗ ಹರೀಶಗೆ ತೀವ್ರ ಗಾಯಗಳಾಗಿವೆ. ಚಾಲಕನ ನಿರ್ಲಕ್ಷ್ಯತನದಿಂದ ಈ ಅಪಘಾತ ಸಂಭವಿಸಿದೆ ಎಂದು ಗಾಯಗೊಂಡ ಬೈಕ್ ಸವಾರನ ಸಹೋದರ ರಮೇಶ ಎಂಬುವವರು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.