ಶಾಲಾ ಆವರಣದಲ್ಲಿ ಆಕಸ್ಮಿಕ ಬೆಂಕಿ

| Published : Feb 20 2025, 12:46 AM IST

ಸಾರಾಂಶ

ಶ್ರೀ ಕುಮಾರಲಿಂಗೇಶ್ವರ ಶಾಲಾ ಆವರಣದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಆವರಣದಲ್ಲಿದ್ದ ಗಿಡಗಳು ಆಹುತಿಯಾಗಿದೆ.

ಸೋಮವಾರಪೇಟೆ: ಸಮೀಪದ ಶಾಂತಳ್ಳಿ-ಬೆಟ್ಟದಳ್ಳಿ ಶ್ರೀಕುಮಾರಲಿಂಗೇಶ್ವರ ಶಾಲಾ ಆವರಣದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಶಾಲೆಯ ಬೇಲಿ ಹಾಗೂ ಮುಂಭಾಗದ ಆವರಣದಲ್ಲಿದ್ದ ಗಿಡಗಳು ಆಹುತಿಯಾಗಿವೆ.

ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಗಾಳಿಯ ರಭಸಕ್ಕೆ ಸುತ್ತಮುತ್ತಲ ಪ್ರದೇಶಕ್ಕೆ ಆವರಿಸುತ್ತಿದ್ದ ಸಂದರ್ಭ ಸ್ಥಳೀಯರು ಹಾಗೂ ಶಾಲಾ ಶಿಕ್ಷಕರು ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ.

ಮಕ್ಕಳು ಶಾಲೆ ಬಿಡುವ ಸಮಯದಲ್ಲಿಯೇ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗ್ರಾ.ಪಂ. ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಲಾಯಿತು.

---------------------------

ಇಂದು ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಪಂಜೆ ಮಂಗೇಶರಾಯರ 150 ನೇ ವರ್ಷಾಚರಣೆ ಕಾರ್ಯಕ್ರಮ ಫೆ. 20 ರಂದು ಬೆಳಗ್ಗೆ 10 ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್, ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನ್ಲಿ ಅಲ್ವಾರೆಸ್, ಸಾಹಿತಿ ಅರವಿಂದ ಚೊಕ್ಕಾಡಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಇತರರು ಪಾಲ್ಗೊಳ್ಳಲಿದ್ದಾರೆ. ನಂತರ ಮಧ್ಯಾಹ್ನ 2.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

-----------------------------------

ಇಂದು ನಾಡೋಜ ಡಾ.ಮಹೇಶ ಜೋಶಿ ಕೊಡಗು ಜಿಲ್ಲಾ ಪ್ರವಾಸ

ಮಡಿಕೇರಿ : ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ಫೆ.20 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಅಧ್ಯಕ್ಷರು ಅಂದು ಬೆಳಗ್ಗೆ 10 ಗಂಟೆಗೆ ನಗರದ ಜೂನಿಯರ್ ಕಾಲೇಜು ಆವರಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ನಡೆಯುವ ಪಂಜೆ ಮಂಗೇಶರಾಯರ 150 ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿ.ರವಿಕುಮಾರ್ ತಿಳಿಸಿದ್ದಾರೆ.