ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ರಾಮಾಪುರ ಗ್ರಾಮದ ಆರೋಪಿಯು ಲಕ್ಷ್ಮೇಶ್ವರ ಪಟ್ಟಣದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಲಕ್ಷ್ಮೇಶ್ವರ: ಕಳೆದ ತಿಂಗಳು ಸಮೀಪದ ಶಿಗ್ಲಿ ಗ್ರಾಮದಲ್ಲಿ ಎರಡು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಚಮನ್ ಸಾಬ್ ಚಮನಗೌಡ ಪಾಟೀಲ ಎಂಬಾತನನ್ನು ಬಂಧಿಸಿದ ಪೊಲೀಸರು ಬಂಗಾರದ ಆಭರಣ, ಬೆಳ್ಳಿಯ ಕಾಲ್ಗೆಜ್ಜೆ ಹಾಗೂ 14 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ರಾಮಾಪುರ ಗ್ರಾಮದ ಆರೋಪಿಯು ಲಕ್ಷ್ಮೇಶ್ವರ ಪಟ್ಟಣದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.ಪಟ್ಟಣದ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್ಐ ನಾಗರಾಜ ಗಡದ ಅವರ ತಂಡ ಕಾರ್ಯಾಚರಣೆ ನಡೆಸುವ ಮೂಲಕ ಕಳ್ಳನನ್ನು ಬಂಧಿಸಿದ್ದಾರೆ.

ಈ ವೇಳೆ ಪಿಎಸೈ ಟಿ.ಕೆ. ರಾಠೋಡ, ಸಿಬ್ಬಂದಿ ಆರ್.ಎಸ್. ಯರಗಟ್ಟಿ, ಎಂ.ಎ. ಶೇಖ್, ಎಂ.ಎಸ್. ಬಳ್ಳಾರಿ, ಆನಂದ ಕಮ್ಮಾರ, ಸಿ.ಎಸ್. ಮಠಪತಿ, ಡಿ.ಎಸ್. ನದಾಫ್, ಎಚ್.ಐ. ಕಲ್ಲಣ್ಣವರ, ಪಾಂಡುರಂಗ ರಾವ್, ಮಧುಚಂದ್ರ ಧಾರವಾಡ, ಮಾರ್ತಾಂಡ ಉಪ್ಪಾರ, ಮಹಾಂತೇಶ ಬಗಾರ, ಗುರು ಬೂದಿಹಾಳ, ಸಂಜು ಕೊರಡೂರ ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಿಕ ದಾಳಿ: ಕುರಿಗಾಯಿಗೆ ಗಂಭೀರ ಗಾಯ

ಶಿರಹಟ್ಟಿ: ಮಿಕ ದಾಳಿಯಿಂದ ಕುರಿಗಾಹಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಜಲ್ಲಿಗೇರಿ ತಾಂಡಾದ ಹೊಲವೊಂದರಲ್ಲಿ ಶುಕ್ರವಾರ ನಡೆದಿದೆ. ಕೂಡಲೇ ಗಾಯಾಳುನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುರಿಗಾಹಿ ಮಹಾಂತೇಶ ಧರ್ಮಪ್ಪ ಚವ್ಹಾಣ ಎಂಬವರೇ ಗಾಯಗೊಂಡ ವ್ಯಕ್ತಿ. ಗಾಯಗೊಂಡ ಕುರಿಗಾಹಿಯನ್ನು ತಕ್ಷಣವೇ ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ಕರೆತಂದಿದ್ದು, ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಕುರಿಗಾಯಿಗೆ ಮೈಮೇಲೆಲ್ಲ ಗಾಯವಾಗಿದ್ದಲ್ಲದೇ ಬಲಗಾಲು ತುಂಡಾಗಿರುವುದಾಗಿ ಗಾಯಾಳು ಸಂಬಂಧಿಕರು ತಿಳಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಕಪ್ಪತ್ತಗುಡ್ಡದ ಪಕ್ಕದ ಹೊಲದಲ್ಲಿ ಗೋವಿನಜೋಳ ಒಕ್ಕಲು ಮಾಡಿದ ಹೊಲದಲ್ಲಿ ಕುರಿ ಮೇಯಿಸುವ ವೇಳೆ ನಾಯಿಗಳು ಮಿಕ ಕಂಡು ಬೊಗಳಲು ಪ್ರಾರಂಭಿಸಿದ್ದು, ಮಿಕ ಅತ್ತಿತ್ತ ಓಡಾಡಿ ಕುರಿಗಾಹಿಯನ್ನು ಕಂಡು ದಾಳಿ ಮಾಡಿರುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.