ಸಾರಾಂಶ
ದೊಡ್ಡಬಳ್ಳಾಪುರ: ಯಾವ ವಿದ್ಯಾರ್ಥಿಯೂ ದಡ್ಡನಲ್ಲ, ಅವರ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದಾಗ ಸಾಧಕರಾಗಿ ಹೊರಹೊಮ್ಮುತ್ತಾರೆ ಎಂದು ತಜ್ಞ ವೈದ್ಯ ಡಾ.ಟಿ.ಎಚ್. ಆಂಜನಪ್ಪ ಹೇಳಿದರು.
ಇಲ್ಲಿಗೆ ಸಮೀಪದ ಆಲೂರು ದುದ್ದನಹಳ್ಳಿಯ ಮಾರುತಿ ವಿದ್ಯಾ ಮಂದಿರ- ಎಂವಿಎಂ ಶಾಲೆಯಲ್ಲಿ ನಡೆದ ಚಿಣ್ಣರ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪ್ರತಿಯೊಬ್ಬ ವ್ಯಕ್ತಿಗೂ ಸರಳ ಆರೋಗ್ಯ ಸೂತ್ರಗಳ ಅರಿವು ಅಗತ್ಯ. ಮಿತ ಆಹಾರ, ಮಿತನಿದ್ರೆ, ಹಿತಕಾರಿ ಆಲೋಚನೆಗಳಿಂದ ವ್ಯಕ್ತಿತ್ವ ವೃದ್ಧಿಯಾಗುತ್ತದೆ. ಆಧುನಿಕತೆ ಹೆಸರಿನಲ್ಲಿ ಬದುಕಿನ ರೀತಿ ನೀತಿಗಳು ಬದಲಾಗುತ್ತಿರುವುದು ವಿಷಾದನೀಯ. ಆರೋಗ್ಯಯುತ ಬದುಕಿಗೆ ವ್ಯಾಯಾಮ, ಯೋಗಾಭ್ಯಾಸದ ಜೊತೆಗೆ ನಡಿಗೆಯನ್ನು ಅಭ್ಯಾಸ ಮಾಡಬೇಕು ಎಂದರು.
ಬೆಂ.ಗ್ರಾ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಬಿ.ಎನ್. ಕೃಷ್ಣಪ್ಪ ಮಾತನಾಡಿ, ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಮೂಲಕ ಭವಿಷ್ಯದ ಆಲೋಚನೆಗಳನ್ನು ಸದೃಢಗೊಳಿಸಬೇಕು. ಮನೆಯ ವಾತಾವರಣ ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದಾರ್ಶನಿಕರ ಆದರ್ಶಗಳನ್ನು ಪ್ರಚುರಪಡಿಸುವುದು ಅಗತ್ಯ. ಮಕ್ಕಳನ್ನು ಸಮಾಜದ ಆಸ್ತಿಯಾಗಿ ಮಾಡಬೇಕು ಎಂದರು.ಬೆಂ.ಗ್ರಾ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ. ರವಿಕಿರಣ್ ಕೆ.ಆರ್ ಮಾತನಾಡಿ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಸೋಲುಗಳನ್ನು ಸಮರ್ಥವಾಗಿ ಎದುರಿಸಿದಾಗ ಗೆಲುವನ್ನು ತಮ್ಮದಾಗಿಸಿಕೊಳ್ಳುವ ವಿಶ್ವಾಸ ಮೂಡುತ್ತದೆ. ವಿದ್ಯಾವಂತಿಕೆಯ ಜೊತೆಗೆ ಪ್ರಜ್ಞಾವಂತಿಕೆ ಹಾಗೂ ಮಾನವೀಯ ಸಂಬಂಧಗಳ ನೆಲೆಯನ್ನು ಭದ್ರಗೊಳಿಸುವುದು ಅಗತ್ಯ ಎಂದು ತಿಳಿಸಿದರು.
ಎಂವಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ನಾಗಾರ್ಜುನ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಪ್ರೊ.ಮನೋಹರ್ ನಾರಜ್ಜಿ, ಎಂವಿಎಂ ಸಂಸ್ಥೆಯ ಕಾರ್ಯದರ್ಶಿ ಗೌರವ್, ಸೀಮಂತ್, ರಾಧಾ ಶ್ರೀನಿವಾಸ್, ಗಿರಿಜಾ ಶ್ರೀನಿವಾಸ್, ಚೈತ್ರ, ತನುಶ್ರೀ, ರಾಘವೇಂದ್ರ, ನಾಗೇಶ್, ಕೃಷ್ಣರಾಮ್ ಮತ್ತಿತರರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗಣ್ಯರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳ ವಿಜೇತರು, ಶೈಕ್ಷಣಿಕ ಸಾಧಕರನ್ನು ಅಭಿನಂದಿಸಲಾಯಿತು.