ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ವಿಕಸಿತ ಭಾರತದ ಸಾಕಾರಕ್ಕಾಗಿ ಮೋದಿ ಗ್ಯಾರಂಟಿ ಅಭಿಯಾನದ ಮೂಲಕ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲೆಯ ೬ ಕ್ಷೇತ್ರಗಳಿಂದ ಕನಿಷ್ಠ ೬ ಸಾವಿರ ಜನರಿಂದ ಸಂಕಲ್ಪ ಪತ್ರಗಳನ್ನು ಕಳುಹಿಸುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ತಿಳಿಸಿದರು.ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಕಸಿತ ಭಾರತ ಅಭಿಯಾನದಡಿ ಜನ ಅಭಿಪ್ರಾಯ ಸಂಗ್ರಹಣೆ ಅಭಿಯಾನ ಶುರುವಾಗಿದೆ. ಜಿಲ್ಲೆಯಿಂದ ೬ಸಾವಿರ ಜನರಿಂದ ಸಂಕಲ್ಪ ಪತ್ರಗಳನ್ನು ಕಳುಹಿಸುವ ಗುರಿಯನ್ನು ನಾವು ಸಾಕಾರಗೊಳಿಸುತ್ತೇವೆ. ಅಲ್ಲದೇ ೯೦೯೦೯೦೨೦೨೪ನಂಬರ್‌ಗೆ ಮಿಸ್‌ಕಾಲ್ ಮಾಡುವ ಮೂಲಕ ಜನರೇ ನೇರವಾಗಿ ನರೇಂದ್ರ ಮೋದಿಯವರಿಗೆ ಮುಕ್ತವಾಗಿ ಸಲಹೆ ಹಾಗೂ ಅಭಿಪ್ರಾಯ ತಿಳಿಸಬಹುದಾಗಿದೆ ಎಂದರು.
ಬಿಜೆಪಿ ಸಂಕಲ್ಪ ಪತ್ರಕ್ಕಾಗಿ ಜಿಲ್ಲೆಯ ಜನರಿಂದ ಸಲಹೆಗಳ ಸಂಗ್ರಹದ ಮಹಾ ಅಭಿಯಾನ ಆರಂಭವಾಗಿದ್ದು, ಸ್ವಾತಂತ್ರ್ಯ ನಂತರ ಭಾರತದ ಇತಿಹಾಸದಲ್ಲಿ ರಾಜಕೀಯ ಪಕ್ಷಗಳು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪ್ರಣಾಳಿಕೆಗಳನ್ನು ತಯಾರಿಸುತ್ತಿದ್ದವು. ಆದರೆ ನಮ್ಮ ಪ್ರಣಾಳಿಕೆ ಜನರಿಗಾಗಿ, ದೇಶಕ್ಕಾಗಿ, ಜನರೇ ಅಭಿಪ್ರಾಯಿಸುವ ಪ್ರಣಾಳಿಕೆ ರೂಪಿತವಾಗಬೇಕು ಎನ್ನುವುದು ಮೋದಿ ಅವರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷವು ಸಂಕಲ್ಪ ಪತ್ರ ಅಭಿಯಾನವನ್ನು ಆರಂಭಿಸಿದೆ ಎಂದು ಹೇಳಿದರು.ಲೋಕಸಭೆ ಚುನಾವಣೆಗೆ ಹಾವೇರಿ-ಗದಗ ಕ್ಷೇತ್ರದಿಂದ ಅಭ್ಯರ್ಥಿ ಆಯ್ಕೆ ಸಂಬಂಧ ಪಕ್ಷದ ಪ್ರಮುಖರ ಸಭೆ ನಡೆದಿದೆ. ೧೬ ಜನ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯ ಎಲ್ಲರ ಅಭಿಪ್ರಾಯಗಳನ್ನು ರಾಜ್ಯ ಘಟಕಕ್ಕೆ ಕಳುಹಿಸಲಾಗಿದೆ. ಶೀಘ್ರದಲ್ಲಿ ಸಮರ್ಥ ಅಭ್ಯರ್ಥಿ ಘೋಷಣೆ ಆಗಲಿದೆ. ಯಾರೇ ಅಭ್ಯರ್ಥಿಯಾದರೂ ಸಹ ಎಲ್ಲರೂ ಒಂದಾಗಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ತಿಳಿಸಿದರು.ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಜಿಲ್ಲಾ ವಕ್ತಾರ ನಿರಂಜನ ಹೇರೂರ, ಜಿಲ್ಲಾ ಪ್ರಕೋಷ್ಟಗಳ ಸಂಯೋಜಕರಾದ ಕಿರಣಕುಮಾರ ಕೋಣನವರ, ಫಕ್ಕಿರೇಶ ಹಾವನೂರ, ಮಾಧ್ಯಮ ಜಿಲ್ಲಾ ಸಂಚಾಲಕ ವರುಣ ಆನವಟ್ಟಿ ಇದ್ದರು.