ಕಾನೂನಿನಡಿ ಪಂಚಮಸಾಲಿ ಸಮುದಾಯಕ್ಕೆ ಸ್ಥಾನಮಾನ ಪಡೆಯುತ್ತೇವೆ

| Published : Dec 21 2024, 01:19 AM IST

ಸಾರಾಂಶ

Harihara Peeth, Sri Vachanananda Swamiji, Panchamasali Samaj, Reservation Struggle, Veerashaiva Lingayat Samaj, ಹರಿಹರ ಪೀಠ, ಶ್ರೀ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜ, ಮೀಸಲಾತಿ ಹೋರಾಟ, ವೀರಶೈವ ಲಿಂಗಾಯತ ಸಮಾಜ

ಕೊಪ್ಪಳ: ಪಂಚಮಸಾಲಿ ಸಮಾಜಕ್ಕೆ ಸಿಗಬೇಕಾದ ಮೀಸಲಾತಿಯನ್ನು ಕಾನೂನು ಹೋರಾಟದ ಮೂಲಕವೇ ಪಡೆಯುತ್ತೇವೆ. ಆ ದಿಸೆಯಲ್ಲಿ ಈಗಾಗಲೇ 1994ರಿಂದ ಪ್ರಯತ್ನ ನಡೆದಿದೆ ಎಂದು ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಂಚಮಸಾಲಿ ಸಮಾಜ ಹೋರಾಟ ಮಾಡುತ್ತಿದ್ದರೂ ಸರ್ಕಾರ ಮೀಸಲಾತಿ ಕೊಡುವಾಗ ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ನೀಡುತ್ತದೆ ಎಂದರು.

ಕೇಂದ್ರದಲ್ಲಿ ಓಬಿಸಿಯಲ್ಲಿ ಸೇರುವುದು ಮತ್ತು ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಯಾವುದನ್ನು ನೀಡಬೇಕು ಎನ್ನುವ ಕುರಿತು ಚಿಂತನೆಯಾಗಬೇಕು ಎಂದರು.

ಮೀಸಲಾತಿ ಪ್ರಮಾಣ ಹೆಚ್ಚಿಸಲಿ

ಈಗಿರುವ ಮೀಸಲಾತಿ ಪ್ರಮಾಣದಲ್ಲಿಯೇ ಮೀಸಲಾತಿಯನ್ನು ಪಡೆಯಲು ಸಾಧ್ಯವಿಲ್ಲ. ಹೀಗಾಗಿ, ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ. ಈಗ ರಾಜ್ಯದಲ್ಲಿ ಶೇಕಡಾ 56ರಷ್ಟು ಮೀಸಲಾತಿ ಇದೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣವನ್ನು ಶೇಕಡಾ 50ಕ್ಕೆ ಮಿತಿಗೊಳಿಸಿದೆ. ಈಗಾಗಲೇ 10 ರಾಜ್ಯಗಳಲ್ಲಿ ವಿಶೇಷ ಪ್ರಕರಣದಡಿ ಹೆಚ್ಚು ಮೀಸಲಾತಿ ನೀಡುತ್ತಿದ್ದು, ಅದರಂತೆಯೇ ರಾಜ್ಯದಲ್ಲಿಯೂ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಾಗಿದೆ ಎಂದರು.

ನಮಗೆ ಈ ಹಿಂದಿನ ಸರ್ಕಾರ ಮತ್ತೊಂದು ಸಮುದಾಯದ ಮೀಸಲಾತಿ ಕಿತ್ತು ನೀಡಿದ್ದರಿಂದ ಅವರು ಸುಪ್ರೀಂ ಕೋರ್ಟಿಗೆ ಹೋದರು. ಹೀಗಾಗಿ, ಅದು ನಮಗೆ ಸಿಗದಂತಾಯಿತು. ಸರ್ಕಾರದ ತಪ್ಪು ನಿರ್ಧಾರದಿಂದ ನಮಗೆ ಅನ್ಯಾಯವಾಯಿತು. ಹೀಗಾಗಿ, ಮತ್ತೊಂದು ಸಮುದಾಯದ ಮೀಸಲಾತಿ ಕಿತ್ತು ಕೊಡುವ ಬದಲು, ಮೀಸಲಾತಿ ಪ್ರಮಾಣ ಹೆಚ್ಚಿಸಿ, ನಮಗೆ ನೀಡಬೇಕು ಎನ್ನುವ ಕಾನೂನಾತ್ಮಕ ಹೋರಾಟ ನಮ್ಮದಾಗಿದೆಯೇ ಹೊರತು ಕಾನೂನು ಮುರಿದು ಹೋರಾಟ ಮಾಡುವುದಿಲ್ಲ ಎಂದು ಬೆಳಗಾವಿಯಲ್ಲಿ ನಡೆದ ಹೋರಾಟದ ಕುರಿತು ಪರೋಕ್ಷವಾಗಿ ಟಾಂಗ್ ನೀಡಿದರು.

ನಾನು ಮಾತನಾಡಲ್ಲ

ಬೆಳಗಾವಿಯಲ್ಲಿ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ಆ ಬಗ್ಗೆ ಮಾಹಿತಿಯೂ ಇಲ್ಲ. ಹೀಗಾಗಿ, ಲಕ್ಷ್ಮೀ ಹೆಬ್ಬಾಳ್ಕರ್ ನಿಂದನೆ ವಿಚಾರ ಕಾನೂನು ವ್ಯಾಪ್ತಿಗೆ ಬರುತ್ತದೆ ಎಂದು ಹರಿಹರ ಪೀಠದ ಶ್ರೀ ವಚಾನಂದ ಸ್ವಾಮೀಜಿ ಹೇಳಿದ್ದಾರೆ. ಘಟನೆಯ ಕುರಿತು ಮಾಹಿತಿ ತಿಳಿದುಕೊಂಡು ನಂತರ ಮಾತನಾಡುತ್ತೇನೆ ಎಂದರು.ಕಾನೂನು ರೀತಿ ಹೋರಾಟ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ದೊರೆಯುವಂತೆ ನಾವು 1994ರಿಂದಲೂ ಹೋರಾಟ ಮಾಡುತ್ತ ಬಂದಿದ್ದೇವೆ. ಕಾನೂನು ರೀತಿಯಲ್ಲಿ ನಮ್ಮ ಹೋರಾಟವಿರುತ್ತದೆ ಹೊರತು ನಮ್ಮವರ ಮೇಲೆ ನಾವು ಹಲ್ಲೆಯಾಗುವಂತೆ ಹೋರಾಟ ಮಾಡುವುದಿಲ್ಲ.

ಸೋಮನಗೌಡ ಪಾಟೀಲ್, ರಾಜ್ಯಾಧ್ಯಕ್ಷರು ವೀರಶೈವ ಪಂಚಮಸಾಲಿ ಸಮಾಜ