ಶಿಕ್ಷಣದ ಜೊತೆ ಕೌಶಲ್ಯ, ಪ್ರತಿಭೆ ರೂಢಿಸಿಕೊಳ್ಳುವುದು ಅಗತ್ಯ: ಡಾ.ವೆಂಕಟರಾಮ್

| Published : Mar 24 2024, 01:34 AM IST

ಶಿಕ್ಷಣದ ಜೊತೆ ಕೌಶಲ್ಯ, ಪ್ರತಿಭೆ ರೂಢಿಸಿಕೊಳ್ಳುವುದು ಅಗತ್ಯ: ಡಾ.ವೆಂಕಟರಾಮ್
Share this Article
  • FB
  • TW
  • Linkdin
  • Email

ಸಾರಾಂಶ

ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಬಿಇಡಿ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಡಾ.ವೆಂಕಟರಾವ್ ಪಲಾಟೆ ಮಾತನಾಡಿ, ಒಳ್ಳೆಯ ಶಿಕ್ಷಕರಾಗುವ ಬಗೆ ವಿವರಿಸಿದರು.

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಶಿಕ್ಷಣದ ಜೊತೆ ಕೌಶಲ್ಯ, ಪ್ರತಿಭೆಯಿರಬೇಕೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಭಾರ ಕುಲ ಸಚಿವ ಡಾ.ವೆಂಕಟರಾವ್ ಪಲಾಟೆ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಕೋಟೆ ರಸ್ತೆಯಲ್ಲಿರುವ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ ಬಿಇಡಿ ಕಾಲೇಜಿನಲ್ಲಿ ನಡೆದ 2023-24 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ, ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯ ಶಿಕ್ಷಕರು ದೇಶದ ಆಸ್ತಿ. ಬಿಇಡಿ ಮುಗಿಸಿದವರಿಗೆ ಆತ್ಮವಿಶ್ವಾಸ ವಿರಬೇಕು. ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟ. ಆದರೆ ಕೌಶಲ್ಯಾಧಾರಿತ ಶಿಕ್ಷಣ ಕೊಡುವುದು ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರದ ಕೆಲಸ. ವೇದಗಳ ಕಾಲದಿಂದಲೂ ಪರಿಪೂರ್ಣ ಶಿಕ್ಷಣಕ್ಕೆ ಬೇರೆ ಬೇರೆ ವ್ಯಾಖ್ಯಾನಗಳಿವೆ. ಬ್ರಿಟೀಷರ ಆಡಳಿತದ ನಂತರ ಆಧುನಿಕ ಶಿಕ್ಷಣ ಸಿಕ್ಕಿದೆ. ಜಾತಿ ಪದ್ದತಿ, ಸತಿ ಸಹಗಮನ ಪದ್ದತಿ ನಿಕೃಷ್ಟ ಕೆಟ್ಟ ಆಚರಣೆ. ಭಾರತದ ಶಿಕ್ಷಣದ ತಳಹದಿ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಿದರು.

ಭಾವನೆಗಳನ್ನು ಹಂಚಿಕೊಳ್ಳಲು ಮಾತೃಭಾಷೆಗಳು ಬೇಕು .ಸಂವಹನಕ್ಕಾಗಿ ಅನಿವಾರ್ಯವಾಗಿ ಇಂಗ್ಲಿಷ್ ಬೇಕು. ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಪಾಠ ಮಾಡುವ ಕೌಶಲ್ಯವಿದ್ದಾಗ ಪರಿಪೂರ್ಣ ಶಿಕ್ಷಕರಾಗುತ್ತೀರಿ. ಪ್ರಶಿಕ್ಷಣಾರ್ಥಿಗಳಾದ ನೀವುಗಳು ಶ್ರಮ ಸಂಸ್ಕøತಿಗೆ ಸೇರಬೇಕು. ಸ್ವಂತಿಕೆ, ಆತ್ಮಸ್ಥೈರ್ಯ ವಿದ್ದಾಗ ಮಾತ್ರ ನಿಮ್ಮ ಜೀವನವನ್ನು ನೀವುಗಳೇ ರೂಪಿಸಿಕೊಳ್ಳಬಹುದು ಎಂದರು.

ದಾವಣಗೆರೆ ವಿಶ್ವವಿದ್ಯಾನಿಲಯ ನಿಕಾಯ ಶಿಕ್ಷಣ ಮುಖ್ಯಸ್ಥ ಡಾ.ಕೆ.ವೆಂಕಟೇಶ್ ಮಾತನಾಡಿ, ಕರ್ತವ್ಯಕ್ಕೆ ತಲೆ ಬಾಗಿದರೆ ನೀವುಗಳು ಯಾರಿಗೂ ತಲೆಬಾಗುವುದು ಬೇಡ. ಬಿಇಡಿ ಮುಗಿಸಿದ ನಂತರ ಉತ್ತಮ ಶಿಕ್ಷಕನಾಗಲು ತರಬೇತಿ ಮುಖ್ಯ. ಪ್ರಶಿಕ್ಷಣಾರ್ಥಿಗಳ ಭಯ ಹೋಗಲಾಡಿಸುವುದಕ್ಕಾಗಿಯೇ ಬಿಇಡಿ ವಿದ್ಯಾರ್ಥಿಗಳಿಗೆ ಮೈಕ್ರೋ ಟೀಚಿಂಗ್ ನೀಡಲಾಗುವುದು. ಶಿಕ್ಷಕರುಗಳಾದ ಮೇಲೆ ಹತ್ತು ಹಲವಾರು ಸಮಸ್ಯೆ, ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಬೋಧನೆಯಲ್ಲಿ ಶ್ರಮ ಹಾಕಿದಾಗ ಮಾತ್ರ ಮಕ್ಕಳ ಮನಸ್ಸಿನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಬಹುದು ಎಂದು ತಿಳಿಸಿದರು.

ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕ ಪ್ರಸನ್ನಕುಮಾರ್ ಎಂ.ಎಸ್ ಮಾತನಾಡಿ, ಆರ್ಥಿಕವಾಗಿ ಸ್ವತಂತ್ರವಾಗಿರಬೇಕು. ಹಣ ಗಳಿಸುವುದು ಎಷ್ಟು ಮುಖ್ಯವೋ ಅದನ್ನು ಹೇಗೆ ಉಳಿತಾಯ ಮಾಡಬೇಕೆನ್ನುವುದು ಕೂಡ ಅಷ್ಟೆ ಮುಖ್ಯ. ದುಡಿಯುವ ವ್ಯಕ್ತಿಗೆ ಜೀವ ವಿಮೆ ಇರಬೇಕು. ಯಾವ ಸಂದರ್ಭದಲ್ಲಿ ಮನುಷ್ಯನ ಆರೋಗ್ಯ ಕೈ ಕೊಡುತ್ತದೆ ಎನ್ನುವುದು ಗೊತ್ತಿಲ್ಲ. ಆಗ ಇಡೀ ಕುಟುಂಬವೇ ಪರಿತಪಿಸಬೇಕಾಗುತ್ತದೆ. ಅನಾವಶ್ಯಕವಾಗಿ ಸಾಲ ಮಾಡಿ ಜೀವನವಿಡಿ ಬಡ್ಡಿ ಕಟ್ಟುವಂತಾಗಬಾರದು. ಇದ್ದುದರಲ್ಲಿಯೇ ತೃಪ್ತಿಪಡುವುದು ಒಳ್ಳೆಯದು ಎಂದು ತಿಳಿಸಿದರು.

ರಾಘವೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್, ಸೀಡ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಹೆಚ್.ಶ್ರೀನಿವಾಸ್, ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಶಾರದಮ್ಮ, ಪ್ರಾಚಾರ್ಯ ಡಾ.ಬಸವರಾಜಪ್ಪ ಎ.ಜಿ, ಹೇಮಾವತಿ ವೇದಿಕೆಯಲ್ಲಿದ್ದರು.