ಬೆಂಕಿ ಆಕಸ್ಮಿಕ: ಸೌದಿಯಲ್ಲಿ ಮೂಡುಬಿದಿರೆ ಮೂಲದ ಮಗು ಸಾವು

| Published : May 28 2024, 01:09 AM IST

ಸಾರಾಂಶ

ಸೌದಿ ರಾಷ್ಟ್ರದ ಅದಮಾದ ಲುಲು ಮಾಲ್ ಹಿಂಭಾಗದಲ್ಲಿರುವ ಅಲ್ ಹುಸೇನಿ ಕಾಂಪೌಂಡ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕೋಟೆಬಾಗಿಲು ಮೂಲದ ಶೇಖ್ ಫಹದ್ ಎಂಬವರ ಪುತ್ರ ಮೂರರ ಹರೆಯದ ಸಾಯಿಕ್ ಶೇಖ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಕೋಟೆ ಬಾಗಿಲು ನಿವಾಸಿಗಳಾಗಿದ್ದು ಪ್ರಸ್ತುತ ಸೌದಿ ಅರೇಬಿಯಾದ ದಮಾಮ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಕುಟುಂಬ ವಾಸಿಸುತ್ತಿದ್ದ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿ, ಮಗು ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

ಅದಮಾದ ಲುಲು ಮಾಲ್ ಹಿಂಭಾಗದಲ್ಲಿರುವ ಅಲ್ ಹುಸೇನಿ ಕಾಂಪೌಂಡ್‌ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಮೂಡಬಿದಿರೆಯ ಕೋಟೆಬಾಗಿಲು ಮೂಲದ ಶೇಖ್ ಫಹದ್ ಎಂಬವರ ಪುತ್ರ ಮೂರರ ಹರೆಯದ ಸಾಯಿಕ್ ಶೇಖ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕಳೆದ ಹಲವು ವರ್ಷಗಳಿಂದ ಸೌದಿಯಲ್ಲಿ ನೆಲೆಸಿರುವ ಫಹಾದ್ ಅವರ ಕುಟುಂಬ ಕಳೆದ ಆರು ತಿಂಗಳಿನಿಂದ ಫಹದ್ ಅವರ ಕುಟುಂಬವು ಈ ಹೊಸ ವಿಲ್ಲಾಕ್ಕೆ ಸ್ಥಳಾಂತರಗೊಂಡಿದ್ದರು ಎನ್ನಲಾಗಿದೆ.

ಘಟನೆಯಲ್ಲಿ ಫಹದ್ ಗಂಭೀರವಾಗಿ ಅಸ್ವಸ್ಥರಾಗಿದ್ದು ಅವರು ತೀವ್ರ ನಿಗಾದಲ್ಲಿದ್ದಾರೆ. ಕಾಪು ಮೂಲದ ಅವರ ಪತ್ನಿ ಸಲ್ಮಾ ಮತ್ತು ಇನ್ನೋರ್ವ ಪುತ್ರ ಶಾಹಿದ್ ಶೇಖ್ ಅವರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮನೆಯ ಫ್ರಿಡ್ಜ್ ನ ಗ್ಯಾಸ್ ಸಿಲಿಂಡರ್ ಸ್ಪೋಟ, ಶಾರ್ಟ್ ಸರ್ಕಿಟ್ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಫಹದ್ ಅವರ ತಂದೆ ಈಗಾಗಲೇ ತೀರಿಕೊಂಡಿದ್ದು ತಾಯಿ ಮತ್ತು ಇಬ್ಬರು ಸಹೋದರರಿಯರ ಪೈಕಿ ತಾಯಿ ಮತ್ತು ಓರ್ವ ಸಹೋದರಿ ಕೋಟೆಬಾಗಿಲಿನಲ್ಲಿ ವಾಸವಾಗಿದ್ದರು.

ರಸ್ತೆ ದುರಂತ: ಸವಾರ ಸಾವು

ಮೂಲ್ಕಿ ಸಮೀಪದ ಕವತ್ತಾರು ಕೊರಗಜ್ಜ ಕ್ಷೇತ್ರದ ಬಳಿ ಬುಲೆಟ್ ಗೆ ಟಾಟಾ ಏಸ್ ಡಿಕ್ಕಿಯಾಗಿ ಬುಲೆಟ್ ಸವಾರ ಕವತ್ತಾರು ಕೋರ್ದಬ್ಬು ದೈವಸ್ಥಾನದ ಬಳಿಯ ನಿವಾಸಿ ಸಂತೋಷ್ (42) ಮೃತ ಪಟ್ಟ ಘಟನೆ ಸೋಮವಾರ ನಡೆದಿದೆ.ಸಂತೋಷ್ ಕವತ್ತಾರು ಪರಿಸರದಲ್ಲಿ ಉದ್ಯಮಿಯಾಗಿದ್ದು ತಮ್ಮ ಬುಲೆಟ್ ನಲ್ಲಿ ಕವತ್ತಾರು ನಿಂದ ಮುಲ್ಕಿ ಕಡೆಗೆ ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸಂತೋಷ್ ಆಯತಪ್ಪಿ ರಸ್ತೆಗೆ ಬಿದ್ದಿದ್ದು ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.