ಸಾರಾಂಶ
ಡೆಂಘೀ ಜ್ವರ ನಿಯಂತ್ರಣ ಕುರಿತು ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಪ್ರಸ್ತುತ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಯಂತ್ರಣದಲ್ಲಿ ಕೋವಿಡ್ ಸಮಯದಂತೆ ಆರೋಗ್ಯ ತುರ್ತುಪರಿಸ್ಥಿತಿ ಎಂದು ಪರಿಗಣಿಸಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಡೆಂಘೀ ಹರಡದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಡೆಂಘೀ ಜ್ವರ ನಿಯಂತ್ರಣ ಕುರಿತು ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಡೆಂಘೀ ಜ್ವರಕ್ಕೆ ನಿರ್ದಿಷ್ಟ ಔಷಧಿಗಳಿಲ್ಲ. ರೋಗಲಕ್ಷಣ ಆಧಾರಿತ ಚಿಕಿತ್ಸೆ, ಔಷಧೋಪಚಾರದ ಮೂಲಕ ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಕೋವಿಡ್ ಸಮಯದಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಆದ್ದರಿಂದ ಈಗಲೂ ಕೂಡ ಕೋವಿಡ್ ಸಮಯದಲ್ಲಿ ಕಾರ್ಯನಿರ್ವಹಿಸಿದಂತೆ ಆರೋಗ್ಯ ತುರ್ತುಪರಿಸ್ಥಿತಿ ಎಂದು ಪರಿಗಣಿಸಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಡೆಂಘೀ ಜ್ವರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಡೆಂಘೀ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಡೆಂಘೀ ಉಂಟಾಗುವಿಕೆ ಮತ್ತು ಹರಡುವಿಕೆಗೆ ಮುಖ್ಯ ಕಾರಣವಾಗುವ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸುವ ಕೆಲಸ ಮೊದಲು ಆಗಬೇಕು. ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ, ತೆರೆದ ಸಂಗ್ರಾಹಕಗಳಲ್ಲಿ ನೀರು ಸಂಗ್ರಹಣೆ ಮಾಡದಂತೆ, ಮನೆಯಲ್ಲಿ ಸೊಳ್ಳೆ ಪರದೆ, ಸೊಳ್ಳೆ ಸಿಂಪಡಕಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳಿಂದ ನಿಗದಿತ ವೇಳಾಪಟ್ಟಿ ಹಾಗೂ ನಿರ್ದಿಷ್ಟ ಸಮಯದಂತೆ ಮನೆ ಮನೆಗೆ ತೆರಳಿ ಸೊಳ್ಳೆ ನಿವಾರಕ ದ್ರಾವಣವನ್ನು ಸಿಂಪಡಿಸಬೇಕು. ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಕಿಟಕಿಗಳಿಗೆ ಮೆಶ್‌ಗಳನ್ನು ಅಳವಡಿಸಬೇಕು. ವಿದ್ಯಾರ್ಥಿಗಳಿಗೆ ಪೂರ್ಣ ಮೈ ಮುಚ್ಚುವ ಬಟ್ಟೆ ಧರಿಸುವಂತೆ ತಿಳಿಸಬೇಕು. ವಸತಿ ನಿಲಯಗಳಿಂದ ಒಡೋಮಾಸ್ ಒದಗಿಸಬೇಕು. ವಸತಿ ನಿಲಯ, ಶಾಲೆಗಳಲ್ಲಿ ನೀರು ಸಂಗ್ರಾಹಕಗಳಿದ್ದರೆ ಅವುಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡಬೇಕು. ಈ ಮೀನುಗಳು ಲಾರ್ವಾಗಳನ್ನೇ ಸೇವಿಸುವುದರಿಂದ ಸೊಳ್ಳೆಗಳ ಉತ್ಪತ್ತಿ ಮತ್ತು ಬೆಳವಣಿಗೆಯನ್ನು ನಿಯಂತ್ರಿಸುತ್ತವೆ. ಸಾಧ್ಯವಿದ್ದಲ್ಲಿ ಸಾರ್ವಜನಿಕರ ಮನೆಗಳಲ್ಲಿಯೂ ಲಾರ್ವಾಹಾರಿ ಮೀನುಗಳನ್ನು ಬಳಸಬಹುದು ಎಂದು ಅವರು ತಿಳಿಸಿದರು.ಮಕ್ಕಳು, ವಯಸ್ಕರು ಅಥವಾ ವಯೋವೃದ್ದರು ಎಂಬ ಭೇದವಿಲ್ಲದೆ ಡೆಂಘೀ ತೀವ್ರವಾಗಿ ಹರಡುವುದರಿಂದ ರೋಗಲಕ್ಷಣಗಳ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ನಿರಂತರ ಹಾಗೂ ತೀವ್ರ ಜ್ವರ, ತಲೆಸುತ್ತು, ವಾಂತಿಯಂತಹ ಡೆಂಘೀ ಜ್ವರದ ಲಕ್ಷಣಗಳು ಕಂಡುಬಂದ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಸೂಕ್ತ ತಪಾಸಣೆ ಮಾಡಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ದಿಢೀರ್ ಕುಸಿದು, ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ವಸಡುಗಳಲ್ಲಿ ರಕ್ತಸ್ರಾವ, ಕಡಿಮೆ ರಕ್ತದೊತ್ತಡ, ಅಂಗಾಂಗ ವೈಫಲ್ಯ ಕೂಡ ಸಂಭವಿಸಬಹುದು. ಆದ್ದರಿಂದ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಿ, ಮನೆಯ ಹಾಗೂ ಸುತ್ತಲಿನ ವಾತಾವರಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.ಇದೇ ಸಂದರ್ಭ ಜಿಲ್ಲಾ ಏಡ್ಸ್ ನಿಯಂತ್ರಣ, ಜಿಲ್ಲಾ ಗುಣಮಟ್ಟ ಭರವಸೆ ಸಮಿತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ., ಡಿಎಸ್‌ಒ ಡಾ. ನಂದಕುಮಾರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ ಎಂ.ಎಚ್., ಡಿಟಿಒ ಡಾ. ಶಶಿಧರ ಎ., ಡಿಎಲ್‌ಒ ಡಾ.ಪ್ರಕಾಶ ಎಚ್. ಸಿಎಂಒ ಡಾ. ಈಶ್ವರ ಸವಡಿ, ಕಿಮ್ಸ್ ಎಚ್‌ಒಡಿ ಡಾ. ನಾರಾಯಣ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಇತರರಿದ್ದರು.131 ಡೆಂಘೀ ಜ್ವರ ಪ್ರಕರಣಗಳು ದೃಢ:
2024ರ ಜುಲೈ ಮಾಹೆಯವರೆಗಿನ ಡೆಂಘೀ 2024ನೇ ಸಾಲಿನಲ್ಲಿ ಜುಲೈವರೆಗೂ ಜಿಲ್ಲೆಯಾದ್ಯಂತ 2,435 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 131 ಡೆಂಘೀ ಜ್ವರ ಪ್ರಕರಣಗಳು ದೃಢಪಟ್ಟಿವೆ. ಚಿಕುನ್‌ಗುನ್ಯಾಗೆ ಸಂಬಂಧಿಸಿದಂತೆ 411 ಮಾದರಿ ಸಂಗ್ರಹಿಸಲಾಗಿದ್ದು, 10 ಪ್ರಕರಣಗಳು ದೃಢಪಟ್ಟಿವೆ. ತಾಲೂಕುವಾರು ದತ್ತಾಂಶ ಸಂಗ್ರಹದಲ್ಲಿ ಜುಲೈ ಮಾಹೆಯವರೆಗೂ ಕೊಪ್ಪಳ ತಾಲೂಕಿನಲ್ಲಿ 1,477 ಮಾದರಿ ಸಂಗ್ರಹ ಪರೀಕ್ಷೆಯಲ್ಲಿ 50 ಪ್ರಕರಣಗಳು, ಗಂಗಾವತಿ ತಾಲೂಕಿನಲ್ಲಿ 208 ಮಾದರಿಗಳಲ್ಲಿ 33 ಪ್ರಕರಣಗಳು, ಕುಷ್ಟಗಿ ತಾಲೂಕಿನಲ್ಲಿ 288 ಮಾದರಿಗಳಲ್ಲಿ 11 ಪ್ರಕರಣಗಳು, ಯಲಬುರ್ಗಾ ತಾಲೂಕಿನಲ್ಲಿ 462 ಮಾದರಿಗಳಲ್ಲಿ 37 ಡೆಂಘೀ ಪ್ರಕರಣಗಳು ದೃಢಪಟ್ಟಿವೆ. ಚಿಕುನ್‌ಗುನ್ಯಾಗೆ ಸಂಬಂಧಿಸಿದಂತೆ ಕೊಪ್ಪಳ ತಾಲೂಕಿನಲ್ಲಿ 238 ಮಾದರಿ ಸಂಗ್ರಹ ಪರೀಕ್ಷೆಯಲ್ಲಿ 5 ಪ್ರಕರಣಗಳು, ಗಂಗಾವತಿ ತಾಲೂಕಿನಲ್ಲಿ 51 ಮಾದರಿಗಳಲ್ಲಿ 1 ಪ್ರಕರಣ, ಕುಷ್ಟಗಿ ತಾಲೂಕಿನಲ್ಲಿ 29 ಮಾದರಿಗಳಲ್ಲಿ 4 ಪ್ರಕರಣಗಳು ದೃಢಪಟ್ಟಿವೆ. ಯಲಬುರ್ಗಾ ತಾಲೂಕಿನಲ್ಲಿ 93 ಮಾದರಿಗಳ ಸಂಗ್ರಹವನ್ನು ಪರೀಕ್ಷೆ ಮಾಡಲಾಗಿದ್ದು, ಯಾವುದೇ ಪ್ರಕರಣ ದೃಢಪಟ್ಟಿಲ್ಲ. ಜಿಲ್ಲೆಯಾದ್ಯಂತ ಒಟ್ಟು 41 ಚಿಕುನ್‌ಗುನ್ಯಾ ಮಾದರಿ ಸಂಗ್ರಹ ಪರೀಕ್ಷೆಯಲ್ಲಿ 10 ಪ್ರಕರಣಗಳು ದೃಢಪಟ್ಟಿವೆ ಎಂದು ಡಾ. ವೆಂಕಟೇಶ್ ಮಾಹಿತಿ ನೀಡಿದರು.