ಕನ್ನಡಪ್ರಭ ವಾರ್ತೆ ಮಂಡ್ಯ
ಮೊಪೆಡ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಳಲು ಗ್ರಾಮದ ಪಟ್ಟಲದಮ್ಮ ದೇವಸ್ಥಾನದ ಬಳಿ ನಡೆದಿದೆ. ತಾಲೂಕಿನ ಚಂದಗಾಲು ಸಮೀಪದ ಕುರಿಕೊಪ್ಪಲು ಗ್ರಾಮದ ಬಿಜೆಪಿ ಮುಖಂಡ ಕೆ.ಆನಂದ್ ಅವರ ಪುತ್ರ ಕೆ.ಎ. ಹರ್ಷಿತ್ (34) ಮೃತ ಯುವಕ. ಮಂಡ್ಯ ಕಡೆಯಿಂದ ತಮ್ಮ ಗ್ರಾಮಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ ಮೊಪೆಡ್ ಸವಾರ ದಿಢೀರನೇ ಬಲಕ್ಕೆ ತಿರುಗಿದ ವೇಳೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಹರ್ಷಿತ್ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆದೊಯ್ದು, ವಾಪಸ್ಸು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಹರ್ಷಿತ್ ಅವರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಲಾರಿ, ಡಿಕ್ಕಿ: ಆಟೋ ಚಾಲಕ ಸಾವುಮಳವಳ್ಳಿ:ಲಾರಿ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಾಚನಹಳ್ಳಿಯಲ್ಲಿ ನಡೆದಿದೆ. ಮಂಡ್ಯ ತಾಲೂಕು ಗಿಡ್ಡೇಗೌಡನ ಕೊಪ್ಪಲು ಗ್ರಾಮದ ಮಂಜುನಾಥ (24) ಮೃತ ದುರ್ದೈವಿ.
ಬೆಂಗಳೂರಿನ ಲಗ್ಗರೆಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ತಮ್ಮ ಆಟೋದಲ್ಲಿ ಬೆಂಗಳೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದಾಗ ಎಳನೀರು ತುಂಬಿಕೊಂಡು ಬಂದ ಲಾರಿ ಮುಖಮುಖಿ ಡಿಕ್ಕಿ ಸಂಭವಿದ ಪರಿಣಾಮ ಆಟೋ ನಜ್ಜುಗುಜ್ಜಾಗಿ ಆಟೋ ಚಾಲಕ ತೀವ್ರವಾಗಿ ಗಾಯಗೊಂಡಿದ್ದ ಎನ್ನಲಾಗಿದೆ. ನಂತರ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟಿಪ್ಪರ್ ಲಾರಿ ಬೈಕ್‌ಗೆ ಡಿಕ್ಕಿ: ಇಬ್ಬರಿಗೆ ಗಾಯಮದ್ದೂರು: ಟಿಪ್ಪರ್ ಲಾರಿ ಬೈಕ್‌ಗೆ ಡಿಕ್ಕಿಯಾಗಿ ಚಾಲಕ ಹಾಗೂ ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಕೊಲ್ಲಿ ಸರ್ಕಲ್ ಬಳಿ ಜರುಗಿದೆ. ಪಟ್ಟಣದ ಹೊಳೆ ಬೀದಿ ನಿವಾಸಿ ಆದಿಲ್ ಪಾಶ ಪುತ್ರ ಅಸ್ಲಾಂಮ್ ಪಾಷಾ ಹಾಗೂ ಬೈಕ್ ಚಾಲನೆ ಮಾಡುತ್ತಿದ್ದ ಸೋಫಿ ಸಾದತ್ ಅಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮದ್ದೂರು ಆಸ್ಪತ್ರೆ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡ ನಂತರ ಟಿಪ್ಪರ್ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.