ಪುತ್ತೂರು ತುಳುಕೂಟದಿಂದ ತುಳುವೆರೆ ಮೇಳೋ-೨೦೨೪

| Published : Mar 05 2024, 01:31 AM IST

ಸಾರಾಂಶ

ಪುತ್ತೂರು ತುಳುಕೂಟದ ವತಿಯಿಂದ ಪುತ್ತೂರು ತಾಲೂಕಿನ ಮಂಜಲ್ಪಡು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಪುತ್ತೂರು ತಾಲೂಕು ತುಳುವೆರೆ ಮೇಳೊ-೨೦೨೪ ನಡೆಯಿತು. ಉದ್ಘಾಟಿಸಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ರಾಜ್ಯ ಎರಡನೇ ಭಾಷೆಯಾದ ಬಳಿಕ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ತುಳು ಪ್ರಾದೇಶಿಕ ಮತ್ತು ವ್ಯವಹಾರಿಕ ಭಾಷೆಯಾಗಿದ್ದು ಜಾತಿ ವರ್ಣ ಪಂಗಡ ಬಿಟ್ಟು ತುಳು ಭಾಷೆ ಮಹತ್ವ ಪಡೆದಿದೆ. ತುಳು ೮ ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನಗಳು ನಡೆಯಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

ಪುತ್ತೂರು ತುಳುಕೂಟದ ವತಿಯಿಂದ ಪುತ್ತೂರು ತಾಲೂಕಿನ ಮಂಜಲ್ಪಡು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ತುಳುವೆರೆ ಮೇಳೊ-೨೦೨೪ನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ತುಳುಭಾಷೆಯ ಬೆಳವಣಿಗೆಗೆ ನಿರಂತರ ಪ್ರಯತ್ನಗಳು ನಡೆಯುತ್ತಿದೆ. ವಿಧಾನ ಸೌಧದ ಒಳಗೂ ತುಳು ಭಾಷೆ ಕೇಳಿಸುತ್ತಿದ್ದು, ರಾಜ್ಯ ಎರಡನೇ ಭಾಷೆಯಾದ ಬಳಿಕ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.

ಕಳಸೆಗೆ ಭತ್ತವನ್ನು ಸುರಿಯುವ ಮೂಲಕ ತುಳು ಸಂಸ್ಕೃತಿಗೆ ಚಾಲನೆ ನೀಡಿ ಮಾತನಾಡಿದ ತುಳುವೆರೆ ಮೇಳೊ ಸಮಿತಿಯ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ತುಳು ೮ನೇ ಪರಿಚ್ಛೇಧಕ್ಕೆ ಸೇರ್ಪಡೆಯಾಗಬೇಕೆಂಬ ನಿಟ್ಟಿನಲ್ಲಿ 25 ವರ್ಷಗಳಿಂದ ಹಲವು ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿದೆ. ಧರ್ಮಸ್ಥಳದ ಹೆಗ್ಗಡೆಯವರು ಮತ್ತು ಒಡಿಯೂರು ಶ್ರೀಗಲಕು ತುಳು ಭಾಷೆ ಬಗ್ಗೆ ಹಲವು ಪ್ರಯತ್ನ ಪಟ್ಟರು. ಆಗ ಅವರ ಹಿಂದೆ ನಾವು ಹೋಗಿದ್ದೆವು. ಇವತ್ತು ಹೆಗ್ಗಡೆಯವರು ರಾಜ್ಯ ಸಭೆ ಸದಸ್ಯರಾಗಿರುವುದು ತುಳು ಭಾಷೆಗೆ ಶಕ್ತಿ ಸಿಕ್ಕಿದೆ. ಇದರ ಜೊತೆಗೆ ವಿಧಾನಪರಿಷತ್ತು ಮತ್ತು ವಿಧಾನಸಭೆಯಲ್ಲೂ ತುಳು ಭಾಷೆ ಕುರಿತು ಉತ್ತಮ ಚರ್ಚೆಯಾಗಿದೆ ಎಂದರು.

ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ. ಸಿ. ಭಂಡಾರಿ, ತುಳುವೆರೆ ಮೇಳೊ ಇದರ ಅಧ್ಯಕ್ಷ ರೆ. ವಿಜಯ ಹಾರ್ವಿನ್, ಪುತ್ತೂರಿನ ವೈದ್ಯ ಡಾ. ಭಾಸ್ಕರ ಎಸ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಶೆಟ್ಟಿ, ನಗರ ಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿದರು.

ತುಳುವೆರೆ ಮೇಳೊ ಸಮಿತಿ ಉಪಾಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ, ಸಂಚಾಲಕ ವೆಂಕಟರಮಣ ಗೌಡ ಕಳುವಾಜೆ, ಉಪಾಧ್ಯಕ್ಷ ಹೀರಾ ಉದಯ್, ಜೊತೆ ಕಾರ್ಯದರ್ಶಿ ಪಿ. ಉಲ್ಲಾಸ್ ಪೈ ಮತ್ತಿತರರು ಇದ್ದರು.

ತುಳು ಭಾಷೆ ವಿಜಯಕುಮಾರ್ ಭಂಡಾರಿ ಹೆಬ್ಬಾರೆಬೈಲು, ತುಳು ನಾಟಕ ಯೂಸುಫ್ ಮಠ ಉಪ್ಪಿನಂಗಡಿ, ತುಳು ಯಕ್ಷಗಾನ ಕೊಳ್ಳಿಗೆ ನಾರಾಯಣ ಗೌಡ, ನಾಟಿ ಔಷಧಿ ಯಮುನಾ ಪೂಜಾರಿ ನರಿಮೊಗರು, ತುಳು ಪಾಡ್ಡನ/ಸಂಧಿ ಗುಬ್ಬಿ ಕೆಮ್ಮಾರ ಪೆರ್ಲಂಪಾಡಿ ಅವರಿಗೆ ‘ಬಿರ್ದ್ ತ ತುಳುವೆರ್ ಪುತ್ತೂರು ತಾಲೂಕು ಪ್ರಶಸ್ತಿ- ೨೦೨೪’ ಪ್ರದಾನ ಮಾಡಲಾಯಿತು.ಪುತ್ತೂರು ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ನಿರೂಪಿಸಿದರು.