ಮಡಿಕೇರಿ : ಗೃಹಿಣಿಯ ಪತಿ ಕೊಲೆ ಯತ್ನ ಆರೋಪ : ಪ್ರೇಯಸಿ ಸಹಿತ ಪೊಲೀಸ್‌ ಪೇದೆ ಬಂಧನ!

| Published : Oct 26 2024, 01:05 AM IST / Updated: Oct 26 2024, 01:15 PM IST

ಮಡಿಕೇರಿ : ಗೃಹಿಣಿಯ ಪತಿ ಕೊಲೆ ಯತ್ನ ಆರೋಪ : ಪ್ರೇಯಸಿ ಸಹಿತ ಪೊಲೀಸ್‌ ಪೇದೆ ಬಂಧನ!
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್ ಪೇದೆ ತನ್ನ ಪ್ರೇಯಸಿಯ ಪತಿಯ ಕೊಲೆಗೆ ಯತ್ನಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಪೇದೆ ಕೊಟ್ರೇಶ್ಮ ತ್ತು ಕೊಲೆಗೆ ಯತ್ನಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಕೊಟ್ರೇಶ್ ಪ್ರಿಯತಮೆ ಆಯಿಷಾ  ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

 ಮಡಿಕೇರಿ : ಪೊಲೀಸ್ ಪೇದೆ ತನ್ನ ಪ್ರೇಯಸಿಯ ಪತಿಯ ಕೊಲೆಗೆ ಯತ್ನಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಪೇದೆ ಕೊಟ್ರೇಶ್ (30) ಮತ್ತು ಕೊಲೆಗೆ ಯತ್ನಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಕೊಟ್ರೇಶ್ ಪ್ರಿಯತಮೆ ಆಯಿಷಾ (29) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಮೂಲದ ಕೊಟ್ರೇಶ್ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿದ್ದ. ಆಯಿಷಾಳ ಪಕ್ಕದ ಮನೆಯಲ್ಲಿ ವಾಸವಾಗಿದ್ದ. ಶನಿವಾಸಂತೆಯ ನಿವಾಸಿ ಇಫ್ರಾಜ್ 6 ವರ್ಷಗಳ ಹಿಂದೆ ಆಯಿಷಾಳನ್ನು ವಿವಾಹವಾಗಿದ್ದು, ದಂಪತಿಗೆ ಒಂದೂವರೆ ವರ್ಷದ ಮಗುವಿದೆ. ದಂಪತಿ ಮಧ್ಯೆ ಅನ್ಯೋನ್ಯತೆ ಇರದ ಕಾರಣ, ಪತಿ ಪತ್ನಿ ಜಗಳವಾಡಿ ಹಲವು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು ಎನ್ನಲಾಗಿದೆ.

ಆಯಿಷಾ ಪೊಲೀಸ್ ಪೇದೆ ಕೊಟ್ರೇಶ್‌ನನ್ನು ಅ.22 ಮಧ್ಯರಾತ್ರಿ ಮನೆಗೆ ಕರೆಸಿದ್ದು, ಬಳಿಕ ಕೊಟ್ರೇಶ್ ದಿಂಬಿನಿಂದ ಉಸಿರುಗಟ್ಟಿಸಿ ಆಯಿಷಾ ಪತಿ ಇಫ್ರಾಜ್ ಕೊಲೆಗೆ ಯತ್ನಿಸಿದ್ದಾಗಿ ಆರೋಪಿಸಲಾಗಿದೆ. ಈ ವೇಳೆ ಇಫ್ರಾಜ್ ಜೋರಾಗಿ ಕೂಗಿಕೊಂಡಿದ್ದು, ಪಕ್ಕದ ಕೋಣೆಯಲ್ಲಿ ಮಲಗಿದ್ದ ಇಫ್ರಾಜ್ ಅಕ್ಕನ ಮಗ ಬಂದು ಬಾಗಿಲು ಒಡೆದು, ಅವರನ್ನು ರಕ್ಷಿಸಿದ್ದಾರೆ. ಇಫ್ರಾಜ್ ಆರೋಪಿ ಕೊಟ್ರೇಶ್‌ನ ಬೆರಳು ಕಚ್ಚಿ ಸ್ಥಳದಿಂದ ಓಡಿ ಹೋಗಿದ್ದಾನೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಇಫ್ರಾಜ್‌ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರನ್ನು ನೇರವಾಗಿ ಭೇಟಿ ಮಾಡಿ ದೂರು ನೀಡಿ, ಪ್ರಕರಣ ದಾಖಲಿಸಲು ಸೋಮವಾರಪೇಟೆ ಪೊಲೀಸರು ಹಿಂದೇಟು ಹಾಕಿದ ಬಗ್ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಂತೆ ಎಸ್.ಪಿ ರಾಮರಾಜನ್ ಶನಿವಾರಸಂತೆ ಠಾಣಾ ಪೊಲೀಸರಿಗೆ ಸೂಚಿಸಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಕೊಲೆ ಯತ್ನದ ದೂರು ದಾಖಲಿಸಿದ್ದಾರೆ.

ಈ ನಡುವೆ, ಇಫ್ರಾಜ್ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ ಅಲ್ಲಿದ್ದ ಪೇದೆ ಕೊಟ್ರೇಶ್ ಅಸಹಜವಾಗಿ ವರ್ತಿಸಲು ಶುರು ಮಾಡಿದ್ದಾನೆ. ತನ್ನ ಕೈ ಬೆರಳನ್ನು ಮುಚ್ಚಿಕೊಳ್ಳಲು ಹೆಣಗಾಡಿದ್ದಾನೆ. ಈ ಸಂದರ್ಭ ಇಫ್ರಾಜ್ ಕೊಟ್ರೇಶ್‌ನ ಬೆರಳನ್ನು ನೋಡಿದಾಗ ಗಾಯವಾಗಿರುವುದು ಕಂಡು ಬಂದಿದೆ.

ಕೊಲೆ ಯತ್ನ ಸಂದರ್ಭದಲ್ಲಿ ಕೊಟ್ರೇಶ್ ಓಡಿ ಹೋಗುವಾಗ ಸ್ಥಳದಲ್ಲಿ ಚಪ್ಪಲಿ ಬಿಟ್ಟು ಹೋಗಿದ್ದಾನೆ. ಪೇದೆ ತೊಟ್ಟಿದ್ದ ಶೂ ಸೈಝ್‌ ಮತ್ತು ಆ ಚಪ್ಪಲಿಯ ಸೈಝ್‌ ಹೊಂದಾಣಿಕೆಯೂ ಆಗಿದೆ.

ಕೊಟ್ರೇಶ್ ಆಯಿಷಾಳ ತಂದೆ ತಾಯಿ ನೆಲೆಸಿರುವ ಕಟ್ಟಡದಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ತನ್ನ ಮೇಲೆ ದಾಳಿ ಮಾಡಿದ್ದು ಈತನೇ ಎಂಬುದು ಇಫ್ರಾಜ್‌ಗೆ ಸ್ಪಷ್ಟವಾಗಿದೆ. ಈ ವಿಚಾರವನ್ನು ಠಾಣಾಧಿಕಾರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕೊಟ್ರೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಆತ ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಕೊಲೆ ಯತ್ನದ ಆರೋಪದಲ್ಲಿ ಪೇದೆ ಕೊಟ್ರೇಶ್ ಮತ್ತು ಇದಕ್ಕೆ ಕುಮ್ಮಕ್ಕು ನೀಡಿದ ಇಫ್ರಾಜ್ ಪತ್ನಿ ಆಯಿಷಾಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಟ್ರೇಶ್‌ಗೆ ಮುಂದಿನ ನವೆಂಬರ್ ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು ಎಂದು ತಿಳಿದು ಬಂದಿದೆ. ಕೊಲೆ ಯತ್ನ ಪ್ರಕರಣದ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಇಫ್ರಾಜ್ ಕುಟುಂಬ ಮನವಿ ಮಾಡಿದೆ.