ಪ್ರಕರಣದ ಆರೋಪಿ ಯಾವುದೇ ಸಣ್ಣ ಸುಳಿವು ಸಿಗದಂತೆ ಕಳ್ಳತನ ಮಾಡಿ ಪರಾರಿ ಆಗಿದ್ದ. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಪೊಲೀಸ್ ತಂಡ ಗುಜರಾತ್ ಮೂಲದ ಮಹ್ಮದ್ ಹುಸೇನ ಸಿದ್ದಿಕಿ(43) ಎನ್ನುವ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಗದಗ: ನಗರದ ಪ್ರಸಿದ್ಧ ಜ್ಯುವೇಲರಿ ಅಂಗಡಿ ಕಳ್ಳತನವಾದ 6 ತಾಸಿನಲ್ಲಿ ಅಂತರ ರಾಜ್ಯ ಕಳ್ಳನನ್ನು ಬಂಧಿಸಿ ₹80 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಎಸ್ಪಿ ರೋಹನ್ ಮಾತನಾಡಿ, ಒಟ್ಟು ₹80,21,028 ಮೌಲ್ಯದ ಬೆಳ್ಳಿ, ಬಂಗಾರ ಹಾಗೂ ನಗದು ವಶಪಡಿಸಿಕೊಂಡಿದ್ದು, ಶಾಂತಾದುರ್ಗಾ ಜ್ಯುವೇಲರಿ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಕರಣದ ಆರೋಪಿ ಯಾವುದೇ ಸಣ್ಣ ಸುಳಿವು ಸಿಗದಂತೆ ಕಳ್ಳತನ ಮಾಡಿ ಪರಾರಿ ಆಗಿದ್ದ. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಪೊಲೀಸ್ ತಂಡ ಗುಜರಾತ್ ಮೂಲದ ಮಹ್ಮದ್ ಹುಸೇನ ಸಿದ್ದಿಕಿ(43) ಎನ್ನುವ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿ ಬಂಧಿಸಲು 10 ತಂಡಗಳನ್ನು ರಚಿಸಿ ಕೇವಲ 6 ತಾಸಿನ ಒಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಪ್ರಕರಣ ಭೇದಿಸಲು ದೃಢ ನಿರ್ಧಾರ ಮಾಡಿದ್ದೆವು. ಈ ಆಪರೇಷನ್‌ನಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇದೊಂದು ಕ್ಲಿಷ್ಟಕರ ಪ್ರಕರಣವಾಗಿತ್ತು. ಪ್ರಕರಣದ ಆರೋಪಿ ಗದಗದಿಂದ 7 ಗಂಟೆ ದೂರ ಕ್ರಮಿಸಿದ್ದಾನೆ ಅಂತ ಮಾಹಿತಿ ಲಭ್ಯವಾಗಿತ್ತು. ಕೆಲವು ಪ್ರಾಥಮಿಕ ಮಾಹಿತಿ ಮೇರೆಗೆ ಆರೋಪಿ ಸುಳಿವು ಸಿಕ್ಕಿತ್ತು. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ವಡಗಾವ್ ಪೊಲೀಸ್ ಸಹಾಯ ಪಡೆದು ಆರೋಪಿ ಬಂಧಿಸಲಾಗಿದೆ. ಮಹಾರಾಷ್ಟ್ರದ ಧೀರಜ್ ಮತ್ತು ಅವರ ತಂಡದ ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಕೃತ್ಯಕ್ಕೆ ಬಳಸಿದ ವಸ್ತುಗಳು: ಒಂದು ಗ್ಯಾಸ್ ಕಟರ್ ಮಷಿನ್, ಒಂದು ಹೈಡ್ರೋಲಿಕ್ ಕಟರ್ ಮಷಿನ್, ಎರಡು ದೊಡ್ಡ ಸ್ಕೂ ಡ್ರೈವರ್‌ಗಳು, ಒಂದು ನೈಲಾನ್ ಹಗ್ಗ, ಒಂದು ಕಬ್ಬಿಣದ ಸುತ್ತಿಗೆ, ಒಂದು ಕಬ್ಬಿಣದ ಗ್ರೀಪರ್ ವಶಕ್ಕೆ ಪಡೆಯಲಾಗಿದೆ.

₹1016200 ಕಿಮ್ಮತ್ತಿನ ಅಂದಾಜು 76.810 ಗ್ರಾಂ ತೂಕದ ಬಂಗಾರದ ಆಭರಣಗಳು, ₹6109828 ಮೌಲ್ಯದ ಅಂದಾಜು 33059 ಗ್ರಾಂ ತೂಕದ ಬೆಳ್ಳಿಯ ಸಾಮಗ್ರಿಗಳು ಸುಮಾರು ₹8.95 ಲಕ್ಷ ಮೌಲ್ಯದ ಜೆಮ್‌ಸ್ಟೋನ್‌ಗಳು, ₹26 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಡಿಎಸ್‌ಪಿ ಮುರ್ತುಜಾ ಖಾದ್ರಿ, ಸಿಪಿಐ ಸಿದ್ದರಾಮೇಶ್ ಗಡೇದ್, ಲಾಲಸಾಬ್ ಜೂಲಕಟ್ಟಿ, ಧೀರಜ್ ಶಿಂದೆ, ಪಿಎಸ್‌ಐ ಆರ್.ಆರ್. ಮುಂಡವಾಡಗಿ, ಮಾರುತಿ ಜೋಗದಂಡಕರ, ಜಿ.ಟಿ. ಜಕ್ಕಲಿ ಇತರರು ಇದ್ದರು.ಲಾಡ್ಜ್‌ ರೂಂ ಮಾಡಿದ್ದ ಆರೋಪಿ

ನ. 25ರಂದೇ ಗದಗ ನಗರಕ್ಕೆ ಬಂದ‌ ಆರೋಪಿ ಪ್ರಶಾಂತ ಲಾಡ್ಜ್‌ನಲ್ಲಿ ರೂಂ ಮಾಡಿ ಕಳ್ಳತನಕ್ಕಾಗಿ ಕಾಯ್ದು ಕುಳಿತು ಮಂಗಳವಾರ ತಡರಾತ್ರಿ ಒಬ್ಬನೇ ಈ ಕೃತ್ಯವನ್ನು ಎಸಗಿದ್ದು, ಬೆಳಗಿನ ಜಾವ ತಾನು ತಂಗಿದ್ದ ಲಾಡ್ಜ್‌ನಿಂದ ಹೊರಹೋಗುವ ವೇಳೆ ಬಳಸಿದ ಆಟೋ, ಅಲ್ಲಿಂದ ಬಸ್ ಹೊಸ ಬಸ್ ನಿಲ್ದಾಣಕ್ಕೆ ತೆರಳಿದ್ದು, ನಸುಕಿನ ಜಾವದಿಂದ 7.15ರ ವರೆಗೆ ಗದಗ ಬಸ್ ನಿಲ್ದಾಣದಲ್ಲಿ ಕಾಯ್ದು, ಅಲ್ಲಿಂದ ಗದಗ ಮುಂಬೈ ಬಸ್ ಮೂಲಕ ತೆರಳುವ ವೇಳೆಯಲ್ಲಿ ಕಳ್ಳನನ್ನು ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಸಹಕಾರದಿಂದ ಬಂಧಿಸಲು ಸಾಧ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.