ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ವಿದ್ಯಾರ್ಥಿಗಳು ಕಲಿಕೆಯ ಸಮಯ ವ್ಯರ್ಥ ಮಾಡದೆ ನಿರಂತರ ಅಧ್ಯಯನ ಮಾಡಿ ಯಾರೂ ಖದಿಯಲಾರದ ಜ್ಞಾನ ಸಂಪತ್ತು ಸಂಪಾದಿಸಬೇಕು. ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಆತ್ಮವಿಶ್ವಾಸ, ಸಾಧಿಸುವ ಛಲವಿದ್ದರೆ ಸಾಧನೆ ಸುಲಭವಾಗುತ್ತದೆ ಎಂದು ನಿವೃತ್ತ ಅಭಿಯಂತರ ಶ್ರೀಕಾಂತ ಮಾಕಾಣೆ ಹೇಳಿದರು.ಶನಿವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ನೌಕರರ ವಿವಿಧ ಉದ್ದೇಶಗಳ ಸಹಕಾರಿ ಸಂಘದ 21ನೇ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡುವುದರ ಜೊತೆಗೆ ಕ್ರೀಡೆಯಲ್ಲೂ ಭಾಗವಹಿಸಿ ದೈಹಿಕ, ಮಾನಸಿಕ ದೃಢತೆ ಕಾಪಾಡಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವುದು ಒಂದೇ ಮಾನದಂಡವಲ್ಲ. ಭವಿಷ್ಯ ಉಜ್ವಲವಾಗಲು ಒಳ್ಳೆಯ ಮಾರ್ಗದರ್ಶನ, ಆದರ್ಶ ಬದುಕು ಬಹಳ ಮುಖ್ಯ ಎಂದ ಅವರು, ಸರ್ಕಾರಿ ನೌಕರರ ಮಕ್ಕಳ ಸಾಧನೆ ಗುರುತಿಸಿ ಸಹಕಾರಿ ಸಂಘದಿಂದ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಸಾಧಕ ವಿದ್ಯಾರ್ಥಿಗಳಿಗೆ ಮತ್ತಷ್ಟು ಸ್ಫೂರ್ತಿ ತುಂಬುವುದಲ್ಲದೆ, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷನಾಗಿ ತಮ್ಮೆಲ್ಲರ ಪ್ರೀತಿ ವಿಶ್ವಾಸ, ಸಲಹೆ ಮತ್ತು ಸಹಕಾರದೊಂದಿಗೆ ಸದಸ್ಯರ ಹಿತ ಕಾಪಾಡುವುದರ ಜೊತೆಗೆ ಸಂಘವನ್ನು ಪ್ರಗತಿಪಥದಲ್ಲಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದು ಸೇವೆಯಿಂದ ನಿವೃತ್ತಿ ಹೊಂದಿದ್ದು, ಉತ್ತಮ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಪ್ಪ ಮಗದುಮ್ ಮಾತನಾಡಿ, ಸಹಕಾರಿ ಸಂಘ ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಸೌಲಭ್ಯಗಳನ್ನೆಲ್ಲ ಸದಸ್ಯರಿಗೆ ನೀಡುತ್ತಿದ್ದು, ಸಂಪೂರ್ಣ ಡಿಜಿಟಲ್ ಸೇವೆ ಒದಗಿಸುತ್ತಿರುವುದು ಸದಸ್ಯರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿದರು.
ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಚಿದಾನಂದ ಬಡವಗೋಳ ವರದಿ ವಾಚನ ಮಂಡಿಸಿ, ಒಟ್ಟು 1985 ಸದಸ್ಯರನ್ನು ಹೊಂದಿರುವ ಸಂಘವು ₹70.48 ಲಕ್ಷ ಷೇರು ಬಂಡವಾಳ, ₹38.12 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹10.27 ಕೋಟಿ ಸಾಲ ವಿತರಿಸಿದೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಮಗೊಂಡ ಪಾಟೀಲ, ಅಭಿಯಂತರ ವೀರಣ್ಣ ವಾಲಿ, ಅರುಣ ಯಲಗುದ್ರಿ ಮಾತನಾಡಿದರು. ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಅಭಿಯಂತರ ಜಯಾನಂದ ಹಿರೇಮಠ, ಶೇಖರ ಕರಬಸಪ್ಪಗೋಳ, ರಾಮಣ್ಣ ಧರಿಗೌಡರ, ಎಸ್.ಎ. ಮರನೂರ, ಗುರುನಾಥ ಸ್ವಾಮಿ, ಚಂದ್ರಕಾಂತ ಕಾಂಬಳೆ, ರವಿ ಅಂಗಡಿ, ಬೀರಪ್ಪ ಕಡಗಂಚಿ, ಸುಮಿತ್ರಾ ಮಗೇಣ್ಣವರ, ರೇಣುಕಾ ಗಾಣಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ. ಹಿರೇಮಠ ಇತರರು ಇದ್ದರು. ಸುಮಿತ್ರಾ ಮಗೆಣ್ಣವರ ಸ್ವಾಗತಿಸಿದರು. ಎಸ್.ಎ. ಸವದಿ ನಿರೂಪಿಸಿದರು. ಶಿವಗೌಡ ಪಾಟೀಲ ವಂದಿಸಿದರು.