ಸಾರಾಂಶ
ಅನಾದಿ ಕಾಲದಿಂದಲೂ ಜನರು ಹಲವಾರು ಕ್ರೀಡಾಕೂಟ ಸ್ಪರ್ಧೆಗಳನ್ನು ಏರ್ಪಡಿಸಿಕೊಂಡು ಬರುತ್ತಿದ್ದಾರೆ. ಪ್ರತಿಯೊಬ್ಬರಿಗೂ ದೈಹಿಕ ಮಾನಸಿಕ ಆರೋಗ್ಯ ಮತ್ತು ಮನರಂಜನೆಗಾಗಿ ಹಾಗೂ ದೈಹಿಕ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವುದಕ್ಕೆ ಕ್ರೀಡೆ ಎಂಬುವುದು ಬಹಳ ಮುಖ್ಯ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪ್ರತಿಯೊಬ್ಬ ಮನುಷ್ಯನಲ್ಲಿಯೂ ಸ್ಪರ್ಧಾತ್ಮಕ ಮನೋಭಾವದ ಜೊತೆಗೆ ಪ್ರತಿಭೆಯೂ ಅಡಗಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡುವುದು ಮುಖ್ಯ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಚಿಕ್ಕಬಳ್ಳಾಪುರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ “ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮನರಂಜನೆಗಾಗಿ ಕ್ರೀಡೆ
ಅನಾದಿ ಕಾಲದಿಂದಲೂ ಜನರು ಹಲವಾರು ಕ್ರೀಡಾಕೂಟ ಸ್ಪರ್ಧೆಗಳನ್ನು ಏರ್ಪಡಿಸಿಕೊಂಡು ಬರುತ್ತಿದ್ದಾರೆ. ಪ್ರತಿಯೊಬ್ಬರಿಗೂ ಮನರಂಜನೆಗಾಗಿ ಹಾಗೂ ದೈಹಿಕ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವುದಕ್ಕೆ ಕ್ರೀಡೆ ಎಂಬುವುದು ಬಹಳ ಮುಖ್ಯ. ಈ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಮಾಡುವುದರ ಮೂಲಕ ದೇಶಕ್ಕೆ ಘನತೆ, ಗೌರವವು ಕ್ರೀಡಾಪಟುಗಳಿಂದ ಸಲ್ಲುತ್ತವೆ ಎಂದರು. ವಿಶ್ವದ ಜನಸಂಖ್ಯೆಯಲ್ಲಿ ಭಾರತ 2ನೇ ಸ್ಥಾನದಲ್ಲಿ ಇದ್ದರು ಸಹ ಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಮನುಷ್ಯನು ದೈಹಿಕ ಸದೃಢವಾಗಿದ್ದರೆ ಮಾನಸಿಕವಾಗಿ ಉತ್ತಮವಾಗಿರುತ್ತಾನೆ. ಆದುದ್ದರಿಂದ ಮಕ್ಕಳಲ್ಲಿ ದೈಹಿಕ ಸಾಮರ್ಥ್ಯದ ಪ್ರತಿಭೆ ಗುರುತಿಸಿ ಅದಕ್ಕೆ ಹೆಚ್ಚು ಒತ್ತನ್ನು ನೀಡಲು ಶಿಕ್ಷಕರು ಶಾಲೆಗಳಲ್ಲಿ ಇರುವ ಕ್ರೀಡಾ ಉಪಕರಣಗಳನ್ನು ಮಕ್ಕಳಿಗೆ ಒದಗಿಸಿ ಉತ್ತೇಜಿಸಬೇಕು ಎಂದು ಹೇಳಿದರು.ಕ್ರೀಡೆಗೆ ಸರ್ಕಾರಿ ಅನುದಾನ
ಪ್ರತಿಭೆ ಪ್ರೋತ್ಸಾಹಿಸುವ ಮೂಲಕ ಪ್ರತಿಭೆಯುಳ್ಳ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರವು ಪ್ರತಿಭೆಗಳನ್ನು ಗುರುತಿಸಿ ಕ್ರೀಡಾಕೂಟಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಅನುದಾನವನ್ನು ನೀಡುತ್ತಿದೆ ಎಂದು ಹೇಳಿದರು.ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಮಾತನಾಡಿ, ಸೋಲು ಮತ್ತು ಗೆಲವು ಸಹಜ ಅದನ್ನು ಕ್ರೀಡಾ ಸ್ಪರ್ಧಿಗಳು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಗಳಲ್ಲಿ ತೊಡಗಿಸಿಕೊಂಡವರಿಗೆ ದೈಹಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ ಹಾಗೂ ಬುದ್ಧಿ ಚುರುಕುಗೊಳ್ಳುತ್ತದೆ. ತಾಲ್ಲೂಕು ದೈಹಿಕ ಶಿಕ್ಷಕರ ಪ್ರೋತ್ಸಾಹದಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಕ್ರೀಡಾ ಸ್ಪರ್ಧಿಗಳು ಅತ್ಯುತ್ತಮ ಸ್ಥಾನಗಳಲ್ಲಿ ವಿಜೇತರಾಗಿ ವಿಭಾಗ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ಬರುವಂತಹ ಕಾರ್ಯವಾಗಬೇಕು ಎಂದು ಆಶಿಸಿದರು.ಎರಡು ದಿನಗಳ ಕ್ರೀಡಾಕೂಟ
ಈ ವೇಳೆ ಜಿಲ್ಲಾ ಮಟ್ಟದ ದಸರಾ ಕ್ರೀಡೆಗಳಿಗೆ ಭಾಗವಹಿಸಿರುವ ವಿದ್ಯಾರ್ಥಿಗಳಿಗೆ ಅಥ್ಲೆಟಿಕ್ಸ್, ವಾಲಿಬಾಲ್, ಖೋ-ಖೋ, ಕಬ್ಬಡ್ಡಿ, ಫುಟ್ ಬಾಲ್, ಬ್ಯಾಸ್ಕೆಟ್ ಬಾಲ್, ಹಾಕಿ, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಕುಸ್ತಿ, ಷಟಲ್ ಬ್ಯಾಡ್ಮಿಂಟನ್, ಹ್ಯಾಂಡ್ ಬಾಲ್, ಥೋಬಾಲ್, ಬಾಲ್ ಬ್ಯಾಡ್ಮಿಂಟನ್, ಯೋಗ, (ನೆಟ್ ಬಾಲ್, ಈಜು ಮತ್ತು ಟೆನ್ನಿಸ್ ಕ್ರೀಡೆಗಳನ್ನು ಜಿಲ್ಲಾ ಮಟ್ಟದಲ್ಲಿ ಸೆಪ್ಟೆಂಬರ್ 24 ರಿಂದ 25 ರವರೆಗೆ ಈ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ. ಹರೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯಿತ್ರಿ, ಜಿಲ್ಲಾ ದೈಹಿಕ ಶಿಕ್ಷಣ ಪರೀವಿಕ್ಷಕ ನಟರಾಜ್, ತಾಲ್ಲೂಕು ದೈಹಿಕ ಶಿಕ್ಷಣ ಪರೀವಿಕ್ಷಕ ಅರುಣ್, ಪ್ರಾಂಶುಪಾಲ ಬಾಲರಾಜು, ತಾಲ್ಲೂಕು ಅಧ್ಯಕ್ಷ ರಮೇಶ್, ಅಂತರಾಷ್ಟ್ರೀಯ ಕ್ರೀಡಾ ಪಟುಗಳಾದ ಮಂಚನಬಲೆ ಶ್ರೀನಿವಾಸ್, ಮಂಜುನಾಥ್, ಸೀನಪ್ಪ, ಹನುಮಂತರಾಯಪ್ಪ,ಫಕ್ರುದ್ದೀನ್ , ರಂಗರಾಮ್,ಮುರಳಿ, ದೈಹಿಕ ಶಿಕ್ಷಕರು, ಸಾರ್ವಜನಿಕರು ಇದ್ದರು.