ನ್ಯಾಯಾಲಯಗಳಿಂದ 12 ಬಾರಿ ವಾರೆಂಟ್ ನೀಡಿದ್ದರೂ ವಿಚಾರಣೆಗೆ ಹಾಜಾರಾಗದೆ ತಲೆಮರೆಸಿಕೊಂಡಿದ್ದ ಇಲ್ಲಿನ ಗುಲ್ವಾಡಿ ಗ್ರಾಮದ ಸೌಕೂರು ನಿವಾಸಿ ಶಶಾಂಕ್ ಶೆಟ್ಟಿ ಯಾನೆ ಶಶಿಕಿರಣ್ ಯಾನೆ ಕಿರಣ್ ಶೆಟ್ಟಿ ಯಾನೆ ರಾಕೇಶ್ ಯಾನೆ ಶಶಿ (32) ಎಂಬಾತನನ್ನು ಕೊನೆಗೂ ಪೊಲೀಸರು ಜೈಲಿಗಟ್ಟಿದ್ದಾರೆ.
ಕುಂದಾಪುರ: ನ್ಯಾಯಾಲಯಗಳಿಂದ 12 ಬಾರಿ ವಾರೆಂಟ್ ನೀಡಿದ್ದರೂ ವಿಚಾರಣೆಗೆ ಹಾಜಾರಾಗದೆ ತಲೆಮರೆಸಿಕೊಂಡಿದ್ದ ಇಲ್ಲಿನ ಗುಲ್ವಾಡಿ ಗ್ರಾಮದ ಸೌಕೂರು ನಿವಾಸಿ ಶಶಾಂಕ್ ಶೆಟ್ಟಿ ಯಾನೆ ಶಶಿಕಿರಣ್ ಯಾನೆ ಕಿರಣ್ ಶೆಟ್ಟಿ ಯಾನೆ ರಾಕೇಶ್ ಯಾನೆ ಶಶಿ (32) ಎಂಬಾತನನ್ನು ಕೊನೆಗೂ ಪೊಲೀಸರು ಜೈಲಿಗಟ್ಟಿದ್ದಾರೆ. ಈತನ ಮೇಲೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 7 ಪ್ರಕರಣಗಳು ಸೇರಿದಂತೆ, ಹೆಬ್ರಿ, ಕೋಟ ಹಾಗೂ ಬೆಂಗಳೂರು ಚಂದ್ರ ಲೇಔಟ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಸುಲಿಗೆ, ಹನಿಟ್ರಾಪ್‌ಗಳಂತಹ ಒಟ್ಟು 11 ಪ್ರಕರಣಗಳು ದಾಖಲಾಗಿವೆ.
ಈತನ ವಿರುದ್ಧ ನ್ಯಾಯಾಲಯವು 12 ಬಾರಿ ವಾರೆಂಟ್ ಹೊರಡಿಸಿದ್ದು, ಈತ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಆದರೇ ಭಾನುವಾರ ಕುಂದಾಪುರ ತಾಲೂಕು ಬಿದ್ಕಲ್ ಕಟ್ಟೆ ಎಂಬಲ್ಲಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ನಾಸೀರ್ ಹುಸೇನ್ ಹಾಗೂ ಚಂದ್ರಕಲಾ ಪತ್ತಾರ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.