ಸಾಗುವಳಿ ಪತ್ರ ಪಡೆದಿರುವ ರೈತರಿಗೆ ಖಾತೆ ಮತ್ತು ಪಹಣಿ ನೀಡಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಸಾಗುವಳಿ ಪತ್ರ ಪಡೆದಿರುವ ರೈತರಿಗೆ ಖಾತೆ ಮತ್ತು ಪಹಣಿ ನೀಡಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಈಚೆಗೆ ಸಾಗುವಳಿ ಪತ್ರ ನೀಡಿರುವ 80 ಜನ ರೈತರಿಗೆ ಖಾತೆ ಮತ್ತು ಪಹಣಿ ವಿತರಿಸಿ ಮಾತನಾಡಿದರು.
ಹತ್ತಾರು ವರ್ಷಗಳಿಂದ ರೈತರು ಸರ್ಕಾರಿ ಭೂಮಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೂ ಸಾಗುವಳಿ , ಖಾತೆ ಮತ್ತು ಪಹಣಿಗಾಗಿ ಕಚೇರಿಗಳಿಗೆ ಅಲೆದು ಕೆಲವು ರೈತರು ಮೃತಪಟ್ಟಿದ್ದು, ಅಂತಹ ಕುಟುಂಬಗಳನ್ನು ಗುರುತಿಸಿ ಅವರಿಗೆ ಪಹಣಿ ಕೊಡಿಸಲಾಗುವುದು ಎಂದರು.ಈಗಾಗಲೇ ಸಾಗುವಳಿ ಚೀಟಿ ಪಡೆದವರಿಗೆ ಖಾತೆ , ಪಹಣಿ, ಪೋಡಿ ಮಾಡಿ ಕೊಡಲಾಗಿದೆ. ರೈತರು ಜಮೀನು ಮಾರಾಟ ಮಾಡದೆ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಡರಾಗಬೇಕು. ಸರ್ಕಾರದಿಂದ ಮಂಜೂರಾದ ಜಮೀನು ಮಾರಾಟ ಮಾಡಿದರೆ ತಹಸೀಲ್ದಾರ್ ಸೂಕ್ತ ಕ್ರಮ ವಹಿಸಲಿದ್ದಾರೆ. ಆದ್ದರಿಂದ ತಾವು ಉಳುಮೆ ಮಾಡುವ ಜಮೀನನ್ನು ಜೋಪಾನವಾಗಿ ಕಾಪಾಡಿಕೊಂಡು ಕುಟುಂಬಕ್ಕೆ ನೆರವಾಗಬೇಕು ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಹೋರ ವಲಯದ ಸಸ್ಯೋಧ್ಯಾನದ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಚಳಿಗಾಲದ ಪ್ರಯುಕ್ತ ಸರ್ಕಾರದಿಂದ ನೀಡುವ ಜರ್ಕಿನ್ ಸಮವಸ್ತ್ರಗಳನ್ನು ಶಾಸಕ ಕೆ.ಎನ್.ರಾಜಣ್ಣ ವಿತರಿಸಿದರು.ಸಭೆಯಲ್ಲಿ ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಎಚ್.ಶ್ರೀನಿವಾಸ್, ವಲಯ ಅರಣ್ಯಾಧಿಕಾರಿ ಸುರೇಶ್, ಮಾಜಿ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಬಗರ್ ಹುಕುಂ ಸಮಿತಿ ಸದಸ್ಯರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ,ಸಿದ್ದಾಪುರ ಸೊಸೈಟಿ ರಾಮಣ್ಣ,ನರಸೀಯಪ್ಪ ಇತರರಿದ್ದರು.