ವಿವಾಹಿತ ಪ್ರಿಯತಮೆ ಮನೆ ಬಾಗಿಲು ತೆರೆಯಲಿಲ್ಲ ಎಂಬ ಕಾರಣಕ್ಕೆ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ಎರಚಿದ್ದರಿಂದ ಮಹಿಳೆ ಗಾಯಗೊಂಡ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿವಾಹಿತ ಪ್ರಿಯತಮೆ ಮನೆ ಬಾಗಿಲು ತೆರೆಯಲಿಲ್ಲ ಎಂಬ ಕಾರಣಕ್ಕೆ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ಎರಚಿದ್ದರಿಂದ ಮಹಿಳೆ ಗಾಯಗೊಂಡ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ. ಚಿಕಿತ್ಸೆಗಾಗಿ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೌನೇಶ ಪತ್ತಾರ ಆ್ಯಸಿಡ್‌ ಎರಚಿದ ಆರೋಪಿ. ಮೂಲತಃ ಇಬ್ಬರು ವಿಜಯಪುರದ ಮುರಣಕೇರಿ ಮೂಲದವರಾಗಿದ್ದು, ಬೇರೆ ಬೇರೆ ವಿವಾಹ ಆಗಿದ್ದರು. ಮದುವೆಯಾಗಿದ್ದರೂ ಡಿವೋರ್ಸ್‌ ಪಡೆಯದೆ ಲಿವಿಂಗ್‌ ಟು ಗೆದರ್‌ನಲ್ಲಿದ್ದರು. ಕೆಲವು ತಿಂಗಳಿನಿಂದ ಗದ್ದನಕೇರಿ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆಂದು ತಿಳಿದು ಬಂದಿದೆ.ಮೂರ್ತಿ ತಯಾರಿಕೆ ಕೆಲಸ ಮಾಡುವ ಮೌನೇಶ ಬಡಿಗೇರ ಮಹಿಳೆ ಮೇಲೆ ಪದೇ ಪದೆ ಸಂಶಯ ಪಡುವುದಲ್ಲದೆ ಮೇಲಿಂದ ಮೇಲೆ ಜಗಳ ಮಾಡುತ್ತಿದ್ದನೆಂದು ಹೇಳಲಾಗುತ್ತಿದೆ. ಇದರಿಂದ ಬೇಸತ್ತ ಮಹಿಳೆ ಒಂದು ವಾರದಿಂದ ಆತನ ಮೊಬೈಲ್‌ ನಂಬರ್‌ ಬ್ಲಾಕ್ ಮಾಡಿದ್ದಳು. ಅಲ್ಲದೆ, ಮನೆಬಿಟ್ಟು ಹೋಗಿದ್ದ ಮೌನೇಶ ಬಡಿಗೇರ ಸೋಮವಾರ ರಾತ್ರಿ ಬಂದು ಮನೆಯ ಬಾಗಿಲು ಬಡಿದಿದ್ದಾನೆ. ಎಷ್ಟೇ ಬಡಿದರೂ ಮಹಿಳೆ ಬಾಗಿಲು ತೆರೆಯದ್ದರಿಂದ ಕೋಪಗೊಂಡು ಕಿಟಕಿಯಿಂದ ಆ್ಯಸಿಡ್ ಎರಚಿದ್ದಾನೆ ಎಂದು ಹೇಳಲಾಗುತ್ತಿದೆ. ನೀರು ಮಿಶ್ರಿತ ಆ್ಯಸಿಡ್‌ ಆಗಿದ್ದರಿಂದ ಮಹಿಳೆ ಗಂಭೀರ ಗಾಯಗೊಂಡಿಲ್ಲವಾದರೂ ಒಂದು ಕಣ್ಣು, ಮುಖ, ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. 8 ವರ್ಷದ ಮಗಳಿಗೂ ಅಲ್ಪ ಪ್ರಮಾಣದಲ್ಲಿ ಆ್ಯಸಿಡ್ ಸಿಡಿದಿದೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.