ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಎರಡನೇ ದಿನವೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಖಾತೆ ಕ್ಯಾತೆ ಶುರುವಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಬದಲು ಜಲಸಂಪನ್ಮೂಲ ಖಾತೆ ನೀಡಲು ಮುಂದಾಗಿರುವುದಕ್ಕೆ ಆಕ್ರೋಶಗೊಂಡಿರುವ ರಾಮಲಿಂಗಾರೆಡ್ಡಿ  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

 ಬೆಂಗಳೂರು : ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಎರಡನೇ ದಿನವೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಖಾತೆ ಕ್ಯಾತೆ ಶುರುವಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಬದಲು ಜಲಸಂಪನ್ಮೂಲ ಖಾತೆ ನೀಡಲು ಮುಂದಾಗಿರುವುದಕ್ಕೆ ಆಕ್ರೋಶಗೊಂಡಿರುವ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವರಿಷ್ಠರಿಗೆ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ರಾಜೀನಾಮೆ ಪತ್ರವನ್ನು ಜೇಬಿನಲ್ಲಿಟ್ಟುಕೊಂಡು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ರಾಮಲಿಂಗಾರೆಡ್ಡಿ ಅವರು, ವಿಧಾನಸೌಧದಲ್ಲಿ ಆ ಪತ್ರವನ್ನು ಮುಖ್ಯಮಂತ್ರಿ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಜಲಸಂಪನ್ಮೂಲ ಖಾತೆ ವಹಿಸಿಕೊಳ್ಳಲು ನಾನು ಸಿದ್ಧನಿಲ್ಲ. ಬೆಂಗಳೂರು ನಗರಾಭಿವೃದ್ದಿ ನೀಡದಿದ್ದರೆ ನನಗೆ ಸಚಿವ ಸ್ಥಾನವೇ ಬೇಡ. ನನ್ನ ರಾಜೀನಾಮೆ ಅಂಗೀಕರಿಸಿ ಎಂದು ನೇರವಾಗಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಡಿಕೆ ಸಂಧಾನ ಸಭೆ ವಿಫಲ:

ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದಲ್ಲಿ ರಾಮಲಿಂಗಾರೆಡ್ಡಿ ಹಾಗೂ ಕೃಷ್ಣಬೈರೇಗೌಡ ಅವರ ಮನವೊಲಿಸಲು ತೀವ್ರ ಕಸರತ್ತು ನಡೆಸಿದರು. ಆದರೆ ರಾಮಲಿಂಗಾರೆಡ್ಡಿ ಅವರು ಒಪ್ಪದೆ ಸಭೆ ನಡುವೆಯೇ ಎದ್ದು ಹೋದರು ಎನ್ನಲಾಗಿದೆ.

ಸಭೆಯಲ್ಲೂ, ‘2023ರಲ್ಲಿ ನೀವು ಮತ್ತು ನಿಮ್ಮ ಸಹೋದರ ಡಿ.ಕೆ.ಸುರೇಶ್‌ ಅವರು ನಮ್ಮ ಮನೆಗೆ ಬಂದು ಎರಡೂವರೆ ವರ್ಷದ ಬಳಿಕ ಬೆಂಗಳೂರು ನಗರಾಭಿವೃದ್ಧಿ ಖಾತೆ ಬಿಟ್ಟುಕೊಡುವುದಾಗಿ ಹೇಳಿದ್ದಿರಿ. ಇದೀಗ ಮಾತು ತಪ್ಪುತ್ತಿದ್ದೀರಿ. ನನಗೂ ಜಲಸಂಪನ್ಮೂಲ ಇಲಾಖೆಗೂ ಏನು ಸಂಬಂಧ? ಸಂಬಂಧವಿಲ್ಲದ ಖಾತೆ ವಹಿಸಿಕೊಂಡು ನಾನೇನು ಮಾಡಲಿ? ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿ, ಇಲ್ಲವೇ ನನ್ನ ರಾಜೀನಾಮೆ ಅಂಗೀಕರಿಸಿ’ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಶುಕ್ರವಾರ ರಾಜ್ಯಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರು ಆಗಮಿಸುತ್ತಿದ್ದು, ಇದೇ ವೇಳೆ ಖಾತೆ ಕ್ಯಾತೆ ಶುರುವಾಗಿರುವುದರಿಂದ ಡಿ.ಕೆ.ಶಿವಕುಮಾರ್‌ ಅವರಿಗೆ ತಲೆನೋವಾಗಿ ಪರಿಣಮಿಸಿದೆ.ಪ್ರತಿಕ್ರಿಯೆಗೆ ರಾಮಲಿಂಗಾರೆಡ್ಡಿ ನಿರಾಕರಣೆ:

ಖಾತೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ರಾಮಲಿಂಗಾರೆಡ್ಡಿ, ಆ ಬಗ್ಗೆ ನಾನು ಮಾತನಾಡುವುದಿಲ್ಲ. ಪಕ್ಷ ಯಾವ ನಿರ್ಧಾರ ತೆಗೆದುಕೊಂಡರೂ ಬದ್ಧ ಎಂದಷ್ಟೇ ಹೇಳಿದರು.

ಖಾತೆ ಹಂಚಿಕೆ ಮುನ್ನ ಸಿದ್ದು ಜತೆ ಡಿಕೆಶಿ ಚರ್ಚೆ:

ಸಚಿವರಿಗೆ ಖಾತೆ ಹಂಚಿಕೆ ಕಗ್ಗಂಟ್ಟಾಗಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ, ಚರ್ಚೆ ನಡೆಸಿದರು. 

ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದ ರಾಮಲಿಂಗಾರೆಡ್ಡಿ, ತಮಗೆ ಖಾತೆ ಸಿಗದಿದ್ದರೆ ರಾಜೀನಾಮೆ ನೀಡುವುದಾಗಿಯೂ ತಿಳಿಸಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ರಾಮಲಿಂಗಾರೆಡ್ಡಿ ಅವರನ್ನು ಸಮಾಧಾನಪಡಿಸಲು ಸಭೆ ನಡೆಸಿದರಾದರೂ ಅದು ಫಲ ನೀಡಲಿಲ್ಲ ಎನ್ನಲಾಗಿದೆ. ಈ ಸಂಧಾನ ಸಭೆ ನಂತರ ಡಿ.ಕೆ.ಶಿವಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ, ಖಾತೆ ಹಂಚಿಕೆ ಕುರಿತಂತೆ ಮಾತುಕತೆ ನಡೆಸಿದರು. 

 ಈ ವೇಳೆ, ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದ ಬಗ್ಗೆಯೂ ವಿವರಣೆ ನೀಡಿದರು ಎಂದು ಮೂಲಗಳು ತಿಳಿಸಿವೆ.ಜತೆಗೆ, ರಾಜ್ಯಸಭೆ ಚುನಾವಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಲಿದ್ದು, ಅದರಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪಾಲ್ಗೊಳ್ಳುವ ಕುರಿತಂತೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು. ಜತೆಗೆ, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಉಪಸ್ಥಿತರಿರುವಂತೆಯೂ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರಲ್ಲಿ ಕೋರಿದರು ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ನಿವಾಸಕ್ಕೆ ಸಚಿವಾಕಾಂಕ್ಷಿಗಳ ಭೇಟಿ:ಎರಡನೇ ಹಂತದ ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಅವಕಾಶ ಪಡೆಯುವ ಉದ್ದೇಶದೊಂದಿಗೆ ಕೆಲ ಸಚಿವಾಕಾಂಕ್ಷಿಗಳು ಗುರುವಾರ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದರು. ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ವಿಧಾನಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಕೆಲ ನಾಯಕರು ಭೇಟಿ ನೀಡಿ, ಸಚಿವ ಸ್ಥಾನದ ಕುರಿತಂತೆ ಚರ್ಚೆ ನಡೆಸಿದರು.

ಸಿದ್ದು ನಿವಾಸಕ್ಕೆ ಹರಿಪ್ರಸಾದ್‌: 

ಕೆಪಿಸಿಸಿಗೆ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ಕೆ.ಹರಿಪ್ರಸಾದ್‌ ಅವರು ಗುರುವಾರ ಬೆಳಗ್ಗೆ ಸಿದ್ದರಾಮಯ್ಯ ಅವರ ನಿವಾಸಕ್ಕಾಗಮಿಸಿ ಧನ್ಯವಾದ ಅರ್ಪಿಸಿದರು. ಈ ವೇಳೆ, ಸಿದ್ದರಾಮಯ್ಯನವರು ಅವರಿಗೆ ಶುಭ ಕೋರಿದರು. ಇಬ್ಬರೂ ನಾಯಕರು ಪಕ್ಷ ಸಂಘಟನೆ ಮತ್ತು ಸರ್ಕಾರದ ಚಟುವಟಿಕೆ ಕುರಿತಂತೆ ಕೆಲಹೊತ್ತು ಚರ್ಚೆ ನಡೆಸಿದರು. 

2ನೇ ಕಂತಲ್ಲಿ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮೊದಲ ಹಂತದ ಸಂಪುಟದಲ್ಲಿ ಅವಕಾಶ ಕೈತಪ್ಪಿರುವ ಸಚಿವಾಕಾಂಕ್ಷಿಗಳು ಎರಡನೇ ಹಂತದ ಸಂಪುಟದಲ್ಲಿ ಸ್ಥಾನ ಗಟ್ಟಿಸಲು ತೀವ್ರ ಲಾಬಿ ನಡೆಸಿದ್ದಾರೆ.ಗುರುವಾರವೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಸಚಿವ ಸ್ಥಾನ ಆಪೇಕ್ಷೆ ವ್ಯಕ್ತಪಡಿಸಿದ್ದಾರೆ.ಡಿ.ಕೆ.ಶಿವಕುಮಾರ್‌ ಅವರ ಮೊದಲ ಹಂತದ ಸಂಪುಟದಲ್ಲಿ 13 ಮಂದಿ ಮಾತ್ರ ಅವಕಾಶ ಗಿಟ್ಟಿಸಿದ್ದಾರೆ. ಉಳಿದ ಸ್ಥಾನಗಳಿಗಾಗಿ ಸಂತೋಷ್‌ ಲಾಡ್‌, ಲಕ್ಷ್ಮಣ ಸವದಿ, ಗುರುಪಾದಗೌಡ ಸಂಗನಗೌಡ ಪಾಟೀಲ ಸೇರಿ ಹಲವರು ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮುಂದುವರೆಸಿದರು.

ಮತ್ತೊಂದೆಡೆ ಸಚಿವರಾದ ಪ್ರಿಯಾಂಕ್‌ ಖರ್ಗೆ, ಶರಣ್‌ ಪ್ರಕಾಶ್‌ ಪಾಟೀಲ್‌, ಕೆ.ಎಚ್.ಮುನಿಯಪ್ಪ ಸೇರಿ ವಿವಿಧ ಸಚಿವರು ಸಂಪುಟ ಖಾತೆ ಕುರಿತು ಚರ್ಚಿಸಿದರು ಎಂದು ತಿಳಿದುಬಂದಿದೆ.ಕಾವೇರಿಯಲ್ಲೂ ಲಾಬಿ:ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್‌, ರಾಘವೇಂದ್ರ ಹಿಟ್ನಾಳ್, ಬಸನಗೌಡ ದದ್ದಲ್‌, ಪಾವಗಡ ವೆಂಕಟೇಶ್ ಸೇರಿ ಹಲವರು ಆಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿ ಮನವಿ ಮಾಡಿದರು. 

ಸಿದ್ದು, ಖರ್ಗೆ ಸಾಹೇಬರಿದ್ದಾರೆ-ಹೆಬ್ಬಾಳ್ಕರ್‌: 

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್‌, ಮೂರು ವರ್ಷ ಸಚಿವರಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಲು ಬಂದಿದ್ದೆ. ಮೊದಲ ಪಟ್ಟಿಯಲ್ಲಿ ಹೆಸರು ಬಂದಿಲ್ಲ. ಹಿರಿಯರಾದ ಸಿದ್ದರಾಮಯ್ಯ ಅವರು, ಮಲ್ಲಿಕಾರ್ಜುನ ಖರ್ಗೆ ಸಾಹೇಬರಿದ್ದಾರೆ. ಖಂಡಿತವಾಗಿಯೂ ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕಾರ್ಯಕರ್ತರಿಂದಲೂ ಒತ್ತಾಯ: 

ಜತೆಗೆ ಗದಗ ಜಿಲ್ಲೆ ರೋಣಾ ಮತ ಕ್ಷೇತ್ರ ನೂರಾರು ಕಾರ್ಯಕರ್ತರು ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಬಳಿ ಬಂದು ಗುರುಪಾದಗೌಡ ಸಂಗನಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ಕೊಡಿಸುವಂತೆ ಆಗ್ರಹಿಸಿದರು. ಸತತ 4 ಬಾರಿ ಶಾಸಕರಾಗಿರುವ ಜಿ.ಎಸ್.ಪಾಟೀಲ್ ಅವರನ್ನು ಪರಿಗಣಿಸುವಂತೆ ಒತ್ತಾಯಿಸಿದರು.