ಸಾರಾಂಶ
ಕಟೀಲು ಭ್ರಮರ ಇಂಚರ ನುಡಿಹಬ್ಬ ಸಮಾರೋಪಕನ್ನಡಪ್ರಭ ವಾರ್ತೆ ಮೂಲ್ಕಿ
ಬೇವಿನ ಮರ ಇದೆ, ಬೆಲ್ಲದ ಮರಗಳಿಲ್ಲ. ಅಂದರೆ ಕಹಿ ಸುಲಭವಾಗಿ ಸಿಗುತ್ತದೆ. ಸಿಹಿ ಸಿಗಬೇಕಿದ್ದರೆ ಕಷ್ಟ ಪಡಬೇಕು. ಕಬ್ಬು ನೆಡಬೇಕು, ನೀರು ಹಾಯಿಸಬೇಕು, ಬೆಳೆಸಬೇಕು. ರಸ ತೆಗೆದು ಕಾಯಿಸಿ, ಕುದಿಸಿ ಬೆಲ್ಲ ತಯಾರಿಸಬೇಕು. ಹಾಗೆಯೇ ಒಳ್ಳೆಯದು ಸುಲಭವಾಗಿ ಸಿಗದು. ಸಾಧನೆಯಿಂದ ಪಡೆಯಬೇಕು ಎಂದು ಕಟೀಲಿನ ನುಡಿಹಬ್ಬ ಸಮ್ಮೇಳನಾಧ್ಯಕ್ಷ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಹೇಳಿದರು.ಮೂರು ದಿನಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ ಭ್ರಮರ ಇಂಚರ ನುಡಿಹಬ್ಬದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾರೋಪದ ನುಡಿಗಳನ್ನಾಡಿದ ಸಾಹಿತಿ ವರದರಾಜ ಚಂದ್ರಗಿರಿ, ಪ್ರಕೃತಿಗೆ ಜೀವ ಸ್ಪಂದಿಸಬೇಕು. ಈ ಸೃಷ್ಟಿಯ ಬೆರಗನ್ನು ಕುತೂಹಲದಿಂದ ನೋಡಬೇಕು. ಮನುಷ್ಯನಿಂದ ಮನುಷ್ಯನ ಮಧ್ಯೆ ಸಂವಹನ ಕೊರತೆ ಉಂಟಾಗುತ್ತಿದೆ. ಮೊಬೈಲು ಮೊಬೈಲು ಮಾತನಾಡುವಂತಾಗಿದೆ. ಕ್ರೌರ್ಯವನ್ನು ಮಕ್ಕಳು ಇಷ್ಟಪಡುತ್ತಾರೆ ಎನ್ನುವುದು ಅಪಾಯಕಾರಿ. ಭಾವನಾತ್ಮಕವಾಗಿ ನಾವೆಷ್ಟು ಗಟ್ಟಿ ಎನ್ನುವುದು ಇವತ್ತು ಮುಖ್ಯವಾಗಿದೆ. ಇದಕ್ಕೆ ಸಾಹಿತ್ಯ ಹಾದಿಯಾಗಿದೆ ಎಂದರು.ದಾಯ್ಜಿವರ್ಲ್ಡ್ ಮೀಡಿಯಾದ ವಾಲ್ಟರ್ ಡಿಸೋಜ ನಂದಳಿಕೆ ಮಾತನಾಡಿ, ಇವತ್ತು ಇತರರೊಂದಿಗೆ ಅಲ್ಲ, ನಮ್ಮೊಂದಿಗೆ ನಾವೇ ಸ್ಪರ್ಧಿಸಬೇಕಾಗಿದೆ. ದೇಶದ ಶಕ್ತಿಯಾಗಿರುವ ಯುವ ಸಮುದಾಯ ಆಡಳಿತ ವ್ಯವಸ್ಥೆಯನ್ನೂ ಬದಲಾಯಿಸುವಷ್ಟು ಶಕ್ತಿಯುತವಾಗಿದೆ ಎಂದರು.
ಸಂಸದ ಬ್ರಿಜೇಶ್ ಚೌಟ, ವೈಭವ್ ವೇದ ಗ್ರೀನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಡಾ. ಎಂ. ನವೀನ್‌ಕುಮಾರ್ ಮಾತನಾಡಿದರು.ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಟೀಲು ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ, ಬೆಂಗಳೂರು ಡಿಜೆಸಿಎಸ್ ಜಂಟಿ ನಿರ್ದೇಶಕ ಜಗದೀಶ ಬಳ್ಳಾಲಬೈಲು ಅವರನ್ನು ಗೌರವಿಸಲಾಯಿತು.
ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ವಿದ್ವಾಂಸ ಡಾ. ಗಣೇಶ ಅಮೀನ್ ಸಂಕಮಾರ್, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ವಿಜಯ್ ವಿ, ಕುಸುಮಾವತಿ, ರಾಜಶೇಖರ್, ಚಂದ್ರಶೇಖರ ಭಟ್, ಗಿರೀಶ್ ತಂತ್ರಿ, ಸರೋಜಿನಿ ಉಪಸ್ಥಿತರಿದ್ದರು.ಹಳೆ ವಿದ್ಯಾರ್ಥಿಗಳ ಸಮಾಗಮ:ಕಟೀಲು ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಸಮಾಗಮ ಕಟೀಲು ನುಡಿಹಬ್ಬದಲ್ಲಿ ನಡೆಯಿತು. ನಿವೃತ್ತ ಶಿಕ್ಷಕರಾದ ಡಾ.ಜಿ.ಎನ್. ಭಟ್, ಉಮೇಶ ರಾವ್ ಎಕ್ಕಾರು, ಜಲಜ ಎಸ್., ಸುಲೋಚನ, ಎಸ್. ಬಾಬಣ್ಣ ಶಿಬರಾಯ ಅವರನ್ನು ಗೌರವಿಸಲಾಯಿತು.
ಸಮ್ಮೇಳನಾಧ್ಯಕ್ಷ ಡಾ. ವಸಂತ ಭಾರದ್ವಾಜ, ನಮ್ಮೆಲ್ಲರ ಶಾಲೆ ಸಂಘಟನೆಯ ಚಂದ್ರಶೇಖರ ಶೆಟ್ಟಿ, ನವಾನಂದ, ಸುನಿತಾ, ಪ್ರಕಾಶ ಕುಕ್ಯಾನ್, ವೃಂದಾ ಹೆಗ್ಡೆ ಮತ್ತಿತರರಿದ್ದರು.;Resize=(128,128))