ಪ್ರೊ.ಅಸಾದಿಗೆ ಕುಲಪತಿ ಹುದ್ದೆ ನೀಡದೆ ಕಡೆಗಣನೆ ಆರೋಪ

| Published : Mar 11 2024, 01:15 AM IST

ಸಾರಾಂಶ

ಮಂಗಳೂರು ವಿವಿ ಕುಲಪತಿ ಸ್ಥಾನಕ್ಕೆ ಶೋಧನಾ ಸಮಿತಿ ಕಳುಹಿಸಿದ ಮೂವರ ಪಟ್ಟಿಯಲ್ಲಿ ಮೊದಲ ಹೆಸರು ಇದ್ದದ್ದೇ ಪ್ರೊ.ಮುಝಫರ್ ಅಸಾದಿ ಅವರದ್ದು. ಶಿವಮೊಗ್ಗದ ಕುವೆಂಪು ವಿವಿಗೂ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಎರಡೂ ಕಡೆಯೂ ಅವರನ್ನು ಪರಿಗಣಿಸಿಲ್ಲ ಎಂದು ಎ.ಎಸ್.ಇಬ್ರಾಹಿಂ ಕರೀಂ ಕಡಬ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ವಿವಿ ಮತ್ತು ಕುವೆಂಪು ವಿವಿ ಎರಡೂ ಕಡೆಯೂ ಕುಲಪತಿ ಸ್ಥಾನಕ್ಕೆ ಹಿರಿಯ ವಿದ್ವಾಂಸ ಪ್ರೊ.ಮುಝಫರ್‌ ಅಸಾದಿ ಅವರನ್ನು ಪರಿಗಣನೆ ಮಾಡದೆ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಸಯ್ಯದ್ ಅಬ್ದುಲ್ ರಹಿಮಾನ್ ಬಾಫಕಿ ತಂಙಳ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಎ.ಎಸ್.ಇಬ್ರಾಹಿಂ ಕರೀಂ ಕಡಬ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿವಿ ಕುಲಪತಿ ಸ್ಥಾನಕ್ಕೆ ಶೋಧನಾ ಸಮಿತಿ ಕಳುಹಿಸಿದ ಮೂವರ ಪಟ್ಟಿಯಲ್ಲಿ ಮೊದಲ ಹೆಸರು ಇದ್ದದ್ದೇ ಪ್ರೊ.ಮುಝಫರ್ ಅಸಾದಿ ಅವರದ್ದು. ಶಿವಮೊಗ್ಗದ ಕುವೆಂಪು ವಿವಿಗೂ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಎರಡೂ ಕಡೆಯೂ ಅವರನ್ನು ಪರಿಗಣಿಸಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿರುವ 40ಕ್ಕೂ ಅಧಿಕ ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಯಾವುದರಲ್ಲೂ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಕುಲಪತಿಗಳಿಲ್ಲ. ಪ್ರೊ.ಅಸಾದಿ ಅವರಂತಹ ಹಿರಿಯ ವಿದ್ವಾಂಸರನ್ನು ಕಡೆಗಣಿಸುವ ಮೂಲಕ ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯವನ್ನು ಬಿಜೆಪಿಗಿಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕಾನೂನು ಹೋರಾಟ: ಈ ಕುರಿತು ಕಾನೂನು ಹೋರಾಟ ನಡೆಸುವ ಬಗ್ಗೆ ಮುಂದಿನ ವಾರ ಮುಸ್ಲಿಂ ವಿದ್ವಾಂಸರು, ಪದವೀಧರರು, ವಿವಿಧ ಸಂಘಟನೆ ಪ್ರತಿನಿಧಿಗಳು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕರೀಂ ಹೇಳಿದರು.ಮಂಗಳೂರು ವಿವಿಯಲ್ಲಿ ನಡೆಯುತ್ತಿರುವ ಅವ್ಯವಸ್ಥೆ, ಅವ್ಯವಹಾರ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ವಿವಿಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದೂ ಅವರು ಒತ್ತಾಯಿಸಿದರು.

ಫೌಂಡೇಶನ್ ಅಧ್ಯಕ್ಷ ಡಾ.ಶೇಕ್ ಬಾವ ಮಂಗಳೂರು, ಕೋಶಾಧಿಕಾರಿ ರಿಯಾಝ್ ಹರೇಕಳ, ಸದಸ್ಯರಾದ ಸಿ.ಅಬ್ದುಲ್ ರಹಮಾನ್, ನೌಶಾದ್ ಮಲಾರ್ ಇದ್ದರು.