ಕಠಿಣ ಅಭ್ಯಾಸ ಮತ್ತು ಸತತ ಪರಿಶ್ರಮದಿಂದ ಮಾತ್ರ ಸಾಧಕರಾಗಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಡೂರು: ಕಠಿಣ ಅಭ್ಯಾಸ ಮತ್ತು ಸತತ ಪರಿಶ್ರಮದಿಂದ ಮಾತ್ರ ಸಾಧಕರಾಗಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಡೂರು ಹೊರ ವಲಯದಲ್ಲಿರುವ ಪ್ರಜ್ಞಾ ಸೆಂಟ್ರಲ್ ಶಾಲೆಯಲ್ಲಿ ನಡೆದ ಪ್ರಜ್ಞಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬರಪೀಡಿತ ಕಡೂರಿನಲ್ಲಿ ಬಡವರು ಹೆಚ್ಚಾಗಿರುವ ಮಕ್ಕಳಿಗೂ ಶಿಕ್ಷಣ ಸಿಗಬೇಕೆಂಬ ನಿಟ್ಟಲ್ಲಿ ದೀಕ್ಷಾ ಮತ್ತು ಪ್ರಜ್ಞಾ ಶಾಲೆಗಳನ್ನು ತೆರೆದಿರುವುದರಿಂದ ವಿದ್ಯಾರ್ಥಿಗಳು ಗೌರವಯುತ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.

ಶಿಕ್ಷಣ ತಜ್ಞರೂ ಆಗಿರುವ ಮಂಜುನಾಥ ಪ್ರಸನ್ನ ರಂತಹ ಸಮಾನ ಮನಸ್ಕರು ಸೇರಿ ಈ ಶಾಲೆಗಳನ್ನು ಆರಂಭಿಸಿರುವುದರಿಂದ ತಾಲೂಕಿನ ಸಾವಿರಾರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತಿದ್ದಾರೆ. ಉತ್ತಮ ಬೋಧಕ ವರ್ಗ, ಸಿಬ್ಬಂದಿಗಳಿಂದ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಶಾಲೆಗಳಾಗಿ ಹೊರ ಹೊಮ್ಮಿವೆ ಎಂದರು.

ಪ್ರತಿಭೆ ಯಾರ ಸ್ವತ್ತೂ ಅಲ್ಲ. ಒಬ್ಬೊಬ್ಬರಲ್ಲೂ ಇರುವ ಪ್ರತಿಭೆಯನ್ನು ಹೊರ ತರುವ ನಿಟ್ಟಲ್ಲಿ ಶಿಕ್ಷಕರು ಮತ್ತು ಆಡಳಿತ ಮಂಡಳಿ ಕ್ರಮ ವಹಿಸಿದೆ. ಪೋಷಕರ ಆಶಯದಂತೆ ನಾನು ಕೂಡ ವೈದ್ಯನಾಗದೆ ಶಾಸಕನಾಗಿ ನಿಮ್ಮ ಮುಂದಿದ್ದೇನೆ. ಅಂದು ಕೊಂಡಂತೆ ಗುರಿ ಮುಟ್ಟಲು ಸಾಧ್ಯವಾಗುವ ನಿಟ್ಟಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿಯಿರಿ ಎಂದು ಹೇಳಿ ಶುಭ ಹಾರೈಸಿದರು.

ಪ್ರಜ್ಞಾ ಶಾಲೆಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎನ್.ಪಿ.ಮಂಜುನಾಥ ಪ್ರಸನ್ನ ಮಾತನಾಡಿ, ಬರುವ ದಿನಗಳಲ್ಲಿ ಪ್ರಜ್ಞಾ ಶಾಲೆಯಿಂದ ಪಿಯುಸಿ ಕಾಲೇಜು ತೆರೆಯುವ ಉದ್ದೇಶ ವಿದ್ದು ಈ ಬಗ್ಗೆ ಚಿಂತನೆ ನಡೆದಿದೆ, ಶಾಸಕರು ಹೇಳಿರುವಂತೆ ಕಾಲೇಜು ಆರಂಭಕ್ಕೆ ಅಗತ್ಯವಿರುವ ಸಲಹೆ ಸಹಕಾರ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.

ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪೋಷಕರ ಪರವಾಗಿ ಉಪಸ್ಥಿತರಿದ್ದ ಡಾ ಮನೋಜ್, ಶಿಕ್ಷಕಿ ಕವಿತಾ ಆನಂದ್, ಮಾತನಾಡಿದರು.

ಪ್ರಾಂಶುಪಾಲರಾದ ಶಿಲ್ಪಾ, ನವೀನ್ ಡಿ ಅಲ್ಮೆಡಾ, ಆಡಳಿತ ಮಂಡಳಿಯ ಡಿ.ಪ್ರಶಾಂತ್, ಡಾ.ಶಿವಕುಮಾರ್ , ಪೋಷಕರು ಸೇರಿದಂತೆ ಮತ್ತಿತರರು ಇದ್ದರು.

ಶಾಲಾ ಮಕ್ಕಳಿಂದ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.