ಬಾಗಿಲು ತೆಗೆಯದ್ದಕ್ಕೆ ಪ್ರಿಯತಮೆ ಮೇಲೆ ಆ್ಯಸಿಡ್ ದಾಳಿ

| Published : May 29 2024, 12:46 AM IST

ಸಾರಾಂಶ

ವಿವಾಹಿತ ಪ್ರಿಯತಮೆ ಮನೆಯ ಬಾಗಿಲು ತೆರೆಯಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಕಿಟಕಿಯಿಂದ ಆಕೆಗೆ ಆ್ಯಸಿಡ್ ಎರಚಿದ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿಯಲ್ಲಿ ನಡೆದಿದೆ. ಮಹಿಳೆಗೆ ಸುಟ್ಟ ಗಾಯಗಳಾಗಿದ್ದು, ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿವಾಹಿತ ಪ್ರಿಯತಮೆ ಮನೆಯ ಬಾಗಿಲು ತೆರೆಯಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಕಿಟಕಿಯಿಂದ ಆಕೆಗೆ ಆ್ಯಸಿಡ್ ಎರಚಿದ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿಯಲ್ಲಿ ನಡೆದಿದೆ. ಮಹಿಳೆಗೆ ಸುಟ್ಟ ಗಾಯಗಳಾಗಿದ್ದು, ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೂರ್ತಿ ತಯಾರಿಕೆ ಕೆಲಸ ಮಾಡುತ್ತಿರುವ ಮೌನೇಶ ಪತ್ತಾರ ಎಂಬಾತ ಆ್ಯಸಿಡ್‌ ಎರಚಿದ ಆರೋಪಿ. ಇಬ್ಬರೂ ವಿಜಯಪುರದ ಮುರಣಕೇರಿ ಮೂಲದವರಾಗಿದ್ದು, ಇಬ್ಬರಿಗೂ ಬೇರೆಯವರ ಜೊತೆ ವಿವಾಹವಾಗಿತ್ತು. ಆದರೆ, ಪ್ರೇಮಪಾಶದಲ್ಲಿ ಬಿದ್ದಿದ್ದ ಇವರಿಬ್ಬರು ತಮ್ಮ ಸಂಗಾತಿಗಳಿಗೆ ಡಿವೋರ್ಸ್‌ ನೀಡದೆ, ಮನೆ ಬಿಟ್ಟು ಬಂದಿದ್ದರು. ಕೆಲವು ತಿಂಗಳಿನಿಂದ ಗದ್ದನಕೇರಿ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿ ಲಿವಿಂಗ್‌ ಟು ಗೆದರ್‌ನಲ್ಲಿದ್ದರು. ಆದರೆ, ಮೌನೇಶ ತನ್ನ ಪ್ರಿಯತಮೆಯ ಮೇಲೆ ಸಂಶಯಪಡುತ್ತಿದ್ದ. ಈ ವಿಷಯವಾಗಿ ವಾರದ ಹಿಂದೆ ಇಬ್ಬರ ನಡುವೆ ಜಗಳವಾಗಿದ್ದು, ಮೌನೇಶ ಮನೆ ಬಿಟ್ಟು ಹೋಗಿದ್ದ. ಈಕೆ ಕೂಡ ಒಂದು ವಾರದಿಂದ ಆತನ ಮೊಬೈಲ್‌ ನಂಬರ್‌ ನ್ನು ಬ್ಲಾಕ್ ಮಾಡಿದ್ದಳು.

ಈ ಮಧ್ಯೆ, ಮೌನೇಶ, ಸೋಮವಾರ ರಾತ್ರಿ ಬಂದು ಮನೆಯ ಬಾಗಿಲು ಬಡಿದ. ಮಹಿಳೆ ಬಾಗಿಲು ತೆರೆಯದ್ದಕ್ಕೆ ಕೋಪಗೊಂಡು ಕಿಟಕಿಯಿಂದ ಆ್ಯಸಿಡ್ ಎರಚಿದ. ಇದರಿಂದಾಗಿ ಆಕೆಗೆ ಒಂದು ಕಣ್ಣು, ಮುಖ, ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಈಕೆಯ 8 ವರ್ಷದ ಮಗಳಿಗೂ ಅಲ್ಪ ಪ್ರಮಾಣದಲ್ಲಿ ಆ್ಯಸಿಡ್ ಸಿಡಿದಿದೆ.ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದ ಯುವಕತನಗೆ ಕಚ್ಚಿದ ಹಾವನ್ನು ಪ್ಲಾಸ್ಟಿಕ್‌ ಡಬ್ಬಕ್ಕೆ ಹಾಕಿಕೊಂಡು ಯುವಕನೊಬ್ಬ ಜಿಲ್ಲಾಸ್ಪತ್ರೆಗೆ ಬಂದ ಘಟನೆ ಬೆಳಗಾವಿ ನಗರದಲ್ಲಿ ಮಂಗಳವಾರ ನಡೆದಿದೆ.

ಬೆಳಗಾವಿ ತಾಲೂಕಿನ ಹುಂಚಾನಟ್ಟಿ ಗ್ರಾಮದ ಶಾಹಿದ್ ಎಂಬ ಯುವಕನಿಗೆ ಹಾವು ಕಚ್ಚಿದೆ. ಮನೆಗೆ ಬಂದ ಹಾವನ್ನು ಹಿಡಿದು ಊರ ಹೊರಗೆ ಬಿಡಲು ತೆರಳಿದಾಗ ಹಾವು ಬಿಡುವ ಸಂದರ್ಭದಲ್ಲಿ ಅದು ಕಚ್ಚಿದ್ದು, ಅದನ್ನೇ ವಾಪಸ್ ಡಬ್ಬಿಗೆ ಹಾಕಿಕೊಂಡು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದಾನೆ.‌ ಯುವಕ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಪರಿಣಾಮ ಸಿಬ್ಬಂದಿ ಮತ್ತು ಅಲ್ಲಿದ್ದ ಜನ ಕೆಲಕಾಲ ಭಯಭೀತರಾಗಿದ್ದಾರೆ.ಹಾವಿನ ತಳಿ ಹಾಗೂ ವಿಷದ ಪ್ರಮಾಣ ಎಷ್ಟು ದೇಹಕ್ಕೆ ಹೋಗಿದೆ ಎಂದು ತಿಳಿದಿರಲಿಲ್ಲ. ಇದೇ ಕಾರಣಕ್ಕೆ ಹಾವಿನ ಜೊತೆ ಬಂದಿರುವೆ ಎಂದು ಸಮಜಾಯಿಶಿ ನೀಡಿದ್ದಾನೆ.‌ ಯುವಕನಿಗೆ ವೈದ್ಯರು ಚಿಕಿತ್ಸೆ ನೀಡಿದ್ದು, ಆತ ಹಾವಿನೊಂದಿಗೇ ಸ್ನೇಹಿತರ ಬೈಕ್‌ ಏರಿ ವಾಪಸ್ ತೆರಳಿದ್ದಾನೆ.ಪತ್ನಿಯ ಕತ್ತು ಕತ್ತರಿಸಿ ಮಾಂಸದ ಮುದ್ದೆಯನ್ನಾಗಿಸಿದ ಪತಿ

ತನ್ನ ಪತ್ನಿಯ ಕತ್ತು ಕತ್ತರಿಸಿ, ದೇಹದ ಅಂಗಾಂಗಗಳನ್ನು ಚಾಕುವಿನಿಂದ ಸೀಳಿ, ಮಾಂಸದ ಮುದ್ದೆಯನ್ನಾಗಿ ಮಾಡಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗದ ಹೊಸಪೇಟೆಯಲ್ಲಿ ನಡೆದಿದೆ.

ಹುಲಿಯೂರುದುರ್ಗ ಹೋಬಳಿಯ ಸುಗ್ಗನಹಳ್ಳಿ ಗ್ರಾಮದ ಶಿವರಾಮ್ (40) ಕೊಲೆ ಮಾಡಿದ ಆರೋಪಿ. ಹೊಸಪೇಟೆಯಲ್ಲಿರುವ ಬೆಟ್ಟಪ್ಪನ ಸಾಮಿಲ್‌ನಲ್ಲಿ ದಿನಕ್ಕೆ 350 ರು.ಗಳಂತೆ ಕೂಲಿ ಕೆಲಸ ಮಾಡುತ್ತಿದ್ದ. ಕಳೆದ 10 ವರ್ಷದ ಹಿಂದೆ ಶಿವಮೊಗ್ಗ ಮೂಲದ ಪುಷ್ಪ ಎಂಬಾಕೆಯನ್ನು ಮದುವೆಯಾಗಿದ್ದ. ದಂಪತಿಗೆ 8 ವರ್ಷದ ಗಂಡು ಮಗುವಿದೆ.

ಸೋಮವಾರ ರಾತ್ರಿ ಪತಿ-ಪತ್ನಿ ನಡುವೆ ಕೌಟುಂಬಿಕ ವಿಷಯವಾಗಿ ಜಗಳವಾಗಿದೆ. ಈ ವೇಳೆ, ಕೋಪಗೊಂಡ ಆರೋಪಿ, ಮಗನನ್ನು ರೂಮಿನಲ್ಲಿ ಕೂಡಿ ಹಾಕಿ, ಮಲಗಿದ್ದ ಪತ್ನಿಯನ್ನು ಅಡುಗೆ ಮನೆಗೆ ಕರೆ ತಂದು, ಕತ್ತು ಕತ್ತರಿಸಿ, ದೇಹದಿಂದ ಬೇರ್ಪಡಿಸಿ, ನಂತರ ಇತರ ಅಂಗಾಂಗಗಳನ್ನು ಚಾಕುವಿನಿಂದ ಸೀಳಿ, ಭೀಕರವಾಗಿ ಕೊಲೆ ಮಾಡಿದ್ದಾನೆ. ಬಳಿಕ, ತಾನು ಕೆಲಸ ಮಾಡುವ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ. ವಿಷಯ ತಿಳಿದು ಸ್ಥಳಕ್ಕೆ ಬಂದ ಹುಲಿಯೂರುದುರ್ಗ ಪೊಲೀಸರು ಹತ್ಯೆಯ ಭೀಕರತೆ ಕಂಡು ಬೆಚ್ಚಿಬಿದ್ದಿದ್ದಾರೆ.