ಸರ್ಕಾರಿ ಯೋಜನೆ ಬಳಸಿಕೊಂಡು ಆರ್ಥಿಕ ಸಬಲತೆ ಸಾಧಿಸಿ

| Published : Dec 10 2024, 12:33 AM IST

ಸಾರಾಂಶ

ಹೊಸನಗರ: ಸರ್ಕಾರದ ಯೋಜನೆಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಫಲಾನುಭವಿಗಳು ಸಮಾಜದಲ್ಲಿ ಆರ್ಥಿಕ ಸಬಲತೆ ಸಾಧಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಹೊಸನಗರ: ಸರ್ಕಾರದ ಯೋಜನೆಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಫಲಾನುಭವಿಗಳು ಸಮಾಜದಲ್ಲಿ ಆರ್ಥಿಕ ಸಬಲತೆ ಸಾಧಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ಯಡೂರು ಸಮೀಪದ ಸುಳಗೋಡಿನಲ್ಲಿ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರಿಗೆ ಉಚಿತ ಕಿಟ್ ವಿತರಿಸಿ ಅವರು ಮಾತನಾಡಿದರು.

ಕಾರ್ಮಿಕರು ಎಂದರೆ ಎಲ್ಲಾ ವರ್ಗದವರೂ ಕಟ್ಟಡ ಕಾರ್ಮಿಕರಲ್ಲ. ಈ ಕಿಟ್ ಕೇವಲ ಪ್ಲಂಬರ್, ಗಾರೆ, ಮೇಸ್ತ್ರಿ, ಎಲೆಕ್ಟ್ರಿಶಿಯನ್, ಬಡಗಿ, ಇಟ್ಟಿಗೆ ಹಾಗು ಕಲ್ಲು ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರ ಉಚಿತವಾಗಿ ನೀಡುತ್ತಿದೆ. ಸರ್ಕಾರದ ಯೋಜನೆಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಫಲಾನುಭವಿಗಳು ಸಮಾಜದಲ್ಲಿ ಆರ್ಥಿಕ ಸಬಲತೆ ಸಾಧಿಸಬೇಕೆಂದರು.ಈ ಭಾಗದ ಶಾಶ್ವತ ಕುಡಿಯುವ ನೀರು ಯೋಜನೆಗಾಗಿ 2018-19ರಲ್ಲಿ ಕ್ರಿಯಾ ಯೋಜನೆ ತಯಾರಾಗಿತ್ತು. 2021-2022ರಲ್ಲಿ ಅನುದಾನ ಬಿಡುಗಡೆ ಆಯ್ತು. ಆದರೆ, ಕೊರೋನ ಹಿನ್ನೆಲೆಯಲ್ಲಿ ಯೋಜನೆ ಆರಂಭಕ್ಕೆ ವಿಳಂಬವಾಯ್ತು. ಕಾಮಗಾರಿ ಟೆಂಡರ್ ಆಗಿದ್ದು, ಸುಮಾರು 73 ಲಕ್ಷ ರು. ಯೋಜನೆಯ ಕಾಮಗಾರಿಗೆ ಇಂದು ಚಾಲನೆ ದೊರೆತಿದೆ ಎಂದು ತಿಳಿಸಿದರು.ನಾನು ಶಾಸಕನಾಗಿ ಗಿಣಿಕಲ್ ಸೇತುವೆ, ರಸ್ತೆ , ಮಾಣಿ ಡ್ಯಾಂಗೆ ಸಾಗುವ ಮುಖ್ಯರಸ್ತೆ ನಿರ್ಮಿಸಿದ್ದೇನೆ. ಈ ಹಿಂದೆ ಅನೇಕ ಬಾರಿ ಈ ಭಾಗದಲ್ಲಿ ನಾನು ಡ್ಯಾಂನ ಹಿನ್ನೀರಿನಲ್ಲಿ ತೆಪ್ಪದ ಮೂಲಕ ಪ್ರಯಾಣ ಬೆಳೆಸಿದ್ದೇನೆ. ನನಗೆ ಈ ಭಾಗದ ಜನರ ಬದುಕಿನ ನೋವು ನಲಿವಿನ ಅರಿವಿದೆ. ಯಡೂರು ಹಾಗೂ ಸುಳಗೋಡು ಭಾಗದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 30 ಕೋಟಿ ರು. ಅನುದಾನ ನೀಡಿದ್ದೇನೆ. ಮತದಾರನ ಋಣ ತೀರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದರು.

ವಿರೋಧಿಗಳ ಪ್ರಶ್ನೆಗೆ ಉತ್ತರಿಸಲು ಕಾಮಗಾರಿ ಹಾಗೂ ಅಭಿವೃದ್ಧಿ ಕುರಿತಂತೆ ಕರಪತ್ರ ಮಾಡಿಸಿ ಹಂಚಿದ್ದೇನೆ. ಈ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 3,500 ಕೋಟಿ ರು. ಅನುದಾನ ತಂದಿದ್ದೇನೆ ಎಂದು ತಿಳಿಸಿದರು.ಈ ವೇಳೆ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಬಂಕ್ರಿಬೀಡು ಮಂಜುನಾಥ, ಕಾರ್ಮಿಕ ಇಲಾಖೆ ಅಧಿಕಾರಿ ಶಿಲ್ಪ, ಹಿರಿಯ ಗ್ರಾಮಸ್ಥರಾದ ಯಡೂರು ಭಾಸ್ಕರ ಜೋಯ್ಸ್ ಮೊದಲಾದವರು ಉಪಸ್ಥಿತರಿದ್ದರು.