ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಕ್ಕೂ ಮುನ್ನ ಕಾಲೇಜು ಆವರಣದೊಳಗಡೆಯಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.ಆ್ಯಸಿಡ್ ಎರಚಿದ ಆರೋಪಿ, ಕೇರಳದ ಮಲಪುರಂ ಜಿಲ್ಲೆಯ ನೆಳಂಬೂರು ನಿವಾಸಿ ಎಂಬಿಎ ವಿದ್ಯಾರ್ಥಿ ಅಬೀನ್ (೨೩) ನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ಮೂವರು ಸಹಪಾಠಿ ವಿದ್ಯಾರ್ಥಿನಿಯರಿಗೆ ಗಾಯವಾಗಿದೆ. ಓರ್ವ ವಿದ್ಯಾರ್ಥಿನಿಗೆ ಹೆಚ್ಚಿನ ಗಾಯವಾಗಿದೆ ಇನ್ನುಳಿದ ಇಬ್ಬರಿಗೆ ಸುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ. ಮೂವರು ಗಾಯಳುಗೂ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ವಿವರ:ಆರೋಪಿ ಅಬೀನ್ ಸೋಮವಾರ ಬೆಳಗ್ಗೆ ಕಡಬ ಕಾಲೇಜಿನ ಸಮವಸ್ತ್ರ ಹೋಲುವ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿ, ಟೋಪಿ, ಮಾಸ್ಕ್ ಧರಿಸಿಕೊಡು ಕಾಲೇಜು ಆವರಣದೊಳಗಡೆ ಆಗಮಿಸಿದ್ದ. ಪರೀಕ್ಷೆಗೆ ಸಿದ್ದರಾಗುತ್ತಿದ್ದ ಇತರ ವಿದ್ಯಾರ್ಥಿಗಳ ಜೊತೆ ಜಗುಲಿಯಲ್ಲಿ ಕುಳಿತುಕೊಂಡಿದ್ದ. ಈ ಪರೀಕ್ಷಾ ಕೇಂದ್ರಕ್ಕೆ ಇತರ ಕಾಲೇಜಿನಿಂದ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬಂದಿರುವುದರಿಂದ ಯಾರು ಕೂಡ ಈತನ ಬಗ್ಗೆ ಅನುಮಾನಗೊಂಡಿರಲಿಲ್ಲ.
ಈತ ಕೂತಿದ್ದ ಜಗುಲಿ ಒಂದು ಭಾಗದಲ್ಲಿ ಈತ ಪ್ರೇಮಿಸುತ್ತಿದ್ದ ಎನ್ನಲಾದ ವಿದ್ಯಾರ್ಥಿನಿ ಇತರ ವಿದ್ಯಾರ್ಥಿನಿಯರ ಜೊತೆ ಕೂತು ಪರೀಕ್ಷೆಯ ಕೊನೆಯ ಕ್ಷಣದಲ್ಲಿ ಓದುತ್ತಾ ಪರೀಕ್ಷಾ ಸಿದ್ಧತೆಯಲ್ಲಿದ್ದಳು. ಈ ವೇಳೆ ಅಬೀನ್ ತನ್ನಲ್ಲಿದ್ದ ಪ್ಲಾಸ್ಟಿಕ್ ಬಾಟಲ್‌ನಲ್ಲಿದ್ದ ಆ್ಯಸಿಡ್‌ನನ್ನು ತಾನು ಪ್ರೇಮಿಸುತ್ತಿದ್ದ ವಿದ್ಯಾರ್ಥಿನಿ ಮೇಲೆ ಎರಚಿದ್ದಾನೆ. ಈಕೆಯ ಜೊತೆಗಿದ್ದ ಇಬ್ಬರು ವಿದ್ಯಾರ್ಥಿನಿರ ಮೇಲೂ ಆಸಿಡ್ ಬಿದ್ದಿದೆ. ಇದೇ ವೇಳೆ ವಿದ್ಯಾರ್ಥಿಗಳು ಚೀರಾಟ ಕೇಳಿ ಕಾಲೇಜಿನ ಒಳಗಡೆ ಕಚೇರಿಯಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್ ಬಿಚ್ಚುತ್ತಿದ್ದ ಪ್ರಾಂಶುಪಾಲರು ಹಾಗು ಉಪನ್ಯಾಸಕರು ಹೊರ ಬಂದಿದ್ದಾರೆ. ಆದಾಗಲೇ ಆರೋಪಿ ಓಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಬೆನ್ನಟ್ಟಿ ಆರೋಪಿಯನ್ನು ಹಿಡಿದು ಕಡಬ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡ ಮೂವರು ವಿದ್ಯಾರ್ಥಿನಿಯರನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಒಂದೇ ಊರಿನವರು:
ಆರೋಪಿಯು ಪ್ರಧಾನ ಸಂತ್ರಸ್ತ ವಿದ್ಯಾರ್ಥಿನಿಯ ತಾಯಿ ಊರಾದ ಮಲಪ್ಪುರಂ ನಿವಾಸಿಯಾಗಿದ್ದ. ಹೀಗಾಗಿ ವಿದ್ಯಾರ್ಥಿನಿಯ ಪರಿಚಯವಾಗಿದೆ. ಕಳೆದ ಎರಡು ವರ್ಷಗಳಿಂದ ಈಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ. ಕಡಿಮೆ ತೀವ್ರತೆಯ ಆ್ಯಸಿಡ್: ಈ ಆ್ಯಸಿಡ್ ಕಡಿಮೆ ಪರಿಣಾಮದ ತೀವ್ರತೆ ಹೊಂದಿದೆ. ಈ ಆ್ಯಸಿಡ್‌ನಿಂದ ಗುಳ್ಳೆಗಳು ಸೃಷ್ಟಿಯಾಗುತ್ತದೆ. ಒಬ್ಬಾಕೆಯ ಮುಖದ ಮೇಲೆ ಆ್ಯಸಿಡ್ ಎರಚಿದ್ದು, ಮುಖ ಭಾಗಶಃ ಹಾಗೂ ಕೈಗೆ ಸುಟ್ಟ ಗಾಯವಾಗಿದೆ. ಇನ್ನುಳಿದ ಇಬ್ಬರು ವಿದ್ಯಾರ್ಥಿನಿಯರಿಗೆ ಆಸಿಡ್ ಸಿಡಿದು ಅಲ್ಪ ಸುಟ್ಟ ಗಾಯವಾಗಿದೆ. ಮೂವರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ. ರಿಷ್ಯಂತ್ ಸಿ.ಬಿ.ತಿಳಿಸಿದ್ದಾರೆ. ಘಟನೆ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಸ್ಥಳಕ್ಕೆ ಪುತ್ತೂರು ಉಪವಿಭಾಗಾಧಿಕಾರಿ ಜೊಬಿನ್ ಮಹಾಪಾತ್ರ, ಪುತ್ತೂರು ಡಿವೈಎಸ್ಪಿ ಅರುಣ್ ನಾಗೇ ಗೌಡ, ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ ಎಸ್, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಕಡಬ ಎಸ್ ಐ ಅಭಿನಂದನ್ ಎಂ.ಎಸ್. ಮೊದಲಾದವರು ಇದ್ದರು.
ಬೆಳಗ್ಗೆ ಗಂಟೆ ೯.೪೫ ಆಸುಪಾಸಿನಲ್ಲಿ ಘಟನೆ ನಡೆದಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಕಾಲೇಜಿನತ್ತ ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿದ್ದಾರೆ. ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಘಟನೆಯನ್ನು ಖಂಡಿಸಿದರು. ---ಸಾಂಗವಾಗಿ ನಡೆದ ಪರೀಕ್ಷೆಸೋಮವಾರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಗಣಿತಶಾಸ್ತ್ರ ಪರೀಕ್ಷೆ ನಡೆಯುತ್ತಿತು. ಘಟನೆ ನಡೆದರೂ ಇನ್ನುಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಸರಾಗವಾಗಿ ನಡೆಯಿತು. ಶಾಲಾ ಆವರಣದಲ್ಲಿ ಘಟನೆ ನಡೆದ ಕಾರಣ ಕೊಠಡಿಯೊಳಗೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರು.ಘಟನೆಯಿಂದ ಯಾರು ವಿಚಲಿತರಾಗಬೇಡಿ. ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ನಿರ್ಭಿತಿಯಿಂದ ಪರೀಕ್ಷೆಯನ್ನು ಎದುರಿಸಿ, ಜೊತೆಗೆ ಪಾಲಕರು ಯಾವೂದೆ ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ಪರೀಕ್ಷೆಗೆಳು ಎಂದಿನಂತೆ ನಡೆಯುತ್ತವೆ ಎಂದು ಸ್ಥಳಕ್ಕೆ ಆಗಮಿಸಿದ ಪದವಿ ಪೂರ್ವ ಶಿಕ್ಷಣ ಇಲಾಖಾ ಉಪನಿರ್ದೇಶಕ ಸಿ.ಡಿ. ಜಯಣ್ಣ ಮಾಧ್ಯಮದ ಮೂಲಕ ವಿನಂತಿಸಿದ್ದಾರೆ.---
ಹೇಳಿಕೆ ಪಡೆದುಕೊಂಡ ಪೊಲೀಸರುವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದ ಬಳಿಕ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಡಿವೈಎಸ್ಪಿ ಅರುಣ್ ನಾಗೇ ಗೌಡ ಸಂವಾದ ನಡೆಸಿದರು. ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ವಶಕ್ಕೆ ಪಡೆದ ಆರೋಪಿತನನ್ನು ತೀವ್ರ ವಿಚಾರಣೆ ನಡೆಸಿ ಸೂಕ್ತ ಕ್ರಮಕೈಗೊಳ್ಳಾಗುವುದು ಎಂದರು. ಪ್ರತ್ಯಕ್ಷದರ್ಶಿ ವಿದ್ಯಾರ್ಥಿಗಳಿಂದ ಘಟನೆಯ ಬಗ್ಗೆ ಪೊಲೀಸರು ಹೇಳಿಕೆ ಪಡೆದುಕೊಂಡರು. ಪ್ರಾಂಶುಪಾಲ ವಾಸುದೇವ ಕೋಲ್ಪೆ ಮತ್ತಿತರರಿದ್ದರು.
-----ಬಾಟಲ್ ವಶಕ್ಕೆ
ಆ್ಯಸಿಡ್ ಎರಚಲು ಬಳಸಿದ ಬಾಟಲಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಆಸಿಡ್ ಎರಚಿದ ವೇಳೆ ವಿದ್ಯಾರ್ಥಿಗಳ ಕೈಯಲ್ಲಿದ್ದ ಪುಸ್ತಕಕ್ಕೆ ಬಿದ್ದ ಕಾರಣ ಪುಸ್ತಕದ ಕೆಲ ಪುಟಗಳು ಕರಟಿ ಹೋಗಿದೆ. ಬ್ಯಾಗುಗಳಿಗೆ ಹಾನಿಯಾಗಿದೆ. ಈ ಎಲ್ಲಾ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.----ಸುಳ್ಯ ಶಾಸಕಿ ಭೇಟಿ
ಸಂತ್ರಸ್ತೆಯರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ನೀಡಿದ ನೀಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.