ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸಿ: ಅಶೋಕ್‌ ಭಟ್‌

| Published : Jun 27 2024, 01:00 AM IST

ಸಾರಾಂಶ

ಜು. 2ರಂದು ಬೆಳಗ್ಗೆ 10.30ಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆಯನ್ನು ಕರೆಯಲಾಗಿದೆ.

ಯಲ್ಲಾಪುರ: ಸರ್ಕಾರದ ನಿರ್ದೇಶದಂತೆ ಜನರ ಕಾರ್ಯವನ್ನು ಮಾಡಬೇಕು. ಪ್ರಾಮಾಣಿಕ ಕರ್ತವ್ಯ ಮತ್ತು ದಕ್ಷತೆ ಮತ್ತು ನಿಯತ್ತಿನಿಂದ ಶಿಸ್ತುಬದ್ಧವಾಗಿ ಮಾಡಬೇಕು. ಜನರ ಬೇಕು- ಬೇಡಗಳನ್ನು ಶೀಘ್ರದಲ್ಲಿ ಶೋಷಣೆ ಮಾಡದೆ ಸಹಾಯ ನೀಡಬೇಕು ಎಂದು ನೂತನ ತಹಸೀಲ್ದಾರ್ ಅಶೋಕ್ ಭಟ್ ತಿಳಿಸಿದರು.ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಕಚೇರಿಯಲ್ಲಿ ಶಿಸ್ತು ಮತ್ತು ಜನರ ಸೇವೆಗೆ ಮಹತ್ವ ನೀಡುವಂತೆ ಸೂಚಿಸಿದ್ದೇನೆ. ಆ ನಿಟ್ಟಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಜಾರಿ ಮಾಡುವಂತೆ ತಿಳಿಸಿದ್ದೇನೆ. ಅಲ್ಲದೆ ಪ್ರತಿಯೊಬ್ಬ ಅಧಿಕಾರಿಂದ ಹಿಡಿದು ಗ್ರಾಮ ಆಡಳಿತಾಧಿಕಾರಿಯಿಂದ ಎಲ್ಲರೂ ಐಡಿಯನ್ನು ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು. ಜು. 2ರಂದು ಬೆಳಗ್ಗೆ 10.30ಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆಯನ್ನು ಕರೆಯಲಾಗಿದೆ. ಜನರು ತಮ್ಮ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದು. ಐಪಿಜಿಆರ್‌ಎಸ್ ತಂತ್ರಾಂಶದಿಂದ ಎಲ್ಲ ಕಾರ್ಯಗಳನ್ನು ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಅಹವಾಲನ್ನು ತೋಡಿಕೊಳ್ಳಬಹುದು ಎಂದರು.ಪ್ರತಿಯೊಬ್ಬ ಪಹಣಿ ಪತ್ರಿಕೆ ಉಳ್ಳವರು ಸರ್ಕಾರದ ನಿರ್ದೇಶನದಂತೆ ಆಧಾರ್ ಲಿಂಕ್ ಮಾಡಲೇಬೇಕಾಗುತ್ತದೆ. ಜು. 15ರೊಳಗೆ ತಾಲೂಕಿನ ಎಲ್ಲರ ಆಧಾರ್ ಲಿಂಕ್ ಮಾಡುವ ಬಗ್ಗೆ ತ್ವರಿತವಾಗಿ ಕಾರ್ಯಪ್ರವೃತ್ತರಾಗಿದ್ದೇವೆ. ಪ್ರಸ್ತುತ ಮಳೆಗಾಲ ಪ್ರಾರಂಭವಾಗಿದೆ. ಅತಿವೃಷ್ಟಿಯಿಂದ ಅನಾಹುತವಾದಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ಇಲಾಖೆ ಸಿದ್ಧವಾಗಿದೆ. ಅಲ್ಲದೆ ಗುಳ್ಳಾಪುರ ಮತ್ತು ಕಣ್ಣಿಗೆರಿಗಳಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ.

ಪ್ರತಿದಿನ ಬೆಳಗ್ಗೆ 9.30 ರೊಳಗೆ ಕಂದಾಯ ನಿರೀಕ್ಷಕರು ತಾಲೂಕಿನಲ್ಲಿ ಆದ ಹಾನಿಯ ಸಮಗ್ರ ಮಾಹಿತಿಯನ್ನು ನನಗೆ ಒಪ್ಪಿಸುವಂತೆ ತಿಳಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿ.ಜಿ. ನಾಯಕ್ ಉಪಸ್ಥಿತರಿದ್ದರು.