ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ವಿದ್ಯಾರ್ಥಿಗಳು ಏಕಾಗ್ರತೆ ಮೂಲಕ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಸಾಧಿಸುವ ಹಂಬಲವಿದ್ದರೆ ಗುರಿ ಸಾಧನೆ ಸುಲಭ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು. ನಗರದ ಕೆ.ಕೆ ಆಂಗ್ಲ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕೆ.ಕೆ ಸಂಭ್ರಮ-2024 ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ವಿದ್ಯೆ ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರವು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಯೋಜನೆ ಜಾರಿಗೆ ತರುವ ಮೂಲಕ ಪ್ರತಿ ಮಗುವಿಗೂ ಶಿಕ್ಷಣ ನೀಡುತ್ತಿದೆ.ಗಾಂಧಿನಗರದ ಈ ಶಾಲೆಯು ಕಳೆದ 27 ವರ್ಷಗಳ ಹಿಂದೆ ಕೇವಲ 20 ಮಕ್ಕಳಿಂದ ಆರಂಭವಾಗಿ ಇಂದು ಸುಮಾರು 800 ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಕೇವಲ ಪಠ್ಯಕ್ಕೆ ಸೀಮಿತವಾಗದೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರ್ತಿಸಿ ಪ್ರತಿಭಾ ಕಾರಂಜಿ, ಕ್ರೀಡೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದೆ. ಅಲ್ಲದೆ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದು, ಪಠ್ಯ ಮತ್ತು ಪಠ್ಯೇತರಕ್ಕೆ ಹೆಚ್ಚು ಮಹತ್ವ ಕೊಡುತ್ತಿ ದೆ ಎಂದು ಶಾಲೆಯ ಬಗ್ಗೆ ಪ್ರಶಂಶಿಸಿದರು. ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ಷೇತ್ರದಲ್ಲಿ ಪ್ರತಿಭಾವಂತರಾಗಿ ಬೆಳೆದು ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕೆಂದರು.ಸಂಸ್ಥೆಯ ಕಾರ್ಯದರ್ಶಿ ತನ್ವೀರ್ ಉಲ್ಲಾ ಷರೀಫ್ ಶಾಲೆಯ ಪ್ರಗತಿಯ ಬಗ್ಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸುವ ಆಶಯ ವ್ಯಕ್ತಪಡಿಸುತ್ತಾ ಗಾಂಧಿನಗರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸದಾ ಬದ್ಧರಾಗಿರುವುದಾಗಿ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಜಹರ ಜಬೀನ್ ಮಾತನಾಡಿ, ವಿದ್ಯಾರ್ಥಿಗಳು ಅಭ್ಯಾಸ, ಏಕಾಗ್ರತೆ ಹೆಚ್ಚಿಸಿಕೊಂಡಾಗ ವಿದ್ಯೆ ತಾನಾಗಿಯೇ ಒಲಿಯುತ್ತದೆ. ವಿದ್ಯಾರ್ಥಿಗಳು ವಿನಯಶೀಲರಾಗಿ ಪರಿಶ್ರಮದಿಂದ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಶಿಕ್ಷಣ ಪಡೆದು ದೇಶ ಮತ್ತು ರಾಜ್ಯ ಕಟ್ಟುವ ಶಿಲ್ಪಿಗಳಾಗಬೇಕು. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕ್ರೀಡೆ ಹಾಗೂ ಪ್ರತಿಭಾ ಕಾರಂಜಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಶಾಲೆಯ ಕೆಲ ಶಿಕ್ಷಕರಿಗೆ ಅತ್ತ್ಯತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು, ಎಲ್ಲಾ ಸಹ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಅಪಾರ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿ ಕಾರ್ಯಕ್ರಮ ಮೆರುಗು ಹೆಚ್ಚಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.