ಸಾರಾಂಶ
ಕಾಟಕೇರಿ ಹರಿ ಮಂದಿರ್ ವಸತಿ ಶಾಲೆಗೆ ಆಕಸ್ಮಿಕ ಬೆಂಕಿ ತಗುಲಿ ಶಾಲೆಯ ಮೇಲ್ಛಾವಣಿ ಬೆಂಕಿಗೆ ಆಹುತಿಯಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ಸಮೀಪದ ಕಾಟಕೇರಿ ಹರಿ ಮಂದಿರ್ ವಸತಿ ಶಾಲೆಗೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಶಾಲೆಯ ಮೇಲ್ಛಾವಣಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.ಈ ವಿದ್ಯಾರ್ಥಿ ನಿಲಯದಲ್ಲಿದ್ದ ಒಟ್ಟು 51 ವಿದ್ಯಾರ್ಥಿಗಳು ಸುರಕ್ಷಿತವಾಗಿ ಹೊರ ಬಂದಿದ್ದು ಓರ್ವ ಎರಡನೇ ತರಗತಿ ವಿದ್ಯಾರ್ಥಿ ಪುಷ್ಪಕ್ (8) ಎಂಬಾತನು ಬೆಂಕಿಗೆ ಆಹುತಿಯಾಗಿದ್ದಾನೆ.
51 ಮಕ್ಕಳನ್ನು ಸ್ಥಳೀಯ ಹೋಂಸ್ಟೇಗೆ ಸ್ಥಳಾಂತರ ಮಾಡಲಾಗಿದೆ. ವೈದ್ಯರ ತಂಡ ವಿದ್ಯಾರ್ಥಿಗಳ ಆರೋಗ್ಯವನ್ನು ವಿಚಾರಿಸಿದರು. ಉಸಿರಾಟ ಮತ್ತಿತರ ತೊಂದರೆ ಬಗ್ಗೆ ಪರಿಶೀಲಿಸಿದರು. ಭುವನ್ ಎಂಬ ವಿದ್ಯಾರ್ಥಿಗೆ ಉಸಿರಾಟ ತೊಂದರೆ ಉಂಟಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ವಸತಿ ಶಾಲೆಗೆ ತಗುಲಿದ್ದ ಬೆಂಕಿಯನ್ನು ಅಗ್ನಿಶಾಮಕ ದಳ ನಂದಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಾದ ಚಂದ್ರಶೇಖರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗುರುಕುಲ ಮಾದರಿಯಲ್ಲಿ ಉಚಿತವಾಗಿ ಈ ಆಶ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದ್ದರಿಂದ ಈ ಆಶ್ರಮ ಶಾಲೆಗೆ ಒಳ್ಳೆಯ ಹೆಸರಿತ್ತು.ಕಾಟಕೇರಿ ಹರಿ ಮಂದಿರ್ ವಸತಿ ಶಾಲೆಯಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ ಜೀವ ಕಳೆದುಕೊಂಡ ಎರಡನೇ ತರಗತಿಯ ವಿದ್ಯಾರ್ಥಿ ಪುಷ್ಪಕ್, ಭಾಗಮಂಡಲ ಸಮೀಪದ ಚೆಟ್ಟಿಮಾನಿ ನಿವಾಸಿಯಾಗಿದ್ದಾನೆ.
ಈ ಮಗುವಿನ ತಾಯಿ ತ್ರಿವೇಣಿ, ಕುಂದಾಚೇರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರೆ. ಬಾಲಕನ ತಂದೆ ಕೃಷಿಕರಾಗಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ಸಾವಿನ ಮಾಹಿತಿ ಚೆಟ್ಟಿಮಾನಿ ಗ್ರಾಮಕ್ಕೆ ಹರಡುತ್ತಿದ್ದಂತೆ ಚಿಟ್ಟಿಮಾನಿ ಗ್ರಾಮದಲ್ಲಿ ನೀರಸ ಮೌನ ಆವರಿಸಿದೆ.