ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ಮೊದಲನೇ ಸ್ಥಾನಕ್ಕೆ ಬರಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ಚಂದ್ರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮುಖೇನ ಅರ್ಹರೆಲ್ಲರಿಗೂ ಸೌಲಭ್ಯ ತಲುಪಿಸಬೇಕು. ಫಲಾನುಭವಿಗಳು ಯೋಜನೆಯ ಪ್ರಯೋಜನ ಬಡ ಜನತೆಗೆ ತಲುಪಿಲ್ಲ ಎಂಬ ದೂರುಗಳು ಬರಬಾರದು. ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಮುಟ್ಟಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ ಎಂದರು.ಪ್ರತಿ ಯೋಜನೆಯ ಪ್ರಗತಿ ವಿವರ ಪಡೆದ ಅಧ್ಯಕ್ಷರು ಅನುಷ್ಠಾನದಲ್ಲಿ ಯಾವುದಾರೂ ತೊಂದರೆಗಳು ಕಂಡು ಬಂದರೆ ಕೂಡಲೇ ಅಧಿಕಾರಿಗಳು ಪರಿಹರಿಸಬೇಕು. ಬ್ಯಾಂಕುಗಳಲ್ಲಿ ಫಲಾನುಭವಿಗಳು ಹಣ ಪಡೆಯಲು ಇರುವ ತೊಡಕುಗಳನ್ನು ನಿವಾರಣೆ ಮಾಡಬೇಕು. ಆಧಾರ್, ಮೊಬೈಲ್ ನಂಬರ್ ಜೋಡಣೆ ಮಾಡದಿರುವ ಕಾರಣಗಳಿಗೆ ಸೌಲಭ್ಯ ವಂಚಿತವಾಗಬಾರದು ಎಂದು ಹೇಳಿದರು.
ಅನ್ನಭಾಗ್ಯದಂತಹ ಮಹತ್ತರ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಬೇಕು. ಪಡಿತರ ಚೀಟಿದಾರರಿಗೆ ಡಿಬಿಟಿ ಹಣ ಹೊಂದಾಣಿಕೆಯಾಗದೆ ಇದ್ದಲ್ಲಿ ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ತೊಂದರೆಗಳನ್ನು ಪರಿಹರಿಸಬೇಕು. ತಾಲೂಕು ಮಟ್ಟದಲ್ಲಿಯೂ ತ್ವರಿತ ಸ್ಪಂದನೆ ಸಿಗಬೇಕು ಎಂದು ಸೂಚಿಸಿದರು.ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಬಾಕಿ ಇರುವವರನ್ನು ಸೇರ್ಪಡೆ ಮಾಡುವ ಕಾರ್ಯದಲ್ಲಿ ಇನ್ನಷ್ಟು ಪ್ರಗತಿಯಾಗಬೇಕಿದೆ. ನೋಂದಣಿ ಮಾಡಿಸಲು ಬಾಕಿ ಇರುವ ಫಲಾನುಭವಿಗಳ ಮಾಹಿತಿಯನ್ನು ಪಡೆದು ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದು ಶೇ. 100ರಷ್ಟು ಅರ್ಹರೆಲ್ಲರಿಗೂ ನೋಂದಣಿಯಾಗುವಂತೆ ಕ್ರಮವಹಿಸಿ, ಬ್ಯಾಂಕ್ ಖಾತೆಗಳು ಚಾಲ್ತಿಯಿಲ್ಲದ್ದ ಫಲಾನುಭವಿಗಳ ವಿವರಗಳನ್ನು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನೀಡಿ ಸೌಲಭ್ಯ ತಲುಪಿಸಿ ಎಂದರು.
ಗೃಹಜ್ಯೋತಿ, ಯುವನಿಧಿ, ಶಕ್ತಿ ಯೋಜನೆಗಳ ಪ್ರಗತಿ ಪರಾಮರ್ಶಿಸಿ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜನರನ್ನು ತಲುಪಲಿ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಲಹೆಗಳನ್ನು ಪಡೆದು ಯೋಜನೆಗಳ ಪ್ರಗತಿಯಲ್ಲಿ ಸಾಗಲು ಮುಂದಾಗುವಂತೆ ತಿಳಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗೀತಾ ಹುಡೇದ ಮಾತನಾಡಿ, ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ತೊಡಗಿಕೊಳ್ಳಬೇಕು. ಫಲಾನುಭವಿಗಳಿಂದ ಬರುವ ಅಹವಾಲು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು. ಸರ್ಕಾರದ ಯೋಜನೆಗಳ ಉದ್ದೇಶ ಫಲಪ್ರದವಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದರು.
ಇದೇ ವೇಳೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಸದಸ್ಯರು ಯೋಜನೆಗಳ ಪ್ರಗತಿ ಪರಿಶೀಲಿಸಿದರು.