ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಕಡಬ ತಾಲೂಕು ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಶರತ್ ಕುಮಾರ್ (೩೪) ಎಂಬಾತನನ್ನು ಮರದ ದೊಣ್ಣೆಯಿಂದ ಹೊಡೆದು ಕೊಂದ ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿ ಹರಿಪ್ರಸಾದ್ ನನ್ನು ಉಪ್ಪಿನಂಗಡಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಶುಕ್ರವಾರ ತಡ ರಾತ್ರಿ ಕೊಲೆ ಕೃತ್ಯ ನಡೆದಿದ್ದು, ತನ್ನ ಚಿಕ್ಕಪ್ಪನ ಮನೆಯವರೊಡಗೂಡಿ ಸಂಗ್ರಹಿಸಿದ್ದ ಕಟ್ಟಿಗೆಯನ್ನು ತುಂಡರಿಸಿದ ಹಾಗೂ ಅದನ್ನು ಮನೆಗೆ ಕೊಂಡೊಯ್ಯಲು ಯತ್ನಿಸಿದ ವಿಚಾರದಲ್ಲಿ ಚಿಕ್ಕಪ್ಪನ ಮನೆ ಮಂದಿಯೊಂದಿಗೆ ಸಂಘರ್ಷ ನಿರತನಾದ ಶರತ್‌ನನ್ನು ಆತನ ಚಿಕ್ಕಪ್ಪನ ಮನೆಯಂಗಳದಲ್ಲಿಯೇ ಹೊಡೆದು ಕೊಲ್ಲಲಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಪೆರಿಯಶಾಂತಿಯಲ್ಲಿದ್ದ ಆರೋಪಿ ಹರಿಪ್ರಸಾದ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆಗೀಡಾದ ಶರತ್ ಕುಮಾರ್ ತನ್ನ ದೊಡ್ದಪ್ಪನ ಮಗನಾಗಿದ್ದು, ಮದ್ಯ ಸೇವಿಸಿ ಆತನ ತಂದೆತಾಯಿಗೂ ಹಿಂಸೆ ನೀಡುತ್ತಿದ್ದ . ರೋಸಿ ಹೋದ ಆತನ ಹೆತ್ತವರು ಮನೆ ತೊರೆದು ಬಾಡಿಗೆ ಮನೆಯಲ್ಲಿ ವಾಸಿಸತೊಡಗಿದಾಗ, ಅನ್ನ ಆಹಾರಕ್ಕೆ ನಮ್ಮ ಮನೆಗೆ ಬರುತ್ತಿದ್ದ. ಅನ್ನ ನೀಡಿದ ಬಗ್ಗೆ ಕಿಂಚಿತ್ತೂ ಉಪಕಾರ ಸ್ಮರಣೆ ತೋರದ ಆತ ಕಟ್ಟಿಗೆ ವಿಚಾರಕ್ಕೆ ಸಂಬಂಧಿಸಿ ನನ್ನ ಹೆತ್ತವರಿಗೆ , ನನ್ನ ಸಹೋದರನಿಗೆ ಅವಾಚ್ಯ ಪದಗಳಿಂದ ಬೈಯ್ಯುವುದು, ಮಾರಕಾಯುಧಗಳಿಂದ ಜೀವ ಬೆದರಿಕೆಯೊಡ್ಡುತ್ತಿದ್ದ ಕೃತ್ಯವನ್ನು ಕಂಡು ಮನಸ್ಸು ರೋಸಿ ಹೋಗಿತ್ತು. ಶುಕ್ರವಾರ ರಾತ್ರಿಯೂ ಮತ್ತೆ ಜಗಳ ಕಾಯುತ್ತಾ ಮನೆಗೆ ಬಂದಾತನನ್ನು ಕೈಗೆ ಸಿಕ್ಕಿದ ಮರದ ತುಂಡಿನಿಂದ ಹೊಡೆದಿರುವುದಾಗಿ ಬಂಧಿತ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.