ಲೌಕಿಕ ಜಗತ್ತಲ್ಲಿ ಆಸ್ತಿ ಸಂಪಾದನೆ ಮುಖ್ಯವಲ್ಲ: ಜಡೆ ಮಠದ ಡಾ ಮಹಾಂತ ಮಹಾಸ್ವಾಮಿ

| Published : Mar 29 2024, 12:47 AM IST

ಲೌಕಿಕ ಜಗತ್ತಲ್ಲಿ ಆಸ್ತಿ ಸಂಪಾದನೆ ಮುಖ್ಯವಲ್ಲ: ಜಡೆ ಮಠದ ಡಾ ಮಹಾಂತ ಮಹಾಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದಲ್ಲಿ ನಡೆದ ಶ್ರೀಮಹದೇಶ್ವರ ಜಾತ್ರಾ ಮಹೋತ್ಸವದ ೨ನೇ ದಿನ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಡೆ ಮಠದ ಡಾ ಮಹಾಂತ ಮಹಾಸ್ವಾಮಿ ಆಶೀರ್ವಚನ ನೀಡಿದರು.

ಮಹದೇಶ್ವರ ಜಾತ್ರಾ ಮಹೋತ್ಸವ । 2ನೇ ದಿನದ ಧಾರ್ಮಿಕ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹಾರನಹಳ್ಳಿ

ಈ ನಾಡಿನ ಮಠಗಳು ಜನರಲ್ಲಿ ಜಾಗೃತಿ ಉಂಟು ಮಾಡುವ ಮೂಲಕ ಜ್ಞಾನ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಕಾರ್ಯ ಮಾಡುತ್ತಿವೆ. ಲೌಕಿಕ ಜಗತ್ತಿನಲ್ಲಿ ಆಸ್ತಿ ಸಂಪಾದನೆ ಮುಖ್ಯವಲ್ಲ, ಜ್ಞಾನರತ್ನಗಳು ಮುಖ್ಯವಾಗಿವೆ ಎಂದು ಜಡೆ ಮಠದ ಡಾ ಮಹಾಂತ ಮಹಾಸ್ವಾಮಿ ಹೇಳಿದರು.

ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದಲ್ಲಿ ನಡೆದ ಶ್ರೀಮಹದೇಶ್ವರ ಜಾತ್ರಾ ಮಹೋತ್ಸವದ ೨ನೇ ದಿನ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ಶ್ರೀಮಠ ಭಕ್ತರ ನೋವು ನಲಿವುಗಳಿಗೆ ಸ್ಪಂದಿಸಿ ಪರಿಹಾರ ಸೂಚಿಸುವ ಮೂಲಕ ಕೋಡಿಮಠವು ಭವಿಷ್ಯತ್ತಿನ ಮಠವಾಗಿದೆ ಎಂದರು.

ಪಂಡಿತ್ ಕಲಿನಾಥ ಶಾಸ್ತ್ರಿ ಮಾತನಾಡಿ, ಸನಾತನ ಸಂಸ್ಕೃತಿ ಕೇಂದ್ರಗಳಾದ ಮಠಗಳು ಜನರಲ್ಲಿ ಆಜ್ಞಾನದ ಅಂಧಕಾರದಿಂದ ದೂರ ಮಾಡಿ ಅವರಲ್ಲಿ ಸುಜ್ಞಾನದ ಬೆಳಕಿನ ಜ್ಯೋತಿ ಬೆಳಗಿಸುವ ಕಾರ್ಯಗಳನ್ನು ಮಾಡಬೇಕಾಗಿದೆ. ಪಾಪ, ಪುಣ್ಯ ಧರ್ಮ, ಕರ್ಮದ ಭಯ, ಭೀತಿಗಳು ಇಲ್ಲದ ಜನರಿಂದ ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ, ಆಕ್ರಮ ಚಟುವಟಿಕೆ ಪ್ರಕರಣಗಳು ಹೆಚ್ಚು ನಡೆಯುತ್ತಿವೆ ಎಂದು ವಿಷಾದಿಸಿದರು.

‘ಪುಣ್ಯದ ಫಲವನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ತಿಳಿದು ಜೀವನವನ್ನು ಹಸನು ಮಾಡಿಕೊಳ್ಳುವ ಮೂಲಕ ಪುಣ್ಯದ ಫಲವನ್ನು ಸಂಪಾದಿಸಲು ಎಲ್ಲರೂ ಉತ್ತಮ ಸದ್ಗುಣಗಳನ್ನು ರೂಪಿಸಿಕೊಳ್ಳಬೇಕು. ಕೋಡಿಮಠ ಇಂದು ಜಗತ್ತಿಗೆ ಬೆಳಕು ನೀಡುವ ಮಠವಾಗಿದೆ. ನಾಡಿನ ಎಲ್ಲಾ ಗುರುಗಳು ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಚರಣಕ್ಕೆ ಬಿಳುತ್ತಾರೆ. ಶ್ರೀ ಮಠದಲ್ಲಿ ಇವರು ಅಧಿಕಾರಕ್ಕೆ ಬಂದಾಗ ಶ್ರೀ ಮಠದ ಕಷ್ಟದ ಪರಿಸ್ಥಿತಿ ಇತ್ತು. ಇಂದು ಗುರುಗಳು ಶಿವಯೋಗ ಮಂದಿರ ಇತರ ಮಠಗಳಿಗೆ ದಾನ ಮಾಡುವ ಅಕ್ಷಯ ಪಾತ್ರೆ ಮಠವಾಗಿದೆ’ ಎಂದು ಹೇಳಿದರು.

ಕಡೂರು ಮೂರು ಕಳಸ ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ, ಜಾತ್ರೆ ಅಂದರೆ ಮನಸ್ಸಿನ ಕಲ್ಮಶ, ದುಶ್ಚಟ, ದುರ್ಗುಣ ಬಿಟ್ಬು ಪುಣ್ಯ ಫಲಗಳನ್ನು ಪಡೆದುಕೊಂಡು ಹೋಗುವ ಸಂದೇಶ ನೀಡುತ್ತದೆ. ಇಂದು ದೇವರ ಹೆಸರಿನಲ್ಲಿ ಕೆಟ್ಟ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು ಪುಣ್ಯ ಕಾರ್ಯವನ್ನು ಮಾಡಿ ಜೀವನವನ್ನು ಸಾರ್ಧಕಪಡಿಸಿಕೊಳ್ಳಬೇದು ಎಂದರು.

ಹಿರೇನಲ್ಲೂರಿನ ಕಾಶಿನಾಥ್ ಮಾತನಾಡಿ, ಧರ್ಮದ ಆಚರಣೆಗೆ ಹೆಚ್ಚು ಒತ್ತು ನೀಡುವ ಕಾರಣ ಈ ದೇಶವನ್ನು ಜನನಿ ಭಾರತ ಎಂದು ಕರೆಯಲಾಗುತ್ತಿದೆ. ಇಲ್ಲಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಎಲ್ಲೆಡೆಗಳಲ್ಲಿ ಗೌರವಿಸಲಾಗುತ್ತಿದೆ. ಅಂತೆಯೇ ಶ್ರೀಕೋಡಿಮಠ ಭವಿಷ್ಯವನ್ನು ಹೇಳುವ ಜತೆಗೆ ಸಾಮಾಜಿಕ ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಮುಂದಿನ ಯುವಜನಾಂಗದ ಭವಿಷ್ಯ ರೂಪಿಸುವ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ಪೂರ್ವಜನ್ಮದ ಪುಣ್ಯದ ಫಲಗಳಿಂದ ಈ ಜನ್ಮದಲ್ಲಿ ಯೋಗ ಮತ್ತು ಯೋಗ್ಯತೆಗಳು ಮನುಷ್ಯನಿಗೆ ಲಭ್ಯವಾಗುತ್ತದೆ. ಬದುಕಿದ್ದಾಗ ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ. ಸಮಾಜದಲ್ಲಿ ತಂದೆ, ತಾಯಿ, ಗುರು ಹಿರಿಯರಿಗೆ ಗೌರವ ನೀಡಿ ಸಜ್ಜನರಾಗಿ ಬದುಕುವ ಮೂಲಕ ಜೀವನದ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು.

ಶ್ರೀ ಮಠದಲ್ಲಿ ಭಜನೆ ಮಾಡಿದ ಕಲಾತಂಡಗಳಿಗೆ ಹಾರ ಕಾಣಿಕೆ ನೀಡಿ ಸನ್ಮಾನ ಮಾಡಲಾಯಿತು.

ಚಿಕ್ಕಮಗಳೂರಿನ ಜಯಮೃತ್ಯುಂಜಯ ಮಹಾಸ್ವಾಮಿ, ಯಲ್ಲಮ್ಮ ಚನ್ನಕೇಶವಸ್ವಾಮಿ, ಡಾ ಮಲ್ಲಪ್ಪ, ಇತರ ಗಣ್ಯರು ಉಪಸ್ಥಿತರಿದ್ದರು. ಎಚ್.ಪಿ. ಬಸವಲಿಂಗಪ್ಪ, ಶ್ರೀ ಮಠದ ಏಜೆಂಟ್‌ ಮಹಾದೇವಪ್ಪ, ಶ್ರೀ ಮಠದ ಕಾಲೇಜಿನ ಸಿಬ್ಬಂದಿ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡಿದರು.ಕೋಡಿಮಠದ ಮಹದೇಶ್ವರ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಂಡಿತ್ ಕಲಿನಾಥ ಶಾಸ್ತ್ರಿ ಮಾತನಾಡಿದರು.